ಕಂಬಳದ ಕೋಣಗಳ ಬಗೆಗಿನ ಇಂಟರೆಸ್ಟಿಂಗ್ ವಿಷಯಗಳು : ಹೊಸ ಕನ್ನಡದ ಓದುಗರಿಗೆ ಮಾತ್ರ !

ಉಪ್ಪಿನಂಗಡಿ ಕಂಬಳ ಆರಂಭವಾಗಿದೆ. ಕಂಬಳದ ಕೋಣಗಳು ತಮ್ಮ ಸಿಕ್ಸ್ ಪ್ಯಾಕ್ ಮೈಯನ್ನು ಮೈ ಹುರಿಗೊಳಿಸುತ್ತಿವೆ.

ಕೋಣಗಳಿಗೆ ಇನ್ನೇನು ಕಂಬಳ ದಿನಗಳ ದೂರದಲ್ಲಿದೆ ಎಂದು ಪಕ್ಕ ಕನ್ಫರ್ಮ್ ಆಗಿ ಗೊತ್ತಾಗಿ ಬಿಡುತ್ತದೆ. ಆಗ ಕಂಬಳಕ್ಕಾಗಿ ಕೋಣಗಳು ಮಾನಸಿಕವಾಗಿ ತಯಾರಾಗಿ ನಿಲ್ಲುತ್ತವೆ.

ಕಂಬಳದ ಕೋಣಗಳಿಗೆ ಕಂಬಳ ಇದೆ ಅಂತ ಮೊದಲೇ ಗೊತ್ತಾಗುತ್ತದಾ ?

ಹೌದು, ಕೋಣಗಳು ಕೂಡ ಮನುಷ್ಯನಂತೆ ಯೋಚಿಸಬಲ್ಲವು. ಅವು ಕೂಡ ತಮ್ಮ ಸುತ್ತಮುತ್ತಲು ನಡೆಯುತ್ತಿರುವ ಘಟನಾವಳಿಗಳನ್ನು ರಿಲೇಟ್ ಮಾಡಿ ಅದನ್ನು ಇಂಟರ್ಪ್ರೆಟ್ ಮಾಡಿ, ತಕ್ಕ ಕ೦ಕ್ಲ್ಯೂಶನ್ ಗೆ ಬರಬಲ್ಲವು.

ಕಂಬಳ ನಡೆಯುವ ಹಲವು ದಿನಗಳಿಗೆ ಮೊದಲೇ ಕೋಣಗಳಿಗೆ ಆರೈಕೆ ಶುರುವಾಗುತ್ತದೆ. ದಿನಾ ಸಂಜೆ ಕೋಣವನ್ನು ನೋಡಿಕೊಳ್ಳುವ ವ್ಯಕ್ತಿ ಹದ ಬಿಸಿಮಾಡಿದ ತೆಂಗಿನ ಎಣ್ಣೆಯನ್ನು ಕೋಣಗಳ ಹೆಬ್ಬಂಡೆಯಂತಹ ಬೆನ್ನ ಮೇಲೆ ನೀವಿ ನೀವಿ ತಿಕ್ಕುತ್ತಾರೆ. ತಿಕ್ಕುವವನ ಕೈ ಬೆನ್ನು ಬಿದ್ದುಹೋಗುವವರೆಗೆ ಈ ಕಾರ್ಯ ನಡೆಯುತ್ತದೆ. ಬೆಚ್ಚ ಬಿಸಿ ಕುದಿ ಕುದಿ ಬಿಸಿ ನೀರು ಕೋಣಗಳ ಬೆನ್ನ ಮೇಲೆ ಬೀಳುತ್ತದೆ. ಬೆನ್ನ ಮೇಲೆ ಬಿಸಿನೀರು ಬಿದ್ದರೇನೇ ಅವುಗಳ ಕಪ್ಪು ಚರ್ಮಕ್ಕೊಂದು ಮಿರಿ ಮೀರಿ ವರ್ಚಸ್ಸು. ಆಗ, ಪ್ರಾಕ್ಟೀಸ್ ನಲ್ಲಿ ಮೈ ಅದುರಿಸಿಕೊಂಡ ಮಾಂಸಖಂಡಗಳಿಗೆ ಒಂದು ನೆಮ್ಮದಿ. ಮಣ್ಣಿನ ನೆಲದ ಮೇಲೆ ದಿನಾ ಒಂದಷ್ಟು ಓಡಿ ಮೈ ಬೆವರಿಸಿಕೊಳ್ಳುವ ಕೋಣಗಳಿಗೆ ಒಂದು ಹಿತವಾದ ಅಭ್ಯಂಜನ !

ಯಾವಾಗ ತನ್ನ ಮಾಲೀಸು ಪ್ರಾರಂಭ ಆಯಿತೋ, ಆಗ ಮೊದಲ ಡೌಟ್ ಕೋಣಗಳ ಮನದಲ್ಲಿ ಮೂಡುತ್ತದೆ. ಅದೇ ಕೋಣಗಳಿಗೆ ಸಿಕ್ಕಿದ ಮೊದಲ ಹಿಂಟ್. ಕಂಬಳದ ದಿನ ಹತ್ತಿರ ಬಂದಂತೆಲ್ಲ ಕೋಣಗಳಿಗೆ ಜಾಸ್ತಿ ಬೇಯಿಸಿದ ಹುರುಳಿ ಕೊಡಲು ಸ್ಟಾರ್ಟ್ ಮಾಡುತ್ತಾರೆ. ಒಂದು ಸೇರು ಕೊಡುವಲ್ಲಿ ಎರಡು ಸೇರು ನೀಡುತ್ತಾರೆ. ಜತೆಗೆ ಕೋಣಗಳಿಗೆ ಒಣ ತೆಂಗಿನ ಕಾಯಿ ಕೊಡುತ್ತಾರೆ. ತೆಂಗಿನ ಕಾಯಿ ( ಕೊಬ್ಬರಿ ) ಕೊಡುವುದರಿಂದ ಕೋಣಗಳ ಮೈ ಗಟ್ಟಿಯಾಗುತ್ತದೆ. ಅದು ಓಟಕ್ಕೆ ಸಹಾಯಕಾರಿಯಾಗುತ್ತದೆ ಎಂಬುದು ನಂಬಿಕೆ.

ಕಂಬಳಕ್ಕೆ ದಿನ ಹತ್ತಿರವಾದಾಗ ಕಂಬದ ಕೋಣಗಳ ಧನಿಯ ಮನೆಯಲ್ಲಿ ಹತ್ತಾರು ಜನ ಸಂಜೆ ಸೇರುತ್ತಾರೆ. ಮನೆಯ ಜಗಲಿಯಲ್ಲಿ, ಅಂಗಳದಲ್ಲಿ ಕುರ್ಚಿ ಎಳೆದುಕೊಂಡು ಸುಮಾರು ಮಾತುಕತೆಯಾಗುತ್ತದೆ. ಆಗ ಕೋಣಗಳಿಗೆ ಪಕ್ಕಾ ಕನ್ಫರ್ಮ್ ಆಗುತ್ತದೆ : ಇನ್ನೇನು ಸ್ವಲ್ಪ ದಿನದಲ್ಲೇ ಕಂಬಳ ಇದೆಯೆಂದು.

ಕೋಣಗಳಲ್ಲೂ ಇದೆ ಮಾನವೀಯ ಗುಣ !

ಕಂಬಳವು ಕೋಣಗಳಿಗೆ ಪ್ರತಿಸಲವೂ ಹಿತವಾದ ಅನುಭವವನ್ನೇನೂ ಕೊಡುವುದಿಲ್ಲ. ಕೋಣಗಳಿಗೆ ಕಂಬಳದ ದಿನದ ಹಳೆಯ ನೆನಪುಗಳನ್ನು ನೆನೆದು ಟೆನ್ಷನ್ ಆಗುತ್ತದೆ. ಕೆಲವು ಕೋಣಗಳು ರೋಧಿಸುತ್ತವೆ. ಮತ್ತೆ ಕೆಲವು ಕೋಣಗಳು ಟೆಂಪೋ- ಲಾರಿಗೆ ಹತ್ತಲು ಹಟಮಾಡುತ್ತದೆ. ಇನ್ನು ಕೆಲವು ಕಂಬಳದ ಕರೆಯಲ್ಲಿ ಮುಂಗಾಲು ಮಡಚಿ ಮುಂಡೊ ಊರುಬೊ.

ಹೇಗೆ ಕಂಬಳದ ಕೋಣಗಳಿಗೆ ಕಂಬಳದಲ್ಲಿ ಭಾಗವಹಿಸಬೇಕೆಂದು ಉತ್ಸಾಹ ಇರುತ್ತದೋ, ಅದೇ ರೀತಿ ಮತ್ತೊಂದು ಕಡೆಯಿಂದ ಅವಕ್ಕೆ ಟೆನ್ಶನ್ ಕೂಡ ಆಗುತ್ತದೆ.

ಹಿಂದೆ ಕೋಣಗಳನ್ನು ಒಂದೂರಿನಿಂದ ಕಂಬಳ ನಡೆಯುವ ಊರಿಗೆ ಸಾಗಿಸುವಾಗ ಟೆಂಪೋದಲ್ಲಿ ಕೊಂಡೊಯ್ಯುತ್ತಿದ್ದರು. ಟೆಂಪೋದ ಮುಂದುಗಡೆ ಧಣಿ ಮತ್ತೆರಡು ಜನ ಕುಳಿತರೆ, ಕೋಣವನ್ನು ನೋಡಿಕೊಳ್ಳುವ ಸಹಾಯಕರು ಕೋಣಗಳ ಜತೆ ಹಿಂದೆ ಟೆಂಪೋದಲ್ಲಿ ಹತ್ತಿಕೊಳ್ಳುತ್ತಾರೆ. ಆಗ ಕೋಣದ ತಲೆಯ ಭಾಗದಲ್ಲಿ ಕೋಣದ ಸಹಾಯಕ ಬೈರಾಸು ಹಾಕಿ ಕುಳಿತರೆ, ಕೋಣಗಳು ಚಿಕ್ಕ ಮಕ್ಕಳಂತೆ ಸಹಾಯಕನ ತೊಡೆಯ ಮೇಲೆ ತಲೆಯಿಟ್ಟು ಮಲಗುತ್ತವೆ. ಪ್ರಯಾಣದ ಮಧ್ಯೆ ಸಹಾಯಕನಿಗೆ ನಿದ್ದೆ ಬಂದರೆ ಆತ ಕೋಣದ ತಲೆಯ ಮೇಲೆ ತಲೆಯೊರಗಿಸಿ ಮಲಗುತ್ತಾನೆ. ಒಂದು ವೇಳೆ ಕೋಣಗಳಿಗೆ ಎಚ್ಚರವಾದರೂ ಅವು ಸಡನ್ನಾಗಿ ತಲೆ ಕೊಡಹುವುದಿಲ್ಲ. ಮೆಲ್ಲಗೆ ತಲೆಯಲುಗಿಸಿ ಸಹಾಯಕನಿಗೆ ಎಚ್ಚರವಾಗುವಂತೆ ಮತ್ತು ನೋವಾಗದಂತೆ ವರ್ತಿಸುತ್ತವೆ.

ಓಟಕ್ಕೆ ಮೊದಲು ಕೋಣಗಳು ಸ್ವಲ್ಪ ದಿನ ಬ್ಯಾಚುಲರ್ಸ್ ಆಗಿರಬೇಕು !

ಕೋಣಗಳು ದೈಹಿಕವಾಗಿ ಸಾಕಷ್ಟು ಬಲಶಾಲಿಯಾದ ಪ್ರಾಣಿಗಳು. ಸಣ್ಣ ಮಟ್ಟಿಗೆ ಯಾವುದಕ್ಕೂ ಜಗ್ಗದ ಬಲಿಷ್ಠ ದೇಹದ ಜೀವಿಗಳು. ಅಂತೆಯೇ ಸೆಕ್ಷುಯಲಿ ಕೂಡ ಕೋಣಗಳು ಅಪರಿಮಿತ ತಾಕತ್ತನ್ನು ಹೊಂದಿರುತ್ತವೆ. ಚೆನ್ನಾಗಿ ಬಾಡಿ ಬೆಳೆಸಿ, ಓಡಿ ಮೈ ದಣಿಸಿಕೊಂಡ ಕೋಣಗಳು ಎಮ್ಮೆಗಳಿಗಾಗಿ ಬಾಯಿ-ಕಿವಿ, ಕಣ್ಣು-ಹೊರಳೆ ತೆರೆದಿಟ್ಟುಕೊಂಡು ಕಾಯುತ್ತಿರುತ್ತವೆ. ಸಾಮಾನ್ಯವಾಗಿ ಕಟ್ಟಿ ಹಾಕಿದ ಕೋಣಗಳು ಹೆಚ್ಚಿನ ಸಮಯದಲ್ಲಿ ಬ್ಯಾಚುಲರ್ ಗಳೇ. ಆದರೆ ಒಮ್ಮೊಮ್ಮೆ ಕೋಣದ ಧಣಿಗಳಿಗೆ ಒಳ್ಳೆಯ ಮೂಡು ಬಂದು, ” ಇಂದಂಬೆ, ನೆನ್ ಆ ಎರ್ಮೆದೊಟ್ಟುಗ್ ಬುಡ್ಲ೦ಬೆ ” ಅಂತ ಸಹಾಯಕರಿಗೆ ಆಜ್ಞಾಪಿಸಿದರೋ, ಸಹಾಯಕರು ತಕ್ಷಣ ಕೋಣಗಳನ್ನು ಎಮ್ಮೆಗಳ ಜತೆ ಬಿಟ್ಟು ಹೆಗಲ ಮೇಲೀನ ಬೈರಾಸು ಸೊಂಟಕ್ಕೆ ಸುತ್ತಿಕೊಂಡು ತಮ್ಮ ಮನೆಗೆ ನಡೆಯುತ್ತಾರೆ.
ಅವತ್ತು ಕೋಣಗಳು ಯಾವುದೇ ಕಟ್ಟುಪಾಡು ಇರದ ಸ್ವಚ್ಛಂದ ಜೀವಿಗಳು. ಅವುಗಳಿಗೆ ಅಂದು ಹಬ್ಬ. ಆಕ್ರೋಶಗೊಂಡು ಹುಯಿಲಿಡುತ್ತಿದ್ದ ದೇಹಕ್ಕೆ ಎಮ್ಮೆಯ ಸಾಂಗತ್ಯ ಮುದ ನೀಡುತ್ತದೆ.

ಓಟಕ್ಕೆ ಮೊದಲು ಆತ ( ಕೋಣ ) ಬ್ರಹ್ಮಚಾರಿ !

ಆದರೆ, ಕಂಬಳದ ದಿನ ಹತ್ತಿರ ಬಂದಂತೆಲ್ಲ ಕೋಣಗಳಿಗೆ ಹಾಕುವ ಕಟ್ಟುಪಾಡುಗಳು ಜಾಸ್ತಿಯಾಗುತ್ತವೆ. ಎಮ್ಮೆಗಳ ಜತೆ ಬಿಡುವುದು ಬಿಡಿ, ಹಲವು ಬಾರಿ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎಮ್ಮೆಗಳನ್ನು ಎತ್ತಂಗಡಿ ಮಾಡಿ ದೊರಕ್ಕೆ ಸಾಗಿಸುವುದುಂಟು. ಎಮ್ಮೆಗಳನ್ನು ನೋಡಿ ಮನಸ್ಸು ಮುದುಡಿಸಿಕೊಳ್ಳದಿರಲಿ, ಕೋಣಗಳ ಮನಸ್ಸು ಚಂಚಲವಾಗದೆ ಇರಲೆಂಬುದಷ್ಟೇ ಎಂಬುದಷ್ಟೇ ಇದರ ಉದ್ದೇಶ.

ಕೆಲವು ಕೋಣಗಳಿಗೆ ಕಂಬಳದಲ್ಲಿ ಭಾಗವಹಿಸಲು ಇನ್ನಿಲ್ಲದ ಉತ್ಸಾಹ. ಇಂತಹಾ ಉತ್ಸಾಹೀ ಕೋಣಗಳು ಹಗ್ಗ ಜಗ್ಗಿಕೊಂಡು ಮುಂದಕ್ಕೆ ನಮ್ಮನ್ನು ಎಳಕೊಂಡು ಹೋಗುತ್ತವೆ ಎನ್ನುತ್ತಾರೆ ನಮ್ಮ ಹಳೆಯ ಪಂಟರ್ ಓಟಗಾರ ಇಜಿಮಾನಿನ ರಾಘವ ಗೌಡರು. ಹೀಗೆ ಅವರು ತಮ್ಮ 12 ವರ್ಷದ ಓಟದ ಅನುಭವದಿಂದ ಕೋಣಗಳ ಬಗೆಗಿನ ಸುಮಾರು ಇಂಟರೆಸ್ಟಿಂಗ್ ವಿಷಯಗಳನ್ನು ಹೆಕ್ಕಿ ಕೊಡುತ್ತಾರೆ. ಅವರು ಓಟಗಾರರು ಮಾತ್ರವಲ್ಲದೆ ಕೋಣಗಳನ್ನು ಸಾಕಿದವರು, ಮಾಲೀಶು ಮಾಡಿದವರು. ಎಂತಹುದೇ ಅಗ್ರೆಸ್ಸಿವ್ ಕೋಣವನ್ನೂ ಸುಲಭವಾಗಿ ಪಳಗಿಸಬಲ್ಲ, ಅವುಗಳ ಬಿಹೇವಿಯರ್ ಅನ್ನು ಸರಿಯಾಗಿ ಗ್ರಹಿಸಬಲ್ಲ ಕುಶಾಗ್ರಮತಿ.

ಬೇಡ, ಬಿಟ್ಟುಬಿಡಿ ಅಂತ ಕೋಣಗಳು ಬೇಡಿಕೊಳ್ಳುವುದೂ ಇದೆ. ಅವಕ್ಕೆ ಬಾಯಿ ಬರಲ್ಲ. ಅಥವಾ ಅವು ಆಡುವ ಮಾತು ನಮಗರ್ಥವಾಗಲ್ಲ. ಅವು ಮುಂದಿನ ಎರಡೂ ಕಾಲು ಮಡಚಿ ಕರೆಯಲ್ಲಿಯೇ ಚಿಕ್ಕ ಮಕ್ಕಳಂತೆ ಮುಂಡು ಬೀಳುತ್ತವೆ. ಒಂದೊಮ್ಮೆ ಓಟಕ್ಕೆ ಮನಸ್ಸು ಮಾಡಿದರೆ, ಅವು ಏಕ ಮನಸ್ಸಿನಿಂದ ಓಡುತ್ತವೆ. ಅವನ್ನು ಆಗ ತಡೆಯುವವರಿಲ್ಲ.

ಕಂಬಳ ಪೋಷಕ, ಉಪ್ಪಿನಂಗಡಿಯ ಕೈಪ ಕೇಶವ ಭಂಡಾರಿ

ಕೋಣಗಳನ್ನು ಕರೆಯಲ್ಲಿ ಬಿಡುವಾಗ ಕೂಡ ಕೆಲವು ಟೆಕ್ನಿಕ್ ಗಳನ್ನು ಕಂಬಳದ ಪಂಡಿತರು ಬಳಸುತ್ತಾರೆ. ಮೊದಲಿಗೆ, ಜೋಡಿ ಮಾಡಿದ ಎರಡೂ ಕೋಣಗಳು ಒಂದೇ ರೀತಿ ಓಡುವುದಿಲ್ಲ. ಹೇಗೆ ಇಬ್ಬರು ವ್ಯಕ್ತಿಗಳ ದೇಹಪ್ರಕೃತಿ ಮತ್ತು ಓಟದ ವಿಧಾನ, ಬೇರೆ ಬೇರೆಯೋ ಹಾಗೆಯೆ ಕೋಣಗಳಲ್ಲೂ ಕೂಡ ಬೇರೆ ಬೇರೆಯಾಗಿರುತ್ತದೆ. ಕೆಲವು ಕೋಣಗಳು ಒಳ್ಳೆಯ ಸ್ಟಾರ್ಟ್ ತೆಗೆದುಕೊಂಡರೆ, ಮತ್ತೆ ಕೆಲವು ಕೋಣಗಳು ಸ್ಲೋ ಸ್ಟಾರ್ಟಿಂಗ್ ತೆಗೆದುಕೊಂಡರೂ ಆ ನಂತರ ವೇಗ ಪಡೆದುಕೊಳ್ಳುತ್ತವೆ. ಕೆಲವು ಕೋಣಗಳು ಏಕ ರೀತಿಯ ವೇಗದಿಂದ ಓದಿದರೆ, ಮತ್ತೆ ಕೆಲವು ಕ್ಷಣ ಕ್ಷಣಕ್ಕೂ ವೇಗ ಹೆಚ್ಚಿಸಿಕೊಳ್ಳುತ್ತವೆ.

ಒಂದೊಮ್ಮೆ ಒಟ್ಟೊಟ್ಟಿಗೆ ಈ ಕಡೆ ಎರಡು ಕೋಣ ಮತ್ತು ಆ ಕಡೆ ಎರಡು ಕೋಣಗಳನ್ನೂ ಜೋಡಿ ಕರೆಯಲ್ಲಿ ಬಿಡುತ್ತಾರೆ ಅಂದುಕೊಳ್ಳಿ. ಆಗ, ಮಧ್ಯದ ಕಟ್ಟೆ ಇರುತ್ತದಲ್ಲವಾ, ಅದರ ಪಕ್ಕ ಚೆನ್ನಾಗಿ ಓಡುವ ಚುರುಕಿನ ಕೋಣಗಳನ್ನು ಕಟ್ಟುತ್ತಾರೆ. ಇದು ಯಾಕೆಂದರೆ ಚೆನ್ನಾಗಿ ಓಡುವ ಕೋಣಗಳು ಪಕ್ಕದ ಕರೆಯಲ್ಲಿ ಓಡುವ ಕೋಣಗಳ ಗತಿಯನ್ನು ಗಮನಿಸಿಕೊಂಡು ಅದಕ್ಕೆ ತಕ್ಕಂತೆ ಸ್ಪಧೆಯಲ್ಲಿ ಓಡಿ ಲೀಡ್ ಮಾಡುತ್ತದೆ. ತಮ್ಮ ಪ್ರತಿಸ್ಪರ್ಧಿಯನ್ನು ಸೋಲಿಸಲೇಬೇಕೆಂದು ಅದರ ಮೇಲೊಂದು ಸಣ್ಣ ಗಮನವನ್ನಿಟ್ಟುಕೊಂಡು ಓಡಲು ಪ್ರಯತ್ನ ಪಡುತ್ತದೆ. ಹಾಗೆ ಈ ಕೋಣಗಳು ಓಡಿದಾಗ, ಅದರ ಜತೆ ಕೋಣಗಳಿಗೂ ಜೋಶ್ ಬರುತ್ತದೆ.

ಓಟದ ಕೋಣಗಳ ವ್ಯಕ್ತಿತ್ವ

ಕೋಣದ ಹಿಂದೆ ಓದುವ ಕಂಬಳದ ಜಾಕಿ ಕೂಡ ಕೋಣಗಳ ವೇಗ ಮತ್ತು ವ್ಯಕ್ತಿತ್ವವನ್ನು ಅನುಸರಿಸಿ ಯಾವುದಾದರೂ ನಿಧಾನವಾಗಿ ಓಡುವ ಕೋಣದ ಹಿಂದೆ ಬೆತ್ತ ಝಳಪಿಸುತ್ತಾ ಓಡುತ್ತಾನೆ.

ಕೋಣಗಳು ಓಡಿ ಗುರಿ ತಲುಪಿದ ಮೇಲೆ ಕೊನೆಯಲ್ಲಿ ಸ್ವಲ್ಪ ಎತ್ತರದಲ್ಲಿ ಮರಳು ಹರಡಿದ ಅಂಗಳ ಮಾಡಿರುತ್ತಾರೆ. ಅದಕ್ಕೆ ಮ0ಜೊಟ್ಟಿ ಎಂದು ಹೆಸರು. ಅಲ್ಲಲ್ಲಿ ಮರಳು ಹಾಸಿರುವುದು ಮತ್ತು ಆ ಪ್ರದೇಶ ಕರೆಗಿಂತ ಎತ್ತರದಲ್ಲಿರುವುದರಿಂದ ಸಹಜವಾಗಿ ವೇಗವಾಗಿ ಓಡಿ ಬರುವ ಕೋಣಗಳು ತಮ್ಮ್ಮ ಓಟದ ಕೊನೆಯಲ್ಲಿ ವೇಗ ತಗ್ಗಿಸಿಕೊಳ್ಳಲು ಸಹಕಾರಿ. ಈ ಮಂಜೊಟ್ಟಿಯಲ್ಲಿಯೇ ಇಬ್ಬರು ಮೂವರು ಸಹಾಯಕರು ಬಂದು ಕೋಣಗಳನ್ನು ಹಿಡಿಯುತ್ತಾರೆ.

ಓಡಿ ಮಂಜೊಟ್ಟಿ ತಲುಪಿದ ಕೂಡಲೇ ಕೋಣಗಳನ್ನು ಹಿಡಿದು ಅವುಗಳ ನೆತ್ತಿಯ ಮೇಲೆ ಮತ್ತು ಬೆನ್ನ ಮೇಲೆ ತಣ್ಣೀರು ಸುರಿಯುತ್ತಾರೆ. ಒಳ್ಳೆ ಓಡುವ ಕೋಣಗಳಿಗೆ ಬೊಂಡದ ನೀರನ್ನು ಕೂಡ ಕಾಂಪ್ಲಿಮೆಂಟರಿಯಾಗಿ ಕುಡಿಯಲು ಕೊಡುತ್ತಾರೆ. ಹಿಂದೆ ಆ ಬೊಂಡದ ನೀರಿನ ಜತೆ ಒಂದೆರಡು ಕ್ವಾರ್ಟರ್ ಸಾರಾಯಿ ಮಿಕ್ಸ್ ಮಾಡಿ ಕೊಡುತ್ತಿದ್ದರು. ಆಗ ಓಡಿ ದಣಿದ ಕೋಣಗಳಿಗೆ ಸ್ವಲ್ಪ ರಿಲಾಕ್ಸ್ ಆಗುತ್ತಿತ್ತು. ಈಗ ಕಂಬಳದ ದಿನ ಹಾಗೆಲ್ಲ ಯಾರು ಕೂಡ ಮಾಡುವುದಿಲ್ಲ.

ಕಂಬಳಕ್ಕಿಂತ ಮುಂಚೆ ಮತ್ತು ಚೆನ್ನಾಗಿ ಓಡಿ ಫಲಕ ಗೆದ್ದುಕೊಂಡ ಕೋಣಗಳ ಧಣಿಗಳು ಪಾರ್ಟಿ ಮಾಡುವಾಗ ಕೋಣಗಳಿಗೂ ಕೆಲವೊಮ್ಮೆ ಕಳಿ -ಸಾರಾಯಿ ಮುಂತಾದುವುಗಳನ್ನು ಕೂಡ ಕೊಡುವುದುಂಟು. ಒಟ್ಟಾರೆಯಾಗಿ ಮನುಷ್ಯ ಸ್ಪೋರ್ಟ್ಸ್ ಮ್ಯಾನ್ ಗೆ ಯಾವೆಲ್ಲ ರೀತಿಯ ತಯಾರಿ ಮತ್ತು ಆರೈಕೆ ಮಾಡುತ್ತಾರೋ, ಅದೇ ರೀತಿ ಕೋಣಗಳಿಗೂ ಸಲ್ಲುತ್ತದೆ.

ಗೆದ್ದ ಕೋಣಗಳಿಗೆ ಕ್ಯಾರೆಟ್ಟು ಬಚ್ಚಂಗಾಯಿ ಕೊಟ್ಟು ಅವುಗಳಿಗೂ ಪಾರ್ಟಿ ಮಾಡುವ ಅವಕಾಶ ಕಲ್ಪಿಸುತ್ತಾರೆ.

ಪ್ರಾಣಿ ಪ್ರೀತಿಯೇ ಕಂಬಳ ಕ್ರೀಡೆಯ ಜೀವಾಳ !

ಪ್ರಾಣಿಗಳ ಮೇಲೆ ಪ್ರೀತಿ ಇಲ್ಲದೆ ಹೋದರೆ ಕಂಬಳ ನಡೆಯಲ್ಲ. ಹೌದು, ಪ್ರಾಣಿಪ್ರೀತಿಯೇ ಕಂಬಳದ ಮೂಲವಸ್ತು ! ಅವತ್ತು ಪ್ರಾಣಿ ಹಿಂಸೆಯ ಹೆಸರಿನಲ್ಲಿ ಕಂಬಳವನ್ನು ನಿಷೇಧಿಸಿದ್ದರು. ಆದರೆ ನಿಷೇಧಿಸಿದವರಿಗೆ ಗೊತ್ತಿಲ್ಲ : ಒಂದು ಜೋಡಿ ಕೋಣಗಳನ್ನು ಸಾಕಲು ಅದೆಷ್ಟು ಖರ್ಚು ಆಗುತ್ತದೆ ಎಂದು. ಈ ಕೋಣಗಳನ್ನು ನೋಡಿಕೊಳ್ಳಲು, ಅವುಗಳಿಗೆ ಮೇವು, ಆಹಾರ ತಿನ್ನಿಸಲು, ಕಾಲಕಾಲಕ್ಕೆ ನೀರು ಕೊಡಲು, ಸಂಜೆ ಎಣ್ಣೆ ನೀರಿನ ಅಭ್ಯಂಜನ ಮಾಡಿಸಲು, ಆಗಾಗ ಕೈಕಾಲು ಆಡಿಸಲು ಬಯಲಿನಲ್ಲಿ ಬಿಡಲು, ಮಣ್ಣಿನ ನೆಲದ ಮೇಲೆ ಓಡಿಸಲು ಕಾಣಿಸ್ತಾತಿಕನಿಷ್ಠ ಒಬ್ಬ ವ್ಯಕ್ತಿಯಂತೂ ಬೇಕೇ ಬೇಕು. ಆ ಸಹಾಯಕನ ದಿನದ ಖರ್ಚು ವೆಚ್ಚ ಮತ್ತು ಕೋಣಗಳ ಆಹಾರ ದೊಡ್ಡ ಖರ್ಚಿನ ಬಾಬತ್ತು. ಕೋಣಗಳು ದೈತ್ಯ ದೇಹಿ ಪ್ರಾಣಿಗಳಾದ್ದರಿಂದ ಅವು ಜಾಸ್ತಿ ಆಹಾರವನ್ನು ಬೇಡುತ್ತವೆ. ದಿನಕ್ಕೆ ಒಂದುವರೆ ಸಾವಿರ ಕನಿಷ್ಠ ಕೋಣಗಳ ಖರ್ಚಿಗೆಂದೇ ಇಡಬೇಕಾಗುತ್ತದೆ. ಕಂಬಳದ ಜಾಕಿಯ ಪ್ಯಾಕೇಜ್ ಬೇರೆನೇ ಇರುತ್ತದೆ. ಕಂಬಳ ನಡೆಯುತ್ತಿರುವ ದಿನಗಳಲ್ಲಿ ಕಂಬಳದ ಕೋಣಗಳ ಯಜಮಾನರಿಗೆ ಒಂದು ಲಕ್ಷಕ್ಕಿಂತ ಅಧಿಕ ದುಡ್ಡು ಖರ್ಚಾಗುತ್ತದೆ. ಕಂಬಳದ ಸಹಾಯಕರಾಗಿ ಸೇರಿಕೊಳ್ಳುವವರು ದುಡ್ಡಿನಾಸೆಗೆ ಬರುವವರಲ್ಲ. ಅವರೆಲ್ಲ ಬರುವುದು ಕಂಬಳ ಕ್ರೀಡೆಯ ಮೇಲಿನ ಮೋಹದಿಂದ.

ಇಷ್ಟೆಲ್ಲಾ ಖರ್ಚು ಮಾಡಿಕೊಂಡು ಯಾವ ಕಾರಣಕ್ಕಾಗಿ ಕಂಬಳ ನಡೆಸಬೇಕು ಎಂದು ಕಂಬಳ ಪ್ರಿಯ ಧನಿಗಳನ್ನು ಪ್ರಶ್ನಿಸಿದರೆ ಅವರು ನೀಡುವ ಉತ್ತರವೇ ಬೇರೆ.

ರಾಜವಂಶದ ಕಾಲದ ಇತಿಹಾಸ ಹೊಂದಿರುವ ಕಂಬಳ ಕ್ರೀಡೆಗೆ ಮತ್ತು ಕೃಷಿ ಪರಂಪರೆ, ರೈತಾಪಿ ವರ್ಗಕ್ಕೆ ಅವಿನಾಭಾವ ನಂಟಿದೆ. ಜಾಗತೀಕರಣದ ಪ್ರಭಾವದಲ್ಲಿ ನಮ್ಮ ಸಂಸ್ಕೃತಿ,ಕೃಷಿ ಪದ್ಧತಿಗಳು ನಶಿಸಿ ಹೋಗುತ್ತಿರುವ ಈ ಕಾಲದಲ್ಲಿ ಅದನ್ನು ಮುಂದಿನ ಪೀಳಿಗೆಗೆ ತಿಳಿಸುವ, ಉಳಿಸುವ ಕೆಲಸಗಳಾಗಬೇಕು.
– ಕೇಶವ ಭಂಡಾರಿ ಬೆಳ್ಳಿಪ್ಪಾಡಿ, ಕೈಪ,ಪ್ರಗತಿಪರ ಕೃಷಿಕ.

ಮುಂದುವರಿದು ಅವರು ಹೇಳುತ್ತಾರೆ: ಕಂಬಳಗಳು ಒಂದು ರೀತಿಯ ಸ್ಪರ್ಧೆಯನ್ನು, ಉಂಟುಮಾಡುತ್ತದೆ. ಬೇರೆಯವರು ಕಂಬಳ ನಡೆಸುವುದನ್ನು ನೋಡಿ, ನಮಗೂ ಅದೇ ರೀತಿ ಕಂಬಳ ನಡೆಸಬೇಕು, ಅವರಿಗಿಂತ ಚೆನ್ನಾಗಿ ಓಡುವ ಕೋಣಗಳನ್ನು ಕೊಳ್ಳಬೇಕು, ಅವನ್ನು ಪುಷ್ಟಿಯಾಗಿ ಸಾಕಬೇಕು ಮತ್ತು ತಾನೇ ನಡೆಸುವ ಕಂಬಳದಲ್ಲಿ ತನ್ನ ಕೋಣಗಳು ಮೆಡಲ್ ಗೆಲ್ಲಬೇಕೆಂಬ ಹಠ ಮೂಡುತ್ತದೆ. ಅದಕ್ಕಾಗಿ ಲಕ್ಷಾಂತರ ಖರ್ಚು ಮಾಡುತ್ತೇವೆ…… ಕಳೆದ ವರ್ಷ ಒಂದು ಕೋಣ ಕೊಂಡಿದ್ದೇನೆ. ಅದರ ಬೆಲೆ 12 ಲಕ್ಷ ರೂಪಾಯಿ !!!

ಒಂದು ಜೋಡಿ ಕೋಣಗಳಿಗೆ ದಿನಕ್ಕೆ, ಕಂಬಳದ ದಿನಗಳಲ್ಲಿ 6 ಕೆಜಿ ಎಷ್ಟು ಮುರಳಿಯನ್ನು ಬೇಯಿಸಿ ಪುಡಿ ಮಾಡಿ ಕೊಡಬೇಕಾಗುತ್ತದೆ. ಜೊತೆಗೆ ಕೊಬ್ಬರಿ ಪುಡಿ ಅಥವಾ ಕೊಬ್ಬರಿ ಎಣ್ಣೆಯನ್ನು ಕೊಡುತ್ತಾರೆ ಇದರಿಂದಾಗಿ ಅವುಗಳ ಮೋಷನ್ ಸುಲಭವಾಗುತ್ತದೆ. ಹುರುಳಿ ಉಷ್ಣ ಪದಾರ್ಥವಾದದ್ದರಿಂದ ಕೊಬ್ಬರಿ ತಿನ್ನಿಸುವುದರಿಂದ ಉಷ್ಣತೆ ಬ್ಯಾಲೆನ್ಸ್ ಮಾಡಲು ಅನುಕೂಲವಾಗುತ್ತದೆ. ಕಂಬಳದ ದಿನಗಳಲ್ಲಿ ಯಾವುದೇ ಕಾರಣಕ್ಕೂ ರಾಗಿ ಹಸಿಹುಲ್ಲು ಮುಂತಾದ ಶೀತ ಪದಾರ್ಥಗಳನ್ನು ಕೊಡುವುದಿಲ್ಲ.

ಹೆಚ್ಚಿನ ಕಂಬಳಗಳು ನವೆಂಬರ್ 15 ರ ನಂತರ ಪ್ರಾರಂಭವಾಗಿ ಮಾರ್ಚ್ ಕೊನೆಯ ಭಾಗದಲ್ಲಿ ದಕ್ಷಿಣ ಕನ್ನಡದಲ್ಲಿ ಹೆಚ್ಚುಕಮ್ಮಿ 22 ವಿವಿಧ ಕಡೆಗಳಲ್ಲಿ ಕಂಬಳ ದಕ್ಷಿಣಕನ್ಡದಲ್ಲಿ ಹೆಚ್ಚುಕಮ್ಮಿ 22 ವಿವಿಧ ಕಡೆಗಳಲ್ಲಿ ಕಂಬಳ ನಡೆಸುತ್ತಾರೆ. ಕಂಬಳ ಸಮಿತಿಯವರು ಕಂಬಳದ ಟೈಮ್ ಟೇಬಲ್ ಅನ್ನು ಪರಸ್ಪರ ವಿನಿಮಯ ಮಾಡಿಕೊಂಡು ಯಾವುದೇ ಕಂಬಳಗಳ ದಿನಾಂಕ ಕ್ಲಾಶ್ ನೋಡಿಕೊಳ್ಳುತ್ತಾರೆ.

ಕೋಣಗಳಿಗೆ ತಾವು ಓಡಿದ ಓಟದಲ್ಲಿ ತಾವು ವಿಜಯದೇವ ಸೋತುಹೋದ ಎಂಬುದು ತಕ್ಷಣ ಅರಿವಿಗೆ ಬರುತ್ತದೆ. ಸೋತು ಹೋದರೆ ಅವು ತಮ್ಮ ಧಣಿಗಳಂತೆ ಬೇಜಾರು ಮಾಡಿಕೊಳ್ಳುತ್ತವೆ. ಒಂದೊಮ್ಮೆ ಒಂದು ಪಂದ್ಯದಲ್ಲಿ ಗೆದ್ದು ಬಿಟ್ಟರೆ ಅವುಗಳಿಗೆ ಗೆಲುವಿನ ಅರಿವಾಗಿ ಮತ್ತೊಂದು ಪಂದ್ಯಕ್ಕೆ ಇನ್ನಷ್ಟು ಹುಮ್ಮಸ್ಸಿನಿಂದ ರೆಡಿಯಾಗುತ್ತದೆ. ಪದಕ ಗೆದ್ದ ಕೋಣಗಳಲ್ಲಿ, ತನ್ನನ್ನು ಅಷ್ಟೆಲ್ಲಾ ಖರ್ಚುಮಾಡಿ ಆರೈಕೆಯಿಂದ ಸಾಕಿರುವ ಧನಿಯ ಮುಖದಲ್ಲಿ ಒಂದು ಹೆಮ್ಮೆ, ಒಂದು ಮಂದಹಾಸ ಮೂಡಿಸಿದ ಸಾರ್ಥಕ ಭಾವ ಮೂಡುತ್ತದೆ. ಸಾಕುಪ್ರಾಣಿಗಳು ಯಾವತ್ತೂ ತಾನೇ ತನ್ನ ಯಜಮಾನನನ್ನು ಬಿಟ್ಟುಕೊಟ್ಟಿವೆ. ಕೃತಞ್ಣತೆ ಎಂಬುದು ಪ್ರಾಣಿ ಲೋಕದ ಡಿಕ್ಷನರಿಯಲ್ಲಿ ಇಲ್ಲ !!

ಲೇ : ಸುದರ್ಶನ್ ಬಿ. ಪ್ರವೀಣ್, ಬೆಳಾಲು.

Leave A Reply

Your email address will not be published.