ಮಧ್ಯರಾತ್ರಿ ಕುಸಿದ ಮರವೂರು ಸೇತುವೆಯ ಪಾರ್ಶ್ವ, ತಪ್ಪಿದ ಭಾರೀ ಅನಾಹುತ | ಸ್ಥಳಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್ ಭೇಟಿ, ಸ್ಥಳದಲ್ಲಿ ಬಂದೋಬಸ್ತ್
ಇಂದು ಮುಂಜಾನೆ 2.30ರ ಸುಮಾರಿಗೆ ಮರವೂರು ಹಳೆ ಸೇತುವೆಯ ಒಂದು ಪಾರ್ಶ್ವ ಕುಸಿದಿದ್ದು , ವಿಷಯ ತಿಳಿದ ಕೂಡಲೇ ಶಾಸಕರಾದ ಉಮಾನಾಥ ಕೋಟ್ಯಾನ್ ರವರು ಸ್ಥಳಕ್ಕಾಗಮಿಸಿ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಸೂಕ್ತ ಬಂದೋಬಸ್ತ್ ಮಾಡುವಂತೆ ಸೂಚಿಸಿದರು.
ಸದ್ಯ ವಾಹನಗಳನ್ನು ಪರ್ಯಾಯ ಮಾರ್ಗವಾಗಿ ಬಿಡಲಾಗುತ್ತಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಂಡಿದ್ದರಿಂದ ಹೆಚ್ಚಿನ ಅನಾಹುತಗಳು ತಪ್ಪಿದಂತಾಗಿದೆ. ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮತ್ತು ನೂತನ ಸೇತುವೆಯ ಗುತ್ತಿಗೆದಾರರು ಆಗಮಿಸಿ, ಮುಂದಿನ ಕ್ರಮದ ಬಗ್ಗೆ ಅವಲೋಕಿಸಿದ್ದಾರೆ.
ಅವ್ಯಾಹತವಾಗಿ ನಡೆಯುತ್ತಿರುವ ಮರಳುಗಾರಿಕೆಯೇ ಸೇತುವೆ ಬಿರುಕು ಬಿಡಲು ಕಾರಣ ಎಂದು ಕೇಳಿಬರುತ್ತಿದ್ದು, ನೈಜ ಕಾರಣ ಇನ್ನಷ್ಟೇ ತಿಳಿಯಬೇಕಾಗಿದೆ.
ಪರ್ಯಾಯ ಮಾರ್ಗವಾಗಿ ಚಲಿಸುವ ವಾಹನಗಳು ಮಂಗಳೂರಿನಿಂದ ಕಾವೂರು, ಕೂಳೂರು, ಜೋಕಟ್ಟೆ,ಪಚ್ಚನಾಡಿ, ವಾಮಂಜೂರು, ಗುರುಪುರ, ಕೈಕಂಬ ಬಜಪೆ ಮೂಲಕ ಚಲಿಸಲು ಕೋರಲಾಗಿದೆ.