ಸವಣೂರಿನಲ್ಲಿ ನೂತನ ಸಭಾಂಗಣ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭ
ಪಶ್ಚಿಮವಾಹಿನಿ ಯೋಜನೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ 12 ಕಡೆ ಅಣೆಕಟ್ಟು
ಸವಣೂರು ಗ್ರಾ. ಪಂ. ನ ನೂತನ ಸಭಾಂಗಣ ಕುಮಾರಧಾರ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ: ಶಾಸಕ ಅಂಗಾರ
ಸವಣೂರು :
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹನ್ನೆರಡು ಕಡೆ ಅಣೆಕಟ್ಟುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.
ಅವರು ಶನಿವಾರ ಸವಣೂರು ಗ್ರಾಮ ಪಂ. ವತಿಯಿಂದ ಪಂಚಾಯಿತಿ ಕಚೇರಿ ಕಟ್ಟಡ ಅಟಲ್ ಸೌಧ ದಲ್ಲಿ ನಿರ್ಮಾಣಗೊಂಡ ನೂತನ ಸಭಾಂಗಣ ಕುಮಾರಧಾರ ಹಾಗೂ ಗ್ರಾ,ಪಂ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಪಂಚಾಯತಿಯ ಅಭಿವೃದ್ಧಿ ಕಾರ್ಯಕ್ರಮಗಳ ಕೈಪಿಡಿ ಪಂಚಪದ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಬೇಸಿಗೆ ಕಾಲದಲ್ಲಿ ಕ್ಷೇತ್ರದಾಧ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ, ಈ ಹಿನ್ನೆಲೆಯಲ್ಲಿ ಕ್ಷೇತ್ರದ ಬಹುತೇಕ ಕಡೆ ಇರುವ ನೀರಿನ ಮೂಲವಾದ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಟಾನ ಮಾಡಲು ಕ್ರಮಕೈಗೊಳ್ಳಲಾಗುವುದು, ಈಗಾಗಲೇ ಶಾಂತಿಮುಗೇರು ಸೇವೆತುವೆಯ ಕೆಳಗಡೆ ಇಂತಹ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ, ಅದೇ ರೀತಿ ಇನ್ನೂ ಹನ್ನೆರಡು ಕಡೆ ಪಶ್ಚಿಮವಾಹಿನಿ ಯೋಜನೆಯಲ್ಲಿ ಅಣೆಕಟ್ಟ ಕಟ್ಟಲು ರಾಜ್ಯ ಸರಕಾರದ ಮೂಲಕ ಕೇಂದ್ರಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಶೀಘ್ರದಲ್ಲೇ ಅನುಮತಿ ದೊರೆಯಲಿದೆ ಎಂದು ಶಾಸಕರು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ಪುತ್ತೂರು ತಾಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ ನಮಗೆ ಅಧಿಕಾರ ಎನ್ನುವುದು ಸೇವೆಗೆ ಹೊರತು ಕೇವಲ ಸ್ಥಾನಮಾನಕ್ಕೆ ಅಲ್ಲ, ನಮ್ಮ ಹಿರಿಯರ ತ್ಯಾಗ ಸೇವೆ ಫಲವಾಗಿ ನಮಗೆ ಉತ್ತಮ ಅವಕಾಶಗಳು ಸಿಗುತ್ತಿವೆ, ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜನರ ಮನದಲ್ಲಿ ಸದಾ ಉಳಿಯುವ ಕೆಲಸ ಮಾಡಬೇಕು, ಸವಣೂರು ಗ್ರಾ.ಪಂ ಆಡಳಿತ ಮಂಡಳಿ ತಾಲೂಕಿನಲ್ಲೇ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಮಾದರಿಯಾಗಿದೆ ಎಂದರು. ಸಭೆಯ ಅಧ್ಯಕ್ಷತೆವಹಿಸಿದ್ದ ಗ್ರಾ, ಪಂ ಅಧ್ಯಕ್ಷೆ ಇಂದಿರಾ ಬಿ.ಕೆ ಮಾತನಾಡಿ ನಾನು ಈ ಊರಿಗೆ ಸೊಸೆಯಾಗಿ ಬರುವಾಗ ನನಗೆ ಆದರ್ಶವಾಗಿ ಕಂಡವರು ನನ್ನ ಮಾವ ಇಲ್ಲಿನ ಹಿರಿಯ ಮುಖಂಡ ರಮೇಶ್ ಕಲ್ಲೂರಾಯ, ಅವರ ತತ್ವಾದರ್ಶಗಳಿಂದ ಸಾಮಾಜಿಕ ಚಟುವಟಿಕೆಗಳಿಂದ ಪ್ರೇರಣೆಗೊಂಡು ನಾನು ಸಮಾಜದಲ್ಲಿ ಕಳಂಕರಹಿತ ಸೇವೆ ಮಾಡಲು ಸಾಧ್ಯವಾಗಿದೆ. ನಾನು ನನ್ನ ತವರು ಮನೆ ಹಾಗೂ ಮಾವನ ಮನೆಯ ಗೌರವಕ್ಕೆ ಚ್ಯುತಿಬಾರದ ರೀತಿಯಲ್ಲಿ ಪಂಚಾಯಿತಿಯಲ್ಲಿ ಕೆಲಸ ಮಾಡಿದ ತೃಪ್ತಿ ಇದೆ. ನನ್ನ ಸಾಧನೆಯಲ್ಲಿ ಇಲ್ಲಿನ ಸಹೃದಯಿ ಜನರ ಸಹಕಾರ ಇದೆ ಎಂದರು.
ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ಧನ್, ಪುತ್ತೂರು ಎ.ಪಿ.ಎಂಸಿ ಅಧ್ಯಕ್ಷ ದಿನೇಶ್ ಮೆದು, ತಾ.ಪಂ,ಉಪಾಧ್ಯಕ್ಷೆ ಲಲಿತಾ ಈಶ್ವರ್, ಸದಸ್ಯೆ ರಾಜೇಶ್ವರಿ, ತಾ.ಪಂ, ಕಾರ್ಯನಿರ್ವಹಣಾಕಾರಿ ನವೀನ್ ಭಂಡಾರಿ ಅತಿಥಿಗಳಾಗಿ ಮಾತನಾಡಿದರು.
ಗ್ರಾ.ಪಂ ಉಪಾಧ್ಯಕ್ಷ ರವಿಕುಮಾರ್, ಸವಣೂರು ಸಿ.ಎ,ಬ್ಯಾಂಕ್ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ, ಶಿಶು ಅಭಿವೃದ್ಧಿ ಯೋಜನಾಕಾರಿ ಸರಸ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕರು, ಸಮಾಜ ಸೇವಕರನ್ನು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಪಂಚಾಯಿತಿ ಸದಸ್ಯ ಗಿರಿಶಂಕರ ಸುಲಾಯ ಪ್ರಸ್ತಾವನೆಗೈದರು. ಪವಿತ್ರಾ ರೂಪೇಶ್ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಅಭಿವೃದ್ಧಿ ಅಧಿಕಾರಿ ನಾರಾಯಣ ಬಿ ಸ್ವಾಗತಿಸಿದರು. ಲೆಕ್ಕಸಹಾಯಕ ಎ.ಮನ್ನಥ ವಂದಿಸಿದರು. ಪಂ ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿರು.
ಸದಸ್ಯರಾದ ಅಬ್ದುಲ್ ರಜಾಕ್, ಜಯಂತಿ ಮಡಿವಾಳ,ಚೆನ್ನು ಮಾಂತೂರು,ಪ್ರಕಾಶ್ ಕುದ್ಮನಮಜಲು,ಸತೀಶ್ ಬಲ್ಯಾಯ,ಗಾಯತ್ರಿ ಬರೆಮೇಲು,ರಾಜೀವಿ ಶೆಟ್ಟಿ, ರಫೀಕ್ ಎಂ.ಎ,ವಸಂತಿ ಬಸ್ತಿ,ಮೀನಾಕ್ಷಿ ಬಂಬಿಲ,ಸತೀಶ್ ಅಂಗಡಿಮೂಲೆ, ಸುಧಾ ನಿಡ್ವಣ್ಣಾಯ,ವೇದಾವತಿ ಅಂಜಯ,ನಾಗೇಶ್ ಓಡಂತರ್ಯ,ಸಿಬಂದಿಗಳಾದ ಪ್ರಮೋದ್ ಕುಮಾರ್ ಬಿ,ದಯಾನಂದ ಮಾಲೆತ್ತಾರು,ಜಯಾ ಕೆ,ಜಯ ಶ್ರೀ, ಶಾರದಾ,ದೀಪಿಕಾ,ವಿಶ್ವಜಿತ್ ಸಹಕರಿಸಿದರು.
ಗ್ರಾ. ಪಂ ಕಛೇರಿ ಅಟಲ್ ಸೌಧದ ಕುಮಾರಧಾರ ಕಟ್ಟಡ, ಪಾಲ್ತಾಡಿ ಗ್ರಾಮದ ಮಂಜುನಾಥನಗರ ಸೋಲಾರ್ ದೀಪ ಹಾಗೂ ಶುದ್ಧ ನೀರಿನ ಘಟಕ, ಸವಣೂರು ಸಿ.ಎ ಬ್ಯಾಂಕ್ ಎದರು ನಿರ್ಮಾಣವಾದ ಬಸ್ಸು ಪ್ರಯಾಣಿಕರ ತಂಗುದಾಣ, ಪುಣ್ಚಪ್ಪಾಡಿ ಗ್ರಾಮದ ಕನ್ಯಾಮಂಗಲ ಕಾಂಕ್ರೀಟ್ ರಸ್ತೆ, ಪಾಲ್ತಾಡಿ ಗ್ರಾಮದ ಅಂಕತಡ್ಕ ಅಂಗನವಾಡಿ ಕೇಂದ್ರ, ಸವಣೂರು ಮುಖ್ಯಪೇಟೆಯಲ್ಲಿ ನಿರ್ಮಾಣವಾದ ಬಸ್ಸು ಪ್ರಯಾಣಿಕರ ತಂಗುದಾಣ, ಮಾಂತೂರು ಬಳಿ ಕುಡಿಯುವ ನೀರಿನ ಟ್ಯಾಂಕ್, ಪಂ ವ್ಯಾಪ್ತಿಯ ಶಾಲಾ ಆವರಣಗೋಡೆ, ಪಂ ವ್ಯಾಪ್ತಿಯ ಸೋಲಾರ್ ದೀಪಗಳು, ಸಿ.ಸಿ ರಸ್ತೆಗಳನ್ನು ಲೋಕಾರ್ಪಣೆ ಮಾಡಲಾಯಿತು. ಕುಮಾರಮಂಗಲದ ನಿವೇಶನ ಹಂಚಿಕೆ ಮಾಡಲಾಯಿತು.