ಪುತ್ತೂರು | ಸೋಂಕಿತರ ಪತ್ತೆಯಲ್ಲಿ ಸಂಕಷ್ಟ:ಹತ್ತಾರು ಜನರ ಹೆಸರಲ್ಲಿ ಒಂದೇ ನಂಬರ್
ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಮತ್ತು ಸೆಕೆಂಡರಿ ಸಂಪರ್ಕಿತರ ಫೋನ್ ನಂಬರ್ಗಳು ತಪ್ಪಾಗಿ ನಮೂದಾಗಿವೆ. ಈ ಕಾರಣದಿಂದ ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡುವುದೇ ಸವಾಲಾಗಿದೆ.
ಅನೇಕ ಬಾರಿ ಪ್ರಾಥಮಿಕ ಸಂಪರ್ಕಿತರು ಮೊಬೈಲ್ ಆಫ್ ಮಾಡಿಟ್ಟುಕೊಳ್ಳುವುದರಿಂದ ಇನ್ನಷ್ಟು ಸಮಸ್ಯೆ ಉಂಟಾಗುತ್ತಿದೆ..!
ಪುತ್ತೂರು ನಗರಸಭೆಯಲ್ಲಿ ಅಧ್ಯಕ್ಷ ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ ನಡೆದ ಕೋವಿಡ್-19 ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.
ಒಬ್ಬ ಕೋವಿಡ್ ಸೋಂಕಿತ ಪತ್ತೆಯಾದರೆ ಆತನ ಪ್ರಾಥಮಿಕ ಸಂಪರ್ಕಿತರು ಎಂಬ ನೆಲೆಯಲ್ಲಿ 30 ಮೊಬೈಲ್ ನಂಬರ್ಗಳನ್ನು ಸಂಗ್ರಹಿಸಬೇಕೆಂಬ ನಿಯಮವಿದೆ.
ಆದರೆ ಅನೇಕ ಮನೆಗಳಲ್ಲಿ ಐದಾರು ಜನ ಮಾತ್ರ ಇರುತ್ತಾರೆ. ಇಂತವರು ಅಕ್ಕಪಕ್ಕದ ಮನೆಯವರ ನಂಬರ್ ಕೂಡ ನೀಡುತ್ತಾರೆ.
ಕೆಲವು ಸಂದರ್ಭಗಳಲ್ಲಿ ಹತ್ತಾರು ಜನರ ಹೆಸರು ನೀಡಿದರೂ, ಮೊಬೈಲ್ ನಂಬರ್ ಒಂದೇ ನೀಡುತ್ತಾರೆ. ಆ ನಂಬರ್ ಆಫ್ ಆಗಿದ್ದಲ್ಲಿ ಅಷ್ಟೂ ಮಂದಿಯ ಮಾಹಿತಿಯೂ ಸಿಗುತ್ತಿಲ್ಲ ಎಂದು ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ಸಂಕಟ ತೋಡಿಕೊಂಡರು.