ವದಂತಿಗಳಿಗೆ ಕಿವಿಗೊಡಬೇಡಿ | SSLC ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್
ಬೆಂಗಳೂರು : SSLC ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಭಾರತದಾದ್ಯಂತ ಕರೋನವೈರಸ್ ನಿಂದ ಲಾಕ್ಡೌನ್ ಘೋಷಣೆ ಆಯಿತು, ಹಾಗಾಗಿ ಎಲ್ಲಾ SSLC ಪರೀಕ್ಷೆಯನ್ನು ಮುಂದೂಡಲಾಯಿತು. ನಂತರ ದಿನದಿಂದ ದಿನಕ್ಕೆ ಲಾಕ್ ಡೌನ್ ಮುಂದುವರಿಯುತ್ತಲೇ ಇದ್ದ ಕಾರಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿಗಳಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದರು. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ರಾಜ್ಯದ ಕೆಲವು ಭಾಗಗಳ ವಿದ್ಯಾರ್ಥಿಗಳಿಗೆ ಕರೆ ಮಾಡಿ ಪರೀಕ್ಷೆಯ ಗೊಂದಲ ಬಗೆಹರಿಸುವ ಜೊತೆಗೆ ಆತ್ಮ ವಿಶ್ವಾಸವನ್ನು ತುಂಬಿದರು.
ಸಚಿವ ಸುರೇಶ್ ಕುಮಾರ್ ಅವರು, ತಮ್ಮ ಕಚೇರಿಯಿಂದ ರಾಜ್ಯದ ಬೆಂಗಳೂರು, ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಕರೆ ಮಾಡಿ ಅಭಿಪ್ರಾಯಗಳನ್ನು ಸಂಗ್ರಹಿಸುವುದರ ಜೊತೆಗೆ ಪರೀಕ್ಷೆಗೆ ಮಾಡಿಕೊಳ್ಳಬೇಕಾದ ಪೂರ್ವ ಸಿದ್ದತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಪರೀಕ್ಷೆ ಮುಂದಕ್ಕೆ ಹೋಗಿದ್ದರಿಂದ ಮಕ್ಕಳು ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿಕ್ಷಣ ಸಚಿವರು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದರು.ಇಲಾಖೆಯ ಆಯುಕ್ತರ ಹಂತದಿಂದ ಹಿಡಿದು ನಿರ್ದೇಶಕರು, ಉಪನಿರ್ದೇಶಕರು, ಬಿಇಒ, ಕ್ಲಸ್ಟರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರ ಹಂತದವರೆಗೂ ಎಲ್ಲರೂ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಸಮರೋಪಾದಿಯಲ್ಲಿ ಮಾಡಬೇಕು ಎಂದು ಸೂಚನೆ ನೀಡಿದ್ದರು.
ಅದರ ಭಾಗವಾಗಿ ಇಂದು ತಾವೇ ಮಕ್ಕಳೊಂದಿಗೆ ಮಾತನಾಡಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದ ಶಿಕ್ಷಣ ಸಚಿವರು, ಸಾಮಾಜಿಕ ಜಾಲತಾಣಗಳಲ್ಲಿಯಾವುದೇ ವದಂತಿ ಹಾಗೂ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ಸೂಚನೆ ನೀಡಿದ್ದಾರೆ.