ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಆಟೋದಲ್ಲಿ ಹೋಗುವವರನ್ನು ತಡೆದ ಪೊಲೀಸರು | ಮಗ ವೃದ್ಧ ಅಪ್ಪನನ್ನು ಎತ್ತಿಕೊಂಡೇ ನಡೆದ !
ಕೊರೊನಾ ವೈರಸ್ ಎಂಬ ಹೆಮ್ಮಾರಿ ಮಾನವ ಸಂಬಂಧಗಳನ್ನು ಪ್ರಶ್ನಿಸುವ, ಕಲಕುವ, ಎತ್ತಿ ಹಿಡಿಯುವ ಘಟನೆಗಳಿಗೆ ದಿನ ನಿತ್ಯ ಸಾಕ್ಷಿಯಾಗುತ್ತಿದೆ. ಅಂತಹ ಒಂದು ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಕೊಲ್ಲಂ ಸಮೀಪದ 65 ವರ್ಷದ ವೃದ್ಧ ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಡಿಸ್ಚಾರ್ಜ್ ಆಗಿ ಆ ವ್ಯಕ್ತಿ ತನ್ನ ಮಗನ ಜತೆ ಮನೆಗೆ ವಾಪಸ್ ಹೋಗುತ್ತಿದ್ದರು. ದಾರಿ ಮಧ್ಯೆ ಪೊಲೀಸರು ಆಟೋ ವನ್ನು ತಡೆದಿದ್ದಾರೆ. ತಾವು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೋಗುತ್ತಿದ್ದೇವೆ ಎಂದರೂ ಕೇಳಿಲ್ಲ. ಕಡೆಗೆ ಆಸ್ಪತ್ರೆಯ ಡಿಸ್ಚಾರ್ಜ್ ಸಮ್ಮರಿ ತೋರಿಸಿದ್ದಾರೆ. ಏನೇ ಮಾಡಿದರೂ ಆಟೋ ಮುಂದೆ ಬಿಡಲಿಲ್ಲ.
ಆದರೇನಂತೆ, ಮಗನಿಗೆ ತಂದೆಯನ್ನು ದಾರಿ ಮಧ್ಯೆ ಬಿಡಲಿಕ್ಕಾಗುತ್ತದಾ? ಅಲ್ಲದೆ ಆತ ಆಧುನಿಕ ಶ್ರವಣ ಕುಮಾರನಾಗಿದ್ದ ! ಆತನ ತಂದೆ ದಪ್ಪಕ್ಕೆ ಇದ್ದರೂ, ಮಗ ತನ್ನ ಪ್ರೀತಿಯ ಅಪ್ಪನನ್ನು ತನ್ನ ಬಲಿಷ್ಠ ಬಾಹುಗಳಲ್ಲಿ ಎತ್ತಿಕೊಂಡು ನಡೆದಿದ್ದಾನೆ. ಅಮ್ಮ ಬ್ಯಾಗು ಹಿಡಿದುಕೊಂಡಿದ್ದಾಳೆ. ಮತ್ತು ಸುರಕ್ಷಿತವಾಗಿ ಮನೆ ತಲುಪಿದ್ದಾರೆ. ಈ ಘಟನೆಯು ಬೆಳಕಿಗೆ ಬರುತ್ತಿದ್ದಂತೆ ಮಗನ ಕಾರ್ಯದ ಮೇಲೆ ಹೊಗಳಿಕೆಯ ಸುರಿಮಳೆಯನ್ನೇ ಜನ ಮಾಡುತ್ತಿದ್ದಾರೆ.
ಅಪ್ಪನನ್ನು ಮಗ ಎತ್ತಿಕೊಂಡು ರಸ್ತೆಯಲ್ಲೇ ಹೋಗುತ್ತಿರುವುದನ್ನು ಅಲ್ಲೇ ಇದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ ವಿಡಿಯೋ ಸಾಮಾಜಿಕ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾದ ಕೇಸ್ ಕೂಡಾ ದಾಖಲಿಸಿದೆ.
Comments are closed.