ಧರ್ಮಸ್ಥಳದಲ್ಲಿ ನಂದಾದೀಪ ಆರಿಹೋಗಿದೆ ಎಂಬ ಸುಳ್ಳು ಸುದ್ದಿಯ ಬಗ್ಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸ್ಪಷ್ಟನೆ

ಧರ್ಮಸ್ಥಳ, ತಿರುಪತಿ ಮುಂತಾದ ತೀರ್ಥ ಕ್ಷೇತ್ರಗಳಲ್ಲಿ ದೀಪ ಆರಿದೆ ಎಂಬ ವದಂತಿ ಎಲ್ಲೆಡೆ ಹರಡುತ್ತಿದ್ದು ಮಹಿಳೆಯರು ತಮ್ಮ ಮನೆಗಳ ಎದುರು ರಾತ್ರಿ ದೀಪಗಳನ್ನು ಬೆಳಗಿದ್ದಾರೆ.ದೇಗುಲದ ದೀಪ ಆರಿ ಹೋಗಿರುವುದು ಅಪಶಕುನದ ಸಂಕೇತ ಎಂಬ ವದಂತಿ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿದೆ. ಕೆಲವು ಮಧ್ಯರಾತ್ರಿ ಎದ್ದು ಮನೆಯಂಗಳ ಸಾರಿಸಿದ ಮಹಿಳೆಯರು ದೀಪ ಹಚ್ಚಿಟ್ಟರು. ದೀಪ ಆರದಂತೆ ನೋಡಿಕೊಂಡರು ಎಂದು ತಿಳಿದುಬಂದಿತ್ತು. ಇಂತಹ ಸುಳ್ಳು ಸುದ್ದಿ ರಾಜ್ಯದ, ದೇಶದ ಹಲವು ಕಡೆ ಹರಡಿತ್ತು.

ಧರ್ಮಸ್ಥಳದ ಬಗ್ಗೆ ಮೂಡಿದ ವದಂತಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಪ್ರಕಟಣೆ ಹೊರಡಿಸುವುದರ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ತರಹದ ಊಹಾಪೋಹದ ವದಂತಿಗೆ ಕಿವಿಕೊಡಬಾರದೆಂದು ಅವರು ಮನವಿ ಮಾಡಿದ್ದಾರೆ. ” ಮಂಜುನಾಥಸ್ವಾಮಿಯ ಬಾಗಿಲು 8 ಗಂಟೆಗೆ ಹಾಕಿದರೆ, ತೆಗೆಯುವುದು ಬೆಳಿಗ್ಗೆ 5 ಗಂಟೆಗೆ. ಬೀಗ ಮುದ್ರೆಯ ದೇವಸ್ಥಾನದೊಳಗೆ ಹೋಗುವವರು ಯಾರು? ನಂದಾದೀಪ ಆರಿಹೋದುದನ್ನು ನೋಡಿದವರು ಯಾರು ” ಎಂದು ಅವರು ಪ್ರಶ್ನಿಸಿದ್ದಾರೆ.

ಇಂತಹಾ ವದಂತಿಗಳಿಂದ ದೂರ ಇದ್ದು, ಬಂದಿರುವ ಮಹಾಮಾರಿಯನ್ನು ಮನೆಯೊಳಗೇ ಇದ್ದು ಓಡಿಸುವ ಕಾರ್ಯ ಆಗಬೇಕೆಂದು ಅವರು ಕರೆ ನೀಡಿದರು. ಅಲ್ಲದೆ, ಮಾಧ್ಯಮದವರು ಕೂಡಾ ಶ್ರೀ ಕ್ಷೇತ್ರವನ್ನು ಸಂಪರ್ಕಿಸದೆ ಸುದ್ದಿ ಪ್ರಕಟಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

Leave A Reply

Your email address will not be published.