Puttur: ಪುತ್ತೂರು: ಚಾಲಕನಿಂದಲೇ ಮಾಲಕನಿಗೆ ಮೋಸ: ಬಾಡಿಗೆಗೆಂದು ಕೊಟ್ಟ ಲಾರಿಯನ್ನು ಅಡವಿಟ್ಟ ಚಾಲಕ

Puttur: ಬಾಡಿಗೆಗೆಂದು ತೆಗೆದುಕೊಂಡು ಹೋದ ಲಾರಿಯನ್ನು ಚಾಲಕ ಅಡವಿಟ್ಟ ಘಟನೆ ನಡೆದಿದೆ. ಲಾರಿ ಕುರಿತು ವಿಚಾರಿಸಲೆಂದು ಹೋದ ಮಾಲಕನಿಗೆ ಜೀವ ಬೆದರಿಕೆ ಹಾಕಿದ್ದು, ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ನಿವಾಸಿ ಫರ್ವೀಜ್ ಎಂ (35) ಎಂಬುವವರು ದೂರು ನೀಡಿದ್ದಾರೆ.
ಲಾರಿ ಚಾಲಕ ಅಸಾಸುದ್ದೀನ್ ಫೈರೋಜ್ ಮತ್ತು ಮಂಗಳೂರಿನ ಕಿರಣ್ @ನೆಸ್ಪೆ ಕಿರಣ್ ಅವರುಗಳು ಆರೋಪಿಗಳು ಎಂದು ವರದಿಯಾಗಿದೆ.
ಫರ್ವಿಜ್ ಅವರು ತಮ್ಮ ಲಾರಿಗೆ ಅಸಾಸುದ್ದೀನ್ ಫೈರೋಜ್ ನನ್ನು ಚಾಲಕನಾಗಿ ನೇಮಿಸಿದ್ದರು. ಮಾ.29 ರಂದು ಸರಕು ಸಾಗಾಟದ ಉದ್ದೇಶಕೆಂದು ಲಾರಿಯನ್ನು ಚಾಲಕ ಪಡೆದಿದ್ದು, ನಂತರ ಲಾರಿಯಾಗಲಿ, ಬಾಡಿಗೆ ಹಣವಾಗಲಿ ನೀಡಲಿಲ್ಲ. ಈ ಕುರಿತು ಮಾಲಕ ಫರ್ವೀಜ್ ವಿಚಾರಣೆ ಮಾಡಿದಾಗ ಲಾರಿ ಕೆಟ್ಟು ಹೋಗಿದೆ ಎನ್ನುವ ಸಬೂಬು ಹೇಳಿದ್ದಾನೆ.
ದಿನಗಳು ಕಳೆದರೂ ಚಾಲಕ ಲಾರಿ ವಾಪಾಸು ತರದ ಕಾರಣ ಮತ್ತೆ ಪ್ರಶ್ನೆ ಮಾಡಿ ಮಾಲಕ ಫರ್ವಿಜ್ ಅವರಿಗೆ ಲಾರಿಯನ್ನು ಮಂಗಳೂರಿನ ನೀರುಮಾರ್ಗದಲ್ಲಿರುವ ಕಿರಣ್ @ನೆಸ್ಲೆ ಕಿರಣ್ ಎಂಬಾತನಿಗೆ ಅಡವಿಟ್ಟಿರುವುದಾಗಿ ಹೇಳಿದ್ದಾನೆ. ನಿನಗೆ ಬೇಕಿದ್ದರೆ ಅಲ್ಲಿಗೆ ಹೋಗು ಎನ್ನುವ ಉಡಾಫೆ ಉತ್ತರ ಕೊಟ್ಟಿದ್ದಾನೆ ಆರೋಪಿ.
ಫರ್ವೀಜ್ ಅವರು ಎ.3 ರಂದು ನೀರುಮಾರ್ಗದ ಕಿರಣ್ ಅವರನ್ನು ಭೇಟಿಯಾಗಿ ವಿಚಾರಿಸಿದಾಗ, ʼಲಾರಿ ನನ್ನ ಬಳಿ ಇದೆ. ಇಲ್ಲಿಗೆ ನೀವು ಬಂದರೆ ಜೀವಸಹಿತ ವಾಪಸ್ ಹೋಗುವುದಿಲ್ಲ. ಮರ್ಯಾದೆಯಿಂದ ಹೋಗಿ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜೀವಬೆದರಿಕೆ ಹಾಕಿರುವ ಕುರಿತು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಪೊಲೀಸ್ ಠಾಣೆಯಲ್ಲಿ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
Comments are closed.