KSRTC: ಪುರುಷರಿಗೆ ಉಚಿತ ಟಿಕೆಟ್ ವಿತರಿಸಿ ಸಾರಿಗೆ ನೌಕರರಿಂದ ಪ್ರತಿಭಟನೆ

KSRTC: ರಾಜ್ಯ ಸರ್ಕಾರವು ತಾನು ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣವನ್ನು ಘೋಷಿಸಿ ಶಕ್ತಿ ಯೋಜನೆಯನ್ನು ಜಾರಿಗೊಳಿಸಿತು. ಇದೀಗ ಸಾರಿಗೆ ನೌಕರರು, ಪುರುಷರಿಗೂ ಕೂಡ ಉಚಿತ ಟಿಕೇಟು ವಿತರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಹೌದು, ಕೆಎಸ್‌ಆರ್‌ಟಿಸಿ ಅಂಡ್ ಬಿಎಂಟಿಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರ ಒಂದು ಗಟ್ಟಿ ನಿರ್ಧಾರವನ್ನು ಮೇ 31 ರೊಳಗೆ ಪ್ರಕಟಿಸಬೇಕು, ಇಲ್ಲದಿದ್ದರೇ ಜೂ.1 ರಂದು ರಾಜ್ಯದ ಎಲ್ಲಾ ಪುರುಷ ಪ್ರಯಾಣಿಕರಿಗೂ ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡುವ ಮೂಲಕ ವಿನೂತನ ಅಹಿಂಸಾ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಹೇಳಿದೆ.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷ ಕೆ.ಆರ್.ವಿಜಯಕುಮಾರ್ ಮಾತನಾಡಿ, ಈ ಹಿಂದೆ ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಕ್ಕೆ ಹಲವಾರು ಮನವಿಗಳನ್ನು ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗದೆ. ಸರ್ಕಾರ ಮತ್ತು ಸಂಸ್ಥೆಯ ಅಧಿಕಾರಿಗಳು, ಸಾರಿಗೆ ಮಂತ್ರಿಗಳು, ಅಧ್ಯಕ್ಷ, ಉಪಾಧ್ಯಕ್ಷರುಗಳ ಸಭೆ ಕರೆದು ಚರ್ಚಿಸಿ ಒಂದು ತೀರ್ಮಾನವನ್ನು ಪ್ರಕಟಿಸುವುದಾಗಿ ಹೇಳಿ ಸಭೆ ಮುಂದೂಡಿದ್ದರು. ಈ ಹಿನ್ನೆಲೆಯಲ್ಲಿ ಸಂಘವು ಸಭೆ ಸೇರಿ ಮೇ 31ರ ಒಳಗಾಗಿ ಸರ್ಕಾರ ಸಮಸ್ಯೆಯ ಇತ್ಯರ್ಥಕ್ಕಾಗಿ ನಿರ್ಧಾರವನ್ನು ಪ್ರಕಟಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ನೌಕರರ, ಸಂಸ್ಥೆಯ ಹಾಗೂ ಸಾರ್ವಜನಿಕ ಪ್ರಯಾಣಿಕರ ಹಿತ ದೃಷ್ಟಿಯಿಂದ, ತೀರ್ಮಾನಕ್ಕೆ ಬರದೆ ಹೋದರೆ ಅನಿವಾರ್ಯವಾಗಿ ಜೂ.1 ರಂದು ಒಂದು ದಿನ ರಾಜ್ಯದ ಎಲ್ಲಾ ಪುರುಷ ಪ್ರಯಾಣಿಕರಿಗೂ ಶಕ್ತಿ ಯೋಜನೆಯ ಉಚಿತ ಟಿಕೆಟ್ ಅನ್ನು ನೀಡುವ ಮೂಲಕ ವಿನೂತನ ಅಹಿಂಸಾ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
Comments are closed.