ATM: ಎಟಿಎಂ ಟ್ರಾನ್ಸಾಕ್ಷನ್ ಶುಲ್ಕ ಹೆಚ್ಚಳ ವಿವರ ಇಲ್ಲಿದೆ!

ATM: ಎಟಿಎಂ (ATM) ಟ್ರಾನ್ಸಾಕ್ಷನ್ ಶುಲ್ಕಗಳು ಪರಿಷ್ಕರಣೆಗೊಂಡಿದ್ದು, ಹೊಸ ದರಗಳು ಇಂದಿನಿಂದ ಚಾಲನೆಗೆ ಬರಲಿವೆ. ನಿಗದಿತ ಮಿತಿಗಿಂತ ಹೆಚ್ಚು ಬಾರಿ ನೀವು ಎಟಿಎಂ ಬಳಸಿದರೆ ನಿರ್ದಿಷ್ಟ ಶುಲ್ಕ ಪಾವತಿಸಬೇಕು. ಇಂದಿನಿಂದ ಈ ಶುಲ್ಕ 2 ರೂ.ನಷ್ಟು ಹೆಚ್ಚಳವಾಗಲಿದೆ. ಕ್ಯಾಷ್ ವಹಿವಾಟು ಮಿತಿ ಮೀರಿದರೆ ಪ್ರತೀ ವಹಿವಾಟಿಗೆ ಇದ್ದ ಶುಲ್ಕವನ್ನು 21 ರೂ.ನಿಂದ 23 ರೂ.ಗೆ ಹೆಚ್ಚಿಸಲಾಗಿದೆ. ಆರ್ಬಿಐ ಮಾರ್ಚ್ 28ರಂದು ಈ ಸಂಬಂಧ ಸುತ್ತೋಲೆ ಹೊರಡಿಸಿ, ಹೊಸ ಎಟಿಎಂ ವಹಿವಾಟು ಶುಲ್ಕಗಳು ಮೇ 1ರಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿತ್ತು.
ಆರ್ಬಿಐ ಆಗಾಗ್ಗೆ ಎಟಿಎಂ ವಹಿವಾಟು ಶುಲ್ಕಗಳನ್ನು ಪರಿಷ್ಕರಿಸುತ್ತಿರುತ್ತದೆ. ಸದ್ಯದ ಪರಿಷ್ಕರಣೆ ಪ್ರಕಾರ ಮೆಟ್ರೋ ನಗರಗಳಲ್ಲಿ ಜನರು ತಮ್ಮ ಕಾರ್ಡ್ನ ಬ್ಯಾಂಕುಗಳ ಎಟಿಎಂಗಳಲ್ಲಿ ಯಾವುದೇ ಶುಲ್ಕ ಇಲ್ಲದೇ ಒಂದು ತಿಂಗಳಲ್ಲಿ ಐದು ಬಾರಿ ವಹಿವಾಟು ನಡೆಸಬಹುದು. ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ಫ್ರೀ ಟ್ರಾನ್ಸಾಕ್ಷನ್ 3ಕ್ಕೆ ನಿಗದಿ ಮಾಡಲಾಗಿದೆ. ಈ ಸಂಖ್ಯೆ ಮೀರಿದರೆ ಆಗ ಶುಲ್ಕ ಜಾರಿಗೆ ಬರುತ್ತದೆ. ಇಲ್ಲಿ ವಹಿವಾಟು ಎಂದರೆ ಹಣ ವಿತ್ಡ್ರಾ ಆಗಿರಬಹುದು, ಬ್ಯಾಲನ್ಸ್ ಪರಿಶೀಲನೆ ಆಗಿರಬಹುದು, ಪಿನ್ ಬದಲಾವಣೆ ಇರಬಹುದು.
ಇನ್ನು, ಮೆಟ್ರೋ ಅಲ್ಲದ ನಗರಗಳಲ್ಲಾದರೆ ಸ್ವಂತ ಬ್ಯಾಂಕ್ ಎಟಿಎಂಗಳಲ್ಲಿ 5 ಮತ್ತು ಬೇರೆ ಬ್ಯಾಂಕ್ ಎಟಿಎಂಗಳಲ್ಲಿ 5 ವಹಿವಾಟುಗಳನ್ನು ಶುಲ್ಕ ರಹಿತವಾಗಿ ಮಾಡಬಹುದು.
Comments are closed.