Vitla: ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ದರೋಡೆ ಪ್ರಕರಣ; ಕೇರಳ ಪೊಲೀಸ್‌ ಸೇರಿ ನಾಲ್ವರ ಬಂಧನ

Vitla; ಜ.3 ರಂದು ಇಡಿ ಅಧಿಕಾರಿಗಳ ರೀತಿ ನಟಿಸಿ ದರೋಡೆ ಮಾಡಿದ ಘಟನೆಯೊಂದು ಬೋಳಂತೂರು ನಾರ್ಶ ಸುಲೈಮಾನ್‌ ಹಾಜಿ ಮನೆಯಲ್ಲಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧನ ಮಾಡಿದ್ದಾರೆ. ಬಂಧನಕ್ಕೊಳಗಾದವರಲ್ಲಿ ಓರ್ವ ಆರೋಪಿ ಕೇರಳ ಪೊಲೀಸ್‌ ಎಂಬ ಮಾಹಿತಿ ವರದಿಯಾಗಿದೆ.

ತ್ರಿಶೂರು ಕೊಡಂಗಲ್ಲೂರು ಪೊಲೀಸ್‌ ಠಾಣೆಯಲ್ಲಿ ಎಎಸ್‌ಐ ಆಗಿದ್ದ ಶಹೀರ್‌ ಬಾಬು (49) ಎಂಬಾತನನ್ನು ವಿಟ್ಲ ಪೊಲೀಸರು ಬಂಧನ ಮಾಡಿ ಕರೆತಂದಿದ್ದಾರೆ. ಇವರ ಜೊತೆಗೆ ಇಕ್ಬಾಲ್‌ ಪರ್ಲಿಯ ಬಂಟ್ವಾಳ (38), ಸಿರಾಜುದ್ದೀನ್‌ ನಾರ್ಶ (37), ಅಬ್ಸಾರ್‌ ಬಜಾಲ್‌ (28) ಬಂಧಿಸಲ್ಪಟ್ಟ ಇತರ ಆರೋಪಿಗಳು.

ಶಹೀರ್‌ ಬಾಬು ನಕಲಿ ಇ.ಡಿ. ತಂಡ ಕಟ್ಟಿಕೊಂಡು ತನ್ನ ಪಾಲಿನ ಮೊತ್ತವನ್ನು ಪಡೆದಿದ್ದಾನೆ. ಈತ ಮಂಗಳೂರಿಗೆ ಬಂದು ಯಾವ ರೀತಿಯಲ್ಲಿ ಪ್ಲ್ಯಾನ್‌ ಮಾಡಬೇಕೆಂದು ಹೇಳುತ್ತಿದ್ದ. ಇ.ಡಿ. ಅಧಿಕಾರಿಗಳ ರೀತಿ ನಟಿಸುವಂತೆಯೂ, ದರೋಡೆ ಮಾಡಲು, ತಪ್ಪಿಸಿಕೊಳ್ಳುವ ಎಲ್ಲಾ ಮಾಹಿತಿಯನ್ನು ಈತ ನೀಡಿದ್ದ. ಈ ದರೋಡೆ ನಡೆದ ನಂತರವೂ ಈತ ಎಂದಿನಂತೆ ತನ್ನ ಪೊಲೀಸ್‌ ಕೆಲಸಕ್ಕೆ ಹಾಜರಾಗುತ್ತಿದ್ದ. ಆಗಾಗ್ಗೆ ರಜೆ ಕೂಡಾ ಪಡೆಯುತ್ತಿದ್ದ. ಮೊದಲಿಗೆ ವಿಟ್ಲ ಪೊಲೀಸರ ತಂಡವು ಕೇರಳಕ್ಕೆ ತೆರಳಿ ದಾಳಿ ಮಾಡುವ ಮಾಹಿತಿ ಕುರಿತು ಈತನಿಗೆ ತಿಳಿಯಿತು. ಹಾಗಾಗಿ ದರೋಡೆಕೋರರು ಪರಾರಿಯಾಗುವಂತೆ ಮಾಡಲು ಸಫಲನಾಗಿದ್ದ.

ಕೇರಳದ ಕೊಟ್ಟಾಯಂ ನಿವಾಸಿ ಅನಿಲ್‌ ಫೆರ್ನಾಂಡಿಸ್‌, ಸಚಿನ್‌, ಶಬಿನ್‌ ಎನ್ನುವ ಆರೋಪಿಗಳನ್ನು ಪೊಲೀಸರು ಈ ಪ್ರಕರಣದಲ್ಲಿ ಈಗಾಗಲೇ ಬಂಧನ ಮಾಡಿದ್ದರು. ಇದೀಗ ಒಟ್ಟು ಏಳು ಆರೋಪಿಗಳ ಬಂಧನವಾಗಿದೆ. ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಈ ದರೋಡೆ ಪ್ರಕರಣದ ಇ.ಡಿ. ಅಧಿಕಾರಿಯಂತೆ ನಟಿಸಿದವ ಅಂದರೆ ಪ್ರಧಾನ ಆರೋಪಿಯ ಪತ್ತೆ ಕಾರ್ಯ ಚುರುಕುಗೊಂಡಿದೆ.

Comments are closed.