Mandya: ತಮ್ಮನ ಕೊಲೆಗೆ ಅಣ್ಣ ಸುಪಾರಿ ನೀಡಿ ಕುಂಭಮೇಳಕ್ಕೆ ಹೋದ!

Mandya: ಮದ್ದೂರು ತಾಲೂಕಿನ ಲಕ್ಷ್ಮೇಗೌಡನದೊಡ್ಡಿ ಗ್ರಾಮದ ಕೃಷ್ಣೇಗೌಡ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು, ಕೊಲೆಗೆ ಅಣ್ಣನೇ ಸುಪಾರಿ ನೀಡಿರುವುದು ತಿಳಿದು ಬಂದಿದೆ. ಸುಪಾರಿ ನೀಡಿದ ಅಣ್ಣ, ತಮ್ಮನ ಹತ್ಯೆಗಯ ನಾಲ್ಕೈದು ದಿನಗಳ ಮುನ್ನ ಪ್ರಯಾಗರಾಜ್‌ ಕುಂಭಮೇಳಕ್ಕೆ ಮತ್ತೊಬ್ಬ ಆರೋಪಿಯ ಜೊತೆ ತೆರಳಿದ್ದ. ನಂತರ ತನಗೆ ಏನೂ ಗೊತ್ತಿಲ್ಲ ಎನ್ನುವಂತೆ ಇದ್ದ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.

ಫೆ.11 ರಂದು ಕೃಷ್ಣೇಗೌಡ ಹತ್ಯೆ ನಡೆದಿತ್ತು. ಐದು ಲಕ್ಷ ರೂ. ಸುಪಾರಿ ನೀಡಿ ಅಣ್ಣ ಶಿವನಂಜೇಗೌಡ ಅಲಿಯಾಸ್‌ ಗುಡ್ಡಪ್ಪನನ್ನು ಬಂಧನ ಮಾಡಲಾಗಿದೆ. ಆರೋಪಿ ಮಳವಳ್ಳಿ ತಾಲೂಕಿನ ಚಂದ್ರಶೇಖರ್‌ ಎನ್‌.ಎಸ್‌ ಎಂಬಾತನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸುಪಾರಿ ವಿಷಯ ಹೊರಬಂದಿದೆ. ಈ ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದ ಎಲ್ಲಾ ಎಂಟು ಮಂದಿ ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಅಣ್ಣ ಶಿವನಂಜೇಗೌಡ ತಮ್ಮ ಮಾಡಿದ ಸಾಲವನ್ನು ತೀರಿಸಿದ್ದ. ಇದಕ್ಕೆ ಪ್ರತಿಯಾಗಿ ಕೃಷ್ಣೇಗೌಡ ತನ್ನ ಜಮೀನನ್ನು ಶಿವನಂಜೇಗೌಡನ ಪತ್ನಿಯ ಹೆಸರಿಗೆ ಮಾಡಿದ್ದರೂ ಜಮೀನನ್ನು ಬಿಟ್ಟುಕೊಡದೆ ಆತನ ವಿರುದ್ಧವೇ ಪ್ರಕರಣ ದಾಖಲು ಮಾಡಿದ್ದರು. ಇದರಿಂದ ಅಣ್ಣ ಶಿವನಂಜೇಗೌಡ ತಮ್ಮನ ಕೊಲೆಗೆ ಸಂಚು ಮಾಡಿದ್ದ.

Comments are closed.