Ranveer Allahabadia: ಪೋಷಕರ ಮಿಲನ ಕುರಿತು ಅಶ್ಲೀಲ ಹೇಳಿಕೆ ಪ್ರಕರಣ; FIR ರದ್ದು ಕೋರಿ ರಣವೀರ್ ಅಲಹಬಾಡಿಯಾ ಸುಪ್ರೀಂ ಕೋರ್ಟ್ ಮೊರೆ

Ranveer Allahabadia: ಯೂಟ್ಯೂಬ್ ಶೋವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್, ಕಂಟೆಂಟ್ ಕ್ರಿಯೇಟರ್ ರಣವೀರ್ ಅಲಹಬಾಡಿಯಾ ಅವರು ಸುಪ್ರೀಂ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ರಣವೀರ್ ವಿವಿಧ ರಾಜ್ಯಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ ಮತ್ತು ಅವುಗಳನ್ನು ಒಟ್ಟಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿದ್ದಾರೆ. ಅಲಹಬಾಡಿಯಾ ಪರವಾಗಿ ವಕೀಲ ಅಭಿನವ್ ಚಂದ್ರಚೂಡ್ ಅವರು ಸಿಜೆಐ ಸಂಜೀವ್ ಖನ್ನಾ ಅವರಿಂದ ಶೀಘ್ರ ವಿಚಾರಣೆಗೆ ಒತ್ತಾಯಿಸಿದರು. ಆದರೆ ಆರಂಭಿಕ ವಿಚಾರಣೆಯ ಬೇಡಿಕೆಯನ್ನು ಮೌಖಿಕವಾಗಿ ಪರಿಗಣಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ರಣವೀರ್ ಅವರ ವಕೀಲ ಅಭಿನವ್ ಚಂದ್ರಚೂಡ್ ಅವರಿಗೆ ತಿಳಿಸಿದೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಅಲಹಬಾಡಿಯಾ ಅವರ ವಕೀಲರನ್ನು ಮೊದಲು ರಿಜಿಸ್ಟ್ರಿಯನ್ನು ಸಂಪರ್ಕಿಸುವಂತೆ ಹೇಳಿದರು.
ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಶೋನಲ್ಲಿ ನಿಂದನೀಯ ಭಾಷೆ ಬಳಸಿ ಸಿಕ್ಕಿಬಿದ್ದಿರುವ ರಣವೀರ್ ಅಲಹಬಾಡಿಯಾಗೆ ಪೊಲೀಸರು ಎರಡನೇ ಬಾರಿಗೆ ಸಮನ್ಸ್ ಕಳುಹಿಸಿದ್ದಾರೆ. ಇಂದು ಮತ್ತೆ ಹಾಜರಾಗುವಂತೆ ಸಮನ್ಸ್ ಕಳುಹಿಸಲಾಗಿದೆ. ಹಾಗೂ ಖಾರ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ಮಹಾರಾಷ್ಟ್ರ ಸೈಬರ್ ಸೆಲ್ ಮತ್ತು ಮುಂಬೈ ಪೊಲೀಸರು ಮುಂದಿನ ಐದು ದಿನಗಳಲ್ಲಿ ತಮ್ಮ ಮುಂದೆ ಹಾಜರಾಗುವಂತೆ ಸಮಯ್ ರೈನಾ ಅವರನ್ನು ಕೇಳಿದ್ದಾರೆ. ಅಲಹಬಾಡಿಯಾ ಅವರು ಗುರುವಾರ ಖಾರ್ ಪೊಲೀಸ್ ಠಾಣೆಯಲ್ಲಿ ಹಾಜರಾಗಬೇಕಾಗಿತ್ತು. ಆದರೆ ಮಾಧ್ಯಮಗಳಿಗೆ ಹೆದರಿ ಬರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದರು. ವಿಚಾರಣೆಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಅಲಹಬಾಡಿಯಾಗೆ ಸ್ಪಷ್ಟಪಡಿಸಲಾಗಿದೆ ಮತ್ತು ಅವರು ಶುಕ್ರವಾರ ಬರಬೇಕಾಗುತ್ತದೆ ಎಂದು ಅಧಿಕಾರಿ ಹೇಳಿದರು.
‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಎಂಬ ಯೂಟ್ಯೂಬ್ ಶೋನಲ್ಲಿ ಅಲಹಬಾಡಿಯಾ ಅವರ ಅಸಭ್ಯ ಹೇಳಿಕೆಗೆ ಸಂಬಂಧಿಸಿದಂತೆ ಸೈಬರ್ ಸೆಲ್ ಮತ್ತು ಮುಂಬೈ ಪೊಲೀಸರು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ಅಧಿಕಾರಿಗಳ ಪ್ರಕಾರ, ರೈನಾ ಅಮೆರಿಕದಲ್ಲಿದ್ದು, ತನಿಖಾ ಅಧಿಕಾರಿಗಳ ಮುಂದೆ ಹಾಜರಾಗಲು ಹೆಚ್ಚಿನ ಸಮಯ ಕೋರಿದ್ದಾರೆ. ಫೆಬ್ರವರಿ 17ರ ಮೊದಲು ಹೇಳಿಕೆಯನ್ನು ದಾಖಲಿಸಲು ಮುಂಬೈ ಪೊಲೀಸರು ರೈನಾಗೆ ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಸೈಬರ್ ಸೆಲ್ ಫೆಬ್ರವರಿ 18 ರಂದು ಅವರಿಗೆ ಸಮನ್ಸ್ ನೀಡಿದೆ. ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮವನ್ನು ಆಯೋಜಿಸಿದ್ದ ಅಲಹಬಾಡಿಯಾ ಮತ್ತು ಹಾಸ್ಯನಟ ರೈನಾ ಸೇರಿದಂತೆ 40 ಕ್ಕೂ ಹೆಚ್ಚು ಜನರಿಗೆ ಮಹಾರಾಷ್ಟ್ರ ಸೈಬರ್ ವಿಭಾಗವು ಸಮನ್ಸ್ ನೀಡಿದೆ.
ಅಲಹಬಾದಿಯಾ ಅವರು ವೀಡಿಯೋ ಬಿಡುಗಡೆ ಮಾಡಿ ಕ್ಷಮೆ ಯಾಚಿಸಿದ್ದಾರೆ. ಶಿವಸೇನಾ ಸಂಸದ ನರೇಶ್ ಮ್ಹಾಸ್ಕೆ ಅವರು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸಲು ಕಾನೂನನ್ನು ಒತ್ತಾಯ ಮಾಡಿದ್ದಾರೆ.
Comments are closed.