Ordinance : ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರಿಂದ ಬಿತ್ತು ಸಹಿ – ಸುಗ್ರೀವಾಜ್ಞೆಯಲ್ಲಿ ಇರುವುದೇನು?

Ordinance: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮೂಗುದಾರ ಹಾಕಲು ರಾಜ್ಯ ಸರ್ಕಾರ (State Govt) ಸುಗ್ರೀವಾಜ್ಞೆ ಹೊರಡಿಸಲು ರಾಜ್ಯಪಾಲರಿಗೆ ಕಳಿಸಿದ್ದು ಅಂತಿಮವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thavar Chand Gehlot) ಸುಗ್ರೀವಾಜ್ಞೆಗೆ (Ordinance) ಅನುಮೋದನೆ ನೀಡಿದ್ದಾರೆ.

ಹೌದು, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ (Micro Finance) ಕಿರುಕುಳ ದಿನೇ ದಿನೇ ಹೆಚ್ಚಾಗುತ್ತಿತ್ತು, ಈ ಸಂಸ್ಥೆಗಳ ಕಿರುಕುಳಕ್ಕೆ ಅನೇಕರು ಆತ್ಮಹತ್ಯೆ (Suicide) ಮಾಡಿಕೊಂಡು ಸಾವನ್ನಪ್ಪಿದ್ದರು. ಈ ಮೈಕ್ರೋ ಫೈನಾನ್ಸ್ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಕೊನೆಗೂ ಸಮ್ಮತಿ ಸೂಚಿಸಿದ್ದು, ಸಾಲ ವಸೂಲಿ ವೇಳೆ ಸಾರ್ವಜನಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಿಸಲು ಸರ್ಕಾರ ಪ್ರಯೋಗಿಸಿದ ಅಸ್ತ್ರವಾದ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ.

ಸುಗ್ರೀವಾಜ್ಞೆಯಲ್ಲಿ ಏನಿದೆ?:
ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ನೋಂದಣಿ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ಪಡೆಯದೆ ಯಾವುದೇ ಸಾಲವನ್ನು ಮಂಜೂರು ಮಾಡುವಂತಿಲ್ಲ ಮತ್ತು ಯಾವುದೇ ಸಾಲವನ್ನು ವಸೂಲು ಮಾಡುವಂತೆಯೂ ಇಲ್ಲ. ಸಾಲ ನೀಡುವ ಸಂಸ್ಥೆಗಳು ನಿಯಮಬಾಹಿರವಾಗಿ ನಡೆದುಕೊಂಡರೆ ಅಂತಹ ಸಂಸ್ಥೆಗಳನ್ನು ರದ್ದುಗೊಳಿಸಬಹುದು. ಆದರೆ, ಅವುಗಳ ಅಹವಾಲುಗಳನ್ನು ಆಲಿಸಲು ಅವಕಾಶ ನೀಡಬೇಕು.

ಸಂಸ್ಥೆಗಳ ಅಹವಾಲು ಆಲಿಸದೆ ನೋಂದಣಿ ರದ್ದು ಮಾಡುವಂತಿಲ್ಲ. ಸಾಲ ನೀಡುವ ಸಂಸ್ಥೆಗಳು ಅಥವಾ ಲೇವಾದೇವಿದಾರರು ಭದ್ರತೆಯನ್ನು ಕೋರುವಂತಿಲ್ಲ. ಸಾಲ ನೀಡುವ ವೇಳೆ ವಿಧಿಸುವ ಬಡ್ಡಿ ದರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸಾಲಗಾರರೊಂದಿಗಿನ ಎಲ್ಲಾ ಪತ್ರ ವ್ಯವಹಾರಗಳು ಕನ್ನಡದಲ್ಲಿರಬೇಕು. ಷರತ್ತುಗಳು ಅರ್ಥಪೂರ್ಣವಾಗಿದ್ದು, ಸಾಲಗಾರನು ಸೂಕ್ತ ನಿರ್ಧಾರ ಕೈಗೊಳ್ಳುವ ರೀತಿಯಲ್ಲಿರಬೇಕು. ಸ್ಥಳೀಯ ಪ್ರದೇಶದಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿರಬೇಕು ಎಂದು ಉದ್ದೇಶಿತ ಕಾಯ್ದೆಯಲ್ಲಿ ಹೇಳಲಾಗಿದೆ.

Comments are closed.