Adur Hospital: ಬಾಲಕನ ಕೆನ್ನೆಯ ಗಾಯಕ್ಕೆ ಸ್ಟಿಚ್‌ ಹಾಕೋ ಬದಲು ಫೆವಿಕ್ವಿಕ್‌ ಹಾಕಿದ ನರ್ಸ್‌!

Adur Hospital: ಬಾಲಕನ ಕೆನ್ನೆಯ ಮೇಲೆ ಆದ ಗಾಯಕ್ಕೆ ಸ್ಟಿಚ್ ಹಾಕುವ ಬದಲು ನರ್ಸ್‌ವೊಬ್ಬಳು ಫೆವಿಕ್ವಿಕ್‌ ಹಾಕಿದ ಘಟನೆಯೊಂದು ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಜ.14 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗುರುಕಿಶನ್‌ ಅಣ್ಣಪ್ಪ ಹೊಸಮನಿ (7 ವರ್ಷ) ಎಂಬ ಬಾಲಕನ ಕೆನ್ನೆಯ ಮೇಲೆ ಗಾಯ ಉಂಟಾಗಿತ್ತು. ಆಟ ಆಡುವ ಸಂದರ್ಭ ಬಾಲಕ ಗಾಯಮಾಡಿಕೊಂಡಿದ್ದ. ಗಾಯ ಬಹಳ ಆಳಕ್ಕೆ ಇಳಿದಿದ್ದರಿಂದ ರಕ್ತ ಕೂಡಾ ಬರುತ್ತಿತ್ತು. ಪೋಷಕರು ಕೂಡಲೇ ಆತನನ್ನು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ನರ್ಸ್‌ ಜ್ಯೋತಿ ಎಂಬುವವರು ಬಾಲಕನ ಗಾಯಕ್ಕೆ ಹೊಲಿಗೆ ಹಾಕೋದನ್ನು ಬಿಟ್ಟು ಫೆವಿಕ್ವಿಕ್‌ ಗಮ್‌ ಅಂಟಿಸಿದ್ದಾರೆ.

ಇತ್ತ ಮನೆ ಮಂದಿ ನರ್ಸ್‌ ಬಳಿ ಫೆವಿಕ್ವಿಕ್‌ ಯಾಕೆ ಹಾಕಿದ್ದೀರಿ ಎಂದು ಕೇಳಿದ್ದಕ್ಕೆ ಸ್ಟಿಚ್‌ ಹಾಕ್ತಾ ಇದ್ದಿದ್ದರೆ ಬಾಲಕನ ಕೆನ್ನೆ ಮೇಲೆ ಕಲೆ ಆಗ್ತಾ ಇತ್ತು ಎಂದು ಹೇಳಿದ್ದಾಳೆ. ನನಗೆ ತಿಳಿದ ಮಟ್ಟಿಗೆ ಚಿಕಿತ್ಸೆ ಮಾಡಿದ್ದೇನೆ. ನೀವು ಫೆವಿಕ್ವಿಕ್‌ ಹಚ್ಚಬೇಡಿ ಎಂದು ಹೇಳಿದ್ದರೆ ನಾವು ಬೇರೆ ರೆಫರ್‌ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ. ಇದನ್ನು ಪೋಷಕರು ವೀಡಿಯೋ ಮಾಡಿದ್ದಾರೆ. ಹಾಗೂ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರನ್ನು ನೀಡಿದ್ದಾರೆ.

ಈ ಕುರಿತು ವರದಿ ಪಡೆದು ಕ್ರಮ ಜರುಗಿಸಲು ಡಿ.ಹೆಚ್‌.ಒ ರಾಜೇಶ್‌ ಸುರಗಿಹಳ್ಳಿ ಆದೇಶ ನೀಡಿದ್ದಾರೆ. ಹಾಗೆನೇ ಫೆವಿಕ್ವಿಕ್‌ ಹಚ್ಚಿ ನಿರ್ಲಕ್ಷ್ಯ ತೋರಿದ ನರ್ಸ್‌ ಜ್ಯೋತಿಯನ್ನು ಅಮಾನತು ಮಾಡಲು ಹಿಂದೇಟು ಹಾಕಿರುವ ಕುರಿತು ವರದಿಯಾಗಿದೆ.

Comments are closed.