Mangaluru: ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ; ಮೂವರ ಬಂಧನ

Mangaluru: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿ ಕೆ.ಸಿರೋಡ್ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.
ಮಹತ್ವದ ಕಾರ್ಯಾಚರಣೆ ಮಾಡಿದ ಪೊಲೀಸರು ಮೂವರು ಆರೋಪಿಗಳನ್ನು ತಮಿಳು ನಾಡಿನ ತಿರುನಲ್ವೇಲಿಯಲ್ಲಿ ಬಂಧಿಸಿದ್ದಾರೆ.
ಸೋಮವಾರ (ಜ.20) ಸುದ್ದಿಗಾರರಿಗೆ ಈ ಕುರಿತು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಒಟ್ಟು ಎಂಟು ಪೊಲೀಸ್ ತಂಡಗಳನ್ನು ಮಾಡಲಾಗಿದ್ದು, ಮುಂಬೈ, ಕೇರಳ ತಮಿಳುನಾಡಿಗೆ ಪೊಲೀಸರು ಹೋಗಿದ್ದು, ಅಲ್ಲಿಂದ ಮಾಹಿತಿಯನ್ನು ಆಧರಿಸಿ, ತಿರುನಲ್ವೇಲಿಯಲ್ಲಿ ಮೂವರು ಸಿಕ್ಕಿಬಿದ್ದಿದ್ದಾರೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದ್ದು, ಪೊಲೀಸ್ ಕಸ್ಟಡಿಗೆ ತೆಗೆದುಕೊಂಡ ನಂತರ ಹೆಚ್ಚಿನ ಮಾಹಿತಿಯ ಕುರಿತು ವಿವರಣೆ ನೀಡುವುದಾಗಿ ಹೇಳಿದ್ದಾರೆ.
ತಮಿಳುನಾಡಿನ ತಿರುನಲ್ವೇಲಿಯ ಎಂಬಲ್ಲಿ ಮುರುಗನ್ ಡಿ.ದೇವರ್(35), ಯಶೋವಾ ರಾಜೇಂದ್ರನ್ ಮತ್ತು ಕಣ್ಣನ್ (36) ಎಂಬ ಮೂವರನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳಿಂದ ಕಾರು, ಎರಡು ಪಿಸ್ತೂಲ್, ಚೂರಿ, ನಗದು, ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆಯಲಾದ ಸೊತ್ತಿನ ಮೌಲ್ಯ ಇನ್ನಷ್ಟೇ ತಿಳಿದು ಬರಬೇಕಿದೆ.
ಆರೋಪಿಗಳು ದರೋಡೆ ಮಾಡಿದ ಬಳಿಕ ತಮಿಳುನಾಡಿಗೆ ಪರಾರಿಯಾಗಿದ್ದು, ಮಹಾರಾಷ್ಟ್ರ ಮೂಲದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಚಿನ್ನ ಇರುವ ಎರಡು ಗೋಣಿಯನ್ನು ವಶಕ್ಕೆ ಪಡೆಯಲಾಗಿದ್ದು, ಸ್ಥಳೀಯರು ಕೂಡಾ ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಕೃತ್ಯಕ್ಕೆಂದು ಬಳಸಲಾಗಿದ್ದ ಕಾರನ್ನು ತಲಪಾಡಿ ಟೋಲ್‌ಗೇಟ್‌ನಲ್ಲಿ ಪಾಸ್ ಆಗಿರುವುದು ಗೊತ್ತಾಗಿತ್ತು. ಪೊಲೀಸರು ಮೂವರನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.
Comments are closed.