Ullala: ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ – ಪೊಲೀಸರಿಗೆ ಸಿಕ್ಕಿತು ಮಹತ್ವದ ಸುಳಿವು!!

Ullala: ಮಂಗಳೂರಿನಲ್ಲಿ ಮಠ ಮಠ ಮಧ್ಯಾಹ್ನದ ವೇಳೆ ಕೋಟೆಕಾರ್ ಸಹಕಾರಿ ಬ್ಯಾಂಕ್ ನಲ್ಲಿ ಬರೋಬ್ಬರಿ 15 ಕೋಟಿ ಮೌಲ್ಯದ ಚಿನ್ನ ಮತ್ತು ಹಣವನ್ನು ದರೋಡೆ ಮಾಡಲಾದ ಪ್ರಕರಣ ರಾಜ್ಯದ್ಯಂತ ಸಂಚಲನ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಸಿಎಂ ಮಹತ್ವದ ಸಭೆ ನಡೆಸಿ ಪೊಲೀಸರಿಗೆ ಕೂಡ ತನಿಖೆಗೆ ಆದೇಶ ನೀಡಿದ್ದರು. ಇದೀಗ ತನಿಖೆ ಕೂಡ ಚುರುಕಾಗಿದ್ದು ಪೊಲೀಸರಿಗೆ ಮಹತ್ವದ ಸುಳಿವೊಂದು ಸಿಕ್ಕಿದೆ ಎನ್ನಲಾಗಿದೆ.

ಹೌದು, ತನಿಖೆ ವೇಳೆ ಪೊಲೀಸರಿಗೆ ಗ್ಯಾಂಗ್ ಬಗ್ಗೆ ಮಹತ್ವದ ಸುಳಿವು ಸಿಕ್ಕದೆ ಎನ್ನಲಾಗಿದೆ. ಹರ್ಯಾಣ ಮೂಲದ ಅಂತರ್ ರಾಜ್ಯ ದರೋಡೆಕೋರರ ಗುಂಪು ಈ ಕೃತ್ಯವೆಸಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ತ್ರಿಶ್ಶೂರ್ ನಲ್ಲಿ ಈ ಗ್ಯಾಂಗ್ ಇದೇ ಮಾದರಿಯಲ್ಲಿ ಎಟಿಎಂ ದರೋಡೆ ಮಾಡಿತ್ತು. ಅದೇ ಗ್ಯಾಂಗ್ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದ್ದು ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ದರೋಡೆಕೋರರ ಗುಂಪು ಬೋಟ್ ಮೂಲಕ ದುಬೈಗೆ ಪರಾರಿಯಾಗಿರಬಹುದು ಎಂದೂ ಕೇಳಿಬರುತ್ತಿದೆ. ಇನ್ನೊಂದು ಮೂಲದ ಪ್ರಕಾರ ರೈಲು ಮಾರ್ಗವಾಗ ದರೋಡೆಕೋರರ ಗುಂಪು ಮುಂಬೈ ಸೇರಿರಬಹುದು ಎನ್ನಲಾಗುತ್ತಿದೆ.

ಇಷ್ಟೇ ಅಲ್ಲದೆ ತಲಪ್ಪಾಡಿ ಗೇಟ್ ಮೂಲಕ ಕಾರು ಸಾಗಿದ್ದು ಪತ್ತೆಯಾಗಿತ್ತು. ಆದರೆ ಸಿಸಿಟಿವಿ ದೃಶ್ಯದಲ್ಲಿ ಈ ಕಾರಿನಲ್ಲಿ ಕದ್ದ ಮಾಲು ಕಂಡುಬಂದಿರಲಿಲ್ಲ. ಅಲ್ಲದೆ ಬ್ಯಾಂಕ್ ನಿಂದ ತಲಪ್ಪಾಡಿ ಗೇಟ್ ತಲುಪಲು ಕೇವಲ 5-6 ನಿಮಿಷ ಸಾಕು. ಆದರೆ ದರೋಡೆಕೋರರು ಸುಮಾರು 10 ನಿಮಿಷ ತೆಗೆದುಕೊಂಡಿದ್ದಾರೆ. ಇದೂ ಕೂಡಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದರ ನಡುವೆ ಆರೋಪಿಗಳು ಕಾರು ಬದಲಾಯಿಸಿ ತಮ್ಮ ಮಾಲನ್ನು ಬೇರೊಂದು ವಾಹನದಲ್ಲಿ ಸಾಗಿಸಿರಬಹುದೇ ಎಂದು ಪೊಲೀಸರು ಶಂಕಿಸಿದ್ದಾರೆ.

ಇದರೊಂದಿಗೆ ಕೆ.ಸಿ.ರೋಡ್‌ನಿಂದ ಮಂಗಳೂರಿಗೆ ಕಾರಿನಲ್ಲಿ ಬಂದಿದ್ದ ಮೂವರು ದರೋಡೆಕೋರರ ಪೈಕಿ ಓರ್ವ ಮಂಗಳೂರಿನ ಸೆಂಟ್ರಲ್‌ ರೈಲು ನಿಲ್ದಾಣದಿಂದ ರೈಲಿನ ಮೂಲಕ ತೆರಳಿದ್ದಾನೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಆತ ರೈಲಿನಲ್ಲಿ ಮುಂಬಯಿಗೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜತೆಗೆ ತನ್ನೊಂದಿಗೆ ಒಂದಷ್ಟು ಪ್ರಮಾಣದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾನೆ. ಆ ಮೂಲಕ ದರೋಡೆಕೋರರು ಮೂರು ಭಾಗವಾಗಿ ಪ್ರತ್ಯೇಕಗೊಂಡಿದ್ದಾರೆ ಎನ್ನುವುದು ಬಲ್ಲ ಮೂಲಗಳಿಂದ ಲಭ್ಯವಾದ ಮಾಹಿತಿ.

ಕಾರಿನ ಅಸಲಿ ಮಾಲಕ ಪತ್ತೆ :
ಕೋಟೆಕಾರು ವ್ಯ.ಸೇ.ಸ.ಸಂಘದಲ್ಲಿ ದರೋಡೆ ನಡೆಸಿದವರು ಬಂದಿದ್ದ ಕಾರಿಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿದ್ದರೂ ಅದರ ನಿಜವಾದ ಮಾಲಕನ ಪತ್ತೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆತನ ಮೂಲಕವೇ ಪ್ರಕರಣವನ್ನು ಭೇದಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Comments are closed.