Umashree : ಉಮಾಶ್ರೀ ಯಕ್ಷಗಾನ ಪ್ರವೇಶಿಸಿದ್ದಕ್ಕೆ ಕಲಾವಿದರಿಂದ ಭಾರೀ ಆಕ್ರೋಶ – ಇಂದು ಉಮಾಶ್ರೀ, ನಾಳೆ ಸನ್ನಿ ಲಿಯೋನ್ ಕೂಡ ಬರಬಹುದು ಎಂದು ಕಿಡಿ

Umashree: ಕನ್ನಡದ ಖ್ಯಾತ ನಟಿ, ಮಾಜಿ ಸಚಿವೆ, ವಿಧಾನಪರಿಷತ್ ಸದಸ್ಯೆ ಉಮಾಶ್ರೀ ಅವರು ಮೊದಲ ಬಾರಿಗೆ ಯಕ್ಷಗಾನ ವೇಷದಲ್ಲಿ ಮಿಂಚಿ ಪ್ರೇಕ್ಷಕರ ಹಾಗೂ ಯಕ್ಷಗಾನ ಕಲಾವಿದರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ ಈ ಘಟನೆಯು ಕಲಾ ಪ್ರಕಾರಗಳಲ್ಲಿ ಹೊರಗಿನವರ ಭಾಗವಹಿಸುವಿಕೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಈ ಬೆಳವಣಿಗೆಗೆ ಯಕ್ಷಗಾನ ಕಲಾವಿದರು ಆಕ್ಷೇಪ ವ್ಯಕ್ತ ಪಡಿಸಿ ಇಂದು ಉಮಾಶ್ರೀ ಬಂದಿದ್ದಾರೆ. ನಾಳೆ ಸನ್ನಿ ಲಿಯೋನ್ ಬಂದರೂ ಕೂಡ ಆಶ್ಚರ್ಯವಿಲ್ಲವೆಂದು ಕಿಡಿಕಾರಿದ್ದಾರೆ.

ಹೌದು, 480ಕ್ಕೂ ಹೆಚ್ಚು ಚಲನಚಿತ್ರ, ನೂರಾರು ನಾಟಕಗಳಲ್ಲಿ ನಟಿಸಿ ಹೆಸರು ಮಾಡಿರುವ ಉಮಾಶ್ರೀ(Umashree) ಮೊದಲ ಬಾರಿಗೆ ಯಕ್ಷಗಾನ ವೇಷದಲ್ಲಿ ಮಿಂಚಿದ್ದಾರೆ. ಹೊನ್ನಾವರದ ಸೆಂಟ್ ಆಂಥೋನಿ ಮೈದಾನದಲ್ಲಿ ಶುಕ್ರವಾರ ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿಯು ಪ್ರದರ್ಶಿಸಿದ ‘ಶ್ರೀ ರಾಮ ಪಟ್ಟಾಭಿಷೇಕ’ ಪ್ರಸಂಗದಲ್ಲಿ ‘ಮಂಥರೆ’ಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಮೂಲಕ ಯಕ್ಷಗಾನ ರಂಗದಲ್ಲಿ ಮಂಥರೆಯ ಪಾತ್ರದಲ್ಲಿ ಮಿಂಚಿದ ಉಮಾಶ್ರೀ ತಮ್ಮೊಳಗಿನ ಮತ್ತೊಂದು ಪ್ರತಿಭೆಯ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದರು. ಅದರೀಗ ಚಿತ್ರನಟಿ ಉಮಾಶ್ರೀ ಅವರ ಯಕ್ಷಗಾನ ಪ್ರವೇಶವು ಪ್ರಶಂಸೆ ಮತ್ತು ಟೀಕೆ ಎರಡನ್ನೂ ಗಳಿಸಿದೆ. ಕೆಲವರು ಅವರ ಪ್ರಯತ್ನವನ್ನು ಶ್ಲಾಘಿಸಿದರೆ, ಇನ್ನು ಕೆಲವರು ಯಕ್ಷಗಾನದ ಪವಿತ್ರತೆಯನ್ನು ಪ್ರಶ್ನಿಸಿದ್ದಾರೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಯಕ್ಷಗಾನದ ಅಭಿಮಾನಿಗಳು ಹಾಗೂ ಹಿರಿಯ ಕಲಾವಿದರು ಚಿತ್ರರಂಗ ಹಾಗೂ ನಾಟಕದಲ್ಲಿ ಉಮಾಶ್ರೀ ಅವರ ಕಲೆಯ ಬಗ್ಗೆ ಎಲ್ಲರೂ ಗೌರವ ವ್ಯಕ್ತಪಡಿಸಿದ್ದಾರೆ. ಆದರೆ, ಯಕ್ಷಗಾನದಲ್ಲಿ ಅವರನ್ನು ಕರೆತಂದು ಪಾತ್ರ ಮಾಡಿಸಬೇಕಿತ್ತೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇಂದು ಉಮಾಶ್ರೀ, ಮುಂದೆ ನೀಲಿ ಚಿತ್ರತಾರೆ ಸನ್ನಿ ಲಿಯೋನ್ ಸರದಿ ಎಂದು ಒಬ್ಬರು ಕುಟುಕಿದ್ದಾರೆ.

ಇನ್ನೂ ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿ ಉಮಾಶ್ರೀ ಬಗ್ಗೆ ಗೌರವ ಇದೆ. ಆದರೆ ಸಿನಿಮಾ ಇಮೇಜೇ ಮುಖ್ಯವಾಗಿ ಆ ದಿನದ ಯಾವ ಕಲಾವಿದರ ಬಗ್ಗೆ ಚಕಾರ ಎತ್ತಿಲ್ಲ. ಪಟ್ಟಾಭಿಷೇಕದಂತಹ ಪ್ರಸಂಗದಲ್ಲಿ ಮಂಥರೆಯೇ ಕೇಂದ್ರವಾಗಿ ಬದಲಾದಂತೆ ಕಾಣುತ್ತದೆ. ಅನ್ಯ ಪ್ರಕಾರದ ಕಲಾವಿದರನ್ನು ನಮ್ಮ ರಂಗಭೂಮಿಗೆ ತರುವ ಸರಿಯಾದ ಕ್ರಮ ಇದಲ್ಲ. ಒಂದೇ ಒಂದು ಯಕ್ಷಗಾನದ ವೇಷಭೂಷಣ ಕೂಡ ತೊಡಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೆ ಇದೇ ಮೊದಲ ಬಾರಿಗೆ ಉಮಾಶ್ರೀ ಯಕ್ಷಗಾನದಲ್ಲಿ ಅಭಿನಯಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣವೂ ಇದೆ. ಅದೇನೆಂದರೆ ಯಕ್ಷಗಾನದಲ್ಲಿ ದಿಗ್ಗಜ ಕಲಾವಿದರ ಸಾಲಿನಲ್ಲಿ ರಾಮಚಂದ್ರ ಚಿಟ್ಟಾಣಿಯವರೂ ಒಬ್ಬರು. ದಿವಂಗತ ರಾಮಚಂದ್ರ ಚಿಟ್ಟಾಣಿಯವರಿಗೆ ಉಮಾಶ್ರೀ ಯಕ್ಷಗಾನದಲ್ಲಿ ಪಾತ್ರ ಮಾಡಬೇಕೆಂದಿತ್ತಂತೆ. ಇದನ್ನು ಅವರು ತಾವು ಬದುಕಿದ್ದಾಗಲೇ ಕೇಳಿದ್ದರಂತೆ. ಹೀಗಾಗಿ ಅವರ ಆಸೆ ಪೂರೈಸಲು ಉಮಾಶ್ರೀ ಯಕ್ಷಗಾನ ವೇಷ ತೊಟ್ಟಿದ್ದರು.

Comments are closed.