Vijayapura : ದರೋಡೆ ಪ್ರಕರಣ – ಗುಂಡು ಹಾರಿಸಿ ದರೋಡೆಕೋರನನ್ನು ಬಂಧಿಸಿದ ಪೊಲೀಸರು !!

Vijayapura: ರಾಜ್ಯದಲ್ಲಿ ಕಳ್ಳತನದ ಪ್ರಕರಣಗಳು ವಿಪರೀತ ಹೆಚ್ಚುತ್ತಿದೆ. ಬ್ಯಾಂಕ್ ದರೋಡೆ, ಮನೆ ದರೋಡೆ, ಎಟಿಎಂ ದರೋಡೆ ಹೀಗೆ ದಿನನಿತ್ಯ ಒಂದಲ್ಲ ಒಂದು ಪ್ರಕರಣಗಳು ಕಣ್ಣಿಗೆ ರಾಚುತ್ತಿದೆ. ಹೀಗೆ ಕಳ್ಳತನ ಮಾಡುತ್ತಿದ್ದ ಗುಂಪೊಂದಕ್ಕೆ ಪೊಲೀಸರು ಗುಂಡು ಹಾರಿಸಿ ಅಪರಾಧಿಗಳನ್ನು ಬಂದಿಸಿರುವ ಪ್ರಕರಣ ವಿಜಾಪುರದಲ್ಲಿ ಬೆಳಕಿಗೆ ಬಂದಿದೆ.

ಹೌದು, ಮಧ್ಯರಾತ್ರಿ ಮನೆಗಳ ಬಾಗಿಲು ಮುರಿದು, ಚಾಕು ಇರಿದು ದರೋಡೆ ಮಾಡುತ್ತಿದ್ದ ಭಯಾನಕ ಕಳ್ಳರ ಗ್ಯಾಂಗ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಓರ್ವ ಗಾಯಗೊಂಡು ಸಿಕ್ಕಿಬಿದ್ದಿದ್ದರೆ ಮೂವರು ಪರಾರಿಯಾಗಿದ್ದಾರೆ. ನಗರ ಹೊರವಲಯದ ಟೋಲ್ ಪ್ಲಾಜಾ ಬಳಿ ಶುಕ್ರವಾರ ನಸುಕಿನ ಜಾವ ಈ ಘಟನೆ ನಡೆದಿದ್ದು, ಗಾಯಾಳು ದರೋಡೆಕೋರನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಘಟನೆ?
ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದ ಕಳ್ಳರ ಗ್ಯಾಂಗ್ ಸಾರ್ವಜನಿಕರ ನಿದ್ದೆ ಕೆಡಿಸಿತ್ತು. ಹಗಲು ಹೊತ್ತಿನಲ್ಲಿಯೇ ಮನೆಗಳಿಗೆ ನುಗ್ಗಿ ದರೋಡೆ ನಡೆಸುತ್ತಿತ್ತು. ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್‌ಪಿ ಲಕ್ಷ್ಮಣ ನಿಂಬರಗಿ ದರೋಡೆಕೋರರ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ರಾತ್ರಿ ಗಸ್ತು ಹೆಚ್ಚಿಸಿದ್ದರು. ಶುಕ್ರವಾರ ಮಧ್ಯರಾತ್ರಿ ಕನಕದಾಸ ಬಡಾವಣೆಯಲ್ಲಿ ದರೋಡೆಕೋರರು ಕಳ್ಳತನಕ್ಕೆ ಯತ್ನಿಸಿದ್ದಾರೆ. ಮನೆಯೊಂದಕ್ಕೆ ನುಗ್ಗಲು ಯತ್ನಿಸಿದಾಗ ಕುಟುಂಬಸ್ಥರು ಚೀರಾಡಿದ್ದಾರೆ. ಅಷ್ಟರಲ್ಲಿಯೇ ಕಳ್ಳರು ಪರಾರಿಯಾಗಿದ್ದು, ಬಡಾವಣೆಯ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಚ್ಚೆತ್ತುಕೊಂಡ ಪೊಲೀಸರು ನಾಕಾ ಬಂದಿ ಮಾಡಿದ್ದಾರೆ.

ಹೇಗಿತ್ತು ಕಾರ್ಯಾಚರಣೆ?
ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್‌ಪ್ಲಾಜಾ ಬಳಿ ಒಂದೇ ಬೈಕ್‌ನಲ್ಲಿ ನಾಲ್ವರು ಸಂಚಾರಿ ನಿಯಮ ಉಲ್ಲಂಘಿಸಿ ವಿರುದ್ಧ ಧಿಕ್ಕಿನಲ್ಲಿ ಸಾಗುತ್ತಿರಬೇಕಾದರೆ ಪೊಲೀಸರು ಅಟ್ಟಿಸಿಕೊಂಡು ಹೋಗಿದ್ದಾರೆ. ಈ ವೇಳೆ ಬೈಕ್ ಸ್ಕಿಡ್ ಆಗಿ ಕಳ್ಳರು ಬಿದ್ದಿದ್ದಾರೆ. ಅಲ್ಲಿಂದ ಎದ್ದು ಜಮೀನಿನಲ್ಲಿ ಓಡುತ್ತಿದ್ದ ವೇಳೆ ಕೂಡಲೇ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಒಟ್ಟು ಐದು ಸುತ್ತು ಗುಂಡು ಹಾರಿಸಿದ್ದು ಓರ್ವನ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ಕತ್ತಲಾದ್ದರಿಂದ ಹುಡುಕಾಟದಲ್ಲಿದ್ದ ಪೊಲೀಸರಿಗೆ ಗಾಯಾಳುವಾಗಲಿ ಇನ್ನುಳಿದವರಾಗಲಿ ಸಿಕ್ಕಿಲ್ಲ. ಬಳಿಕ ಬೆಳಗ್ಗೆ 8.30ರ ಸುಮಾರಿಗೆ ಘಟನಾ ಸ್ಥಳಕ್ಕೆ ಹತ್ತಿರದಲ್ಲಿರುವ ಸ್ಪಂದನಾ ಆಸ್ಪತ್ರೆ ಹಿಂಭಾಗದಲ್ಲಿ ಗಾಯಾಳು ಕಳ್ಳ ನರಳುತ್ತಾ ಬಿದ್ದಿರುವುದನ್ನು ಕಂಡು ಪೊಲೀಸರು ಆತನನ್ನು ವಶಕ್ಕೆ ಪಡೆದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿಕಿತ್ಸೆ ಮುಂದುವರಿದಿದ್ದು ತಪ್ಪಿಸಿಕೊಂಡವರ ಶೋಧ ಕಾರ್ಯ ಮುಂದುವರಿಸಲಾಗಿದೆ. ಪೊಲೀಸರ ಈ ಕಾರ್ಯಾಚರಣೆಯಿಂದಾಗಿ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.

Comments are closed.