Chitradurga : ರೇಣುಕಾ ಸ್ವಾಮಿ ತಂದೆಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು- ಯಾಕಾಗಿ?

Chitradurga : ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ತನ್ನ ಪ್ರೇಯಸಿ ಪವಿತ್ರ ಗೌಡರಿಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂಬ ಕಾರಣಕ್ಕೆ ನಟ ದರ್ಶನ್ ಮತ್ತು ಅವರ ಗ್ಯಾಂಗ್ ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಬೆನ್ನಲ್ಲೇ ನಟ ದರ್ಶನ್ ಗೆ ಜೈಲು ಶಿಕ್ಷೆಯಾಗಿ ಇದೀಗ ಅವರ ಗ್ಯಾಂಗ್ ಎಲ್ಲರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಬೆನ್ನಲ್ಲೇ ರೇಣುಕಾ ಸ್ವಾಮಿ ತಂದೆಗೆ ನೆಟ್ಟಿಗರು ಛೀ ಮಾರಿ ಹಾಕಿದ್ದಾರೆ.

ಹೌದು, ರೇಣುಕಾ ಸ್ವಾಮಿ ಹತ್ಯೆ ಬಳಿಕ ಅವರ ಕುಟುಂಬದ ಕುರಿತು ನಾಡಿನ ಜನರು ಕರುಣೆ ತೋರಿದ್ದರು. ಅನೇಕ ರಾಜಕೀಯ ನಾಯಕರು, ಮಠಮಾನ್ಯದ ಪೀಠಾಧಿಪತಿಗಳು ಅವರ ಮನೆಗೆ ತೆರಳಿ ಸಮಾಧಾನ ಮಾಡಿ ಧನ ಸಹಾಯವನ್ನು ಕೂಡ ಮಾಡಿದ್ದರು. ಈ ನಡುವೆ ರೇಣುಕಾ ಸ್ವಾಮಿ ಪತ್ನಿ ಗಂಡು ಮಗುವಿಗೆ ಜನನ ನೀಡಿದಾಗ ನಾಡಿನ ಜನ ಮತ್ತೆ ಮಮ್ಮಲ ಮರುಗಿತ್ತು. ಆದರೆ ಈಗ ಅಚ್ಚರಿ ಎಂಬಂತೆ ಆಗ ಮರುಗಿದ್ದ ನೆಟ್ಟಿಗರೆ ಇಂದು ರೇಣುಕಾ ಸ್ವಾಮಿ ತಂದೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಂದಹಾಗೆ ಇತ್ತೀಚೆಗೆ ದರ್ಶನ್ ರೆಗ್ಯುಲರ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅದಾದ ಬಳಿಕ ರೇಣುಕಾಸ್ವಾಮಿ ಕುಟುಂಬಕ್ಕೆ ದರ್ಶನ್ ಕೋಟಿ ಹಣ ಪರಿಹಾರವಾಗಿ ಕೊಟ್ಟಿದ್ದಾರೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿತ್ತು. ಈ ಕಾರಣಕ್ಕೆ ಸುದ್ದಿಗೋಷ್ಠಿ ನಡೆಸಿದ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ, ನಾವು ಯಾರಿಂದಲೂ ಹಣ ಪಡೆದುಕೊಂಡಿಲ್ಲ. ದಯವಿಟ್ಟು ಇಲ್ಲದ ಸುದ್ದಿ ಹಬ್ಬಿಸಬೇಡಿ. ನಮ್ಮ ಬಳಿ ಮಗನ ಬೈಕ್ ರಿಪೇರಿ ಮಾಡಿಸಲೂ ದುಡ್ಡಿಲ್ಲ. ದಯವಿಟ್ಟು ನಮ್ಮ ಸೊಸೆಗೆ ಸರ್ಕಾರಿ ನೌಕರಿಯನ್ನು ಕೊಡಿಸಿ ಎಂದು ಕಣ್ಣೀರು ಹಾಕಿದ್ದರು. ಇದೇ ವಿಚಾರಕ್ಕೆ ನಾಡಿನ ಜನ ಇದೀಗ ರೊಚ್ಚಿಗೆದ್ದಿದ್ದಾರೆ.

ಸೊಸೆಗೆ ಸರ್ಕಾರಿ ನೌಕರಿ ನೀಡಿ ಎಂದು ರೇಣುಕಾ ಸ್ವಾಮಿ ತಂದೆ ಬೇಡಿಕೊಂಡ ಬೆನ್ನಲ್ಲೇ ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಪದೇ ಪದೇ ಸರ್ಕಾರೀ ನೌಕರಿಗೆ ಯಾಕೆ ಮನವಿ ಮಾಡುತ್ತಿದ್ದೀರಿ? ನಿಮ್ಮ ಮಗ ಏನು ಒಳ್ಳೆ ಕೆಲಸ ಮಾಡಿದ್ದನೇ? ಕಂಡವರ ಮನೆ ಹೆಣ್ಣು ಮಕ್ಕಳಿಗೆ ಅಶ್ಲೀಲ ಸಂದೇಶ ಕಳುಹಿಸುವುದು ತಪ್ಪಲ್ವಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಆರ್ಥಿಕವಾಗಿ ನಮ್ಮಲ್ಲಿ ಕಷ್ಟ ಇದೆ ಎಂದು ಹೇಳಿಕೊಂಡಿದ್ದೀರಿ. ಆದರೆ ರೇಣುಕಾ ಸ್ವಾಮಿ ಹತ್ಯೆ ಆದಾಗ ಅನೇಕರು ನಿಮ್ಮ ಮನೆಗೆ ಬಂದು ಧನಸಹಾಯ ಮಾಡಿದರು ಆ ದುಡ್ಡೆಲ್ಲ ಏನಾಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಹಾರೈಸಿದ್ದಾರೆ.

Comments are closed.