Ravi Katapadi Avatar: ಕಲಿಯುಗದ ಅವತಾರ ಪುರುಷ ರವಿ ಕಟಪಾಡಿ ‘ಅವತಾರ್ 2’ ಅವತಾರದಲ್ಲಿ !

Ravi Katapadi Avatar: ರವಿ ಕಟಪಾಡಿ.. ಕೊಡುಗೈ ದಾನಿ. ಒಂದಲ್ಲ ಒಂದು ಅವತಾರದಲ್ಲಿ ಬಂದು ಬಡವರ ಪಾಲಿನ ಆಶಾಕಿರಣರಾದವರು. ಇದೀಗ ಅವತಾರ್ 2 ವೇಷಧಾರಿಯಾಗಿ ಬಡ ಅಶಕ್ತ ಮಕ್ಕಳ ಪಾಲಿಗೆ ಮತ್ತೊಮ್ಮೆ ಅವರು ವರದಾನವಾಗಲಿದ್ದಾರೆ. ಈ ಬಾರಿ ಮೂರು ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಮಾಡಲಿದ್ದು, ಮಂಗಳವಾರ ಉಡುಪಿಯಾದ್ಯಂತ ಸಂಚರಿಸಿ ಹಣ ಸಂಗ್ರಹಿಸಲಿದ್ದಾರೆ.

ಇದುವರೆಗೆ ನಿರಂತರವಾಗಿ ಕಳೆದ 9 ವರ್ಷದಲ್ಲಿ ನಾನಾ ರೀತಿಯ ಪಾತ್ರ ಹಾಕಿಕೊಂಡು ಜನರನ್ನು ರಂಜಿಸಿದ್ದಾರೆ. ಈ ರೀತಿ ವಿಭಿನ್ನ ರೂಪಾ ತಳೆದುಕೊಂಡು ರಂಜಿಸುವುದರ ಜೊತೆಗೆ 130 ಮಕ್ಕಳಿಗೆ 1 ಕೋಟಿ 28 ಲಕ್ಷ ರೂ.ವೈದ್ಯಕೀಯ ಸಹಾಯ ಹಸ್ತ ನೀಡಿ ವೆಚ್ಚ ಭರಿಸಿದ್ದರು. ಆ ಮೂಲಕ ಕಲಾ ರಸಿಕರ ಮತ್ತು ಪೋಷಕರ ಮನ ಗೆದ್ದಿದ್ದರು.

ಈ ಬಾರಿ ರವಿ ಕಟಪಾಡಿಯವರು ಟೈಟಾನಿಕ್ ಚಿತ್ರ ನಿರ್ಮಿಸಿದ ನಿರ್ದೇಶಕರ ಚಿತ್ರ ಅವತಾರ 2 ಚಿತ್ರದ ನೀಲಿ ಮೈಯಿನ ನೀರ ಮನುಷ್ಯರಾಗಿ ನಾಳೆ ಉಡುಪಿ ನಗರದಲ್ಲಿ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಮಟ್ಟು ದಿನೇಶ್ ಅವರು, ಇವರ ಈ ವಿಶೇಷ ಅವತಾರಕ್ಕೆ ಬಣ್ಣ ಬಳಿದಿದ್ದು ಮನಮೋಹಕವಾಗಿ ವೇಷ ಧರಿಸಿ ಜನ ಮನ ಸೆಳೆಯುತ್ತಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಅಷ್ಟಮಿ ಹಬ್ಬದ ಸಂದರ್ಭದಲ್ಲಿ ರವಿ ಕಟಪಾಡಿಯವರು ವಿಭಿನ್ನವೇಶದಲ್ಲಿ ಪ್ರತ್ಯಕ್ಷರಾಗುತ್ತಾರೆ. ಕಳೆದ ಒಂದು ವರ್ಷಗಳ ಹಿಂದೆ ಅವರು ಮಾನವ ದೇಹದ, ಎಮ್ಮೆಯ ಹಣೆಯ, ಟಿಸಿಲೊಡೆದ ಕವಡೆಯ ಕೊಂಬಿನ, ದೈತ್ಯ ದೇಹದ, ಹಾರಲು ಉತ್ಸುಕ ಬೃಹತ್ ರೆಕ್ಕೆಗಳ, ಮೈತುಂಬ ಕಪ್ಪು ಬಣ್ಣದ, ನೀಲನೆಯ ಕಣ್ಣುಗಳನ್ನು ಹೊಂದಿರುವ ವಿಕಾರ ಜೀವಿಯ ರೂಪ ತಳೆದು ರಸ್ತೆಗೆ ಇಳಿದಿದ್ದರು. ಅವರ ರೂಪ ಹಾಲಿವುಡ್ ಚಿತ್ರವನ್ನು ನೆನಪಿಸಿತ್ತು. ಇದೀಗ ಅಂತದ್ದೇ ಕಾಲ್ಪನಿಕ ಚಿತ್ರ ಅವತಾರ 2 ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಾರಿ ಮತ್ತಷ್ಟು ಹಣ ಸಂಗ್ರಹಿಸಿ ಬಡ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಆಸರೆಯಾಗಿ ನಿಲ್ಲಲಿದ್ದಾರೆ ಈ ಹೃದಯವಂತ ಜೀವಿ !

 

Leave A Reply

Your email address will not be published.