Mood Of the Nation Survey: ಪ್ರಧಾನಿ ಮೋದಿಯ ಉತ್ತರಾಧಿಕಾರಿ ಯಾರು? ಜನರ ಒಲವು ಅಮಿತ್ ಶಾಗೋ, ಯೋಗಿಗೋ ಅಥವಾ ಗಡ್ಕರಿಗೋ?
Mood Of the Nation Survey: ನರೇಂದ್ರ ಮೋದಿಗೆ(Narendra Modi) 75ರ ಆಸುಪಾಸು. ಈಗಾಗಲೇ ಅವರ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿವೆ. ಬಿಜೆಪಿ ನಾಯಕರೇ ಅಪಸ್ವರ ಎತ್ತಿದ್ದಾರೆ. ಈ ಬೆನ್ನಲ್ಲೇ ಮೋದಿ ಬಳಿಕ ಬಿಜೆಪಿ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ಎದುರಾಗಿದೆ. ಬಿಜೆಪಿಯಲ್ಲಂತೂ ರಾಷ್ಟ್ರೀಯ ನಾಯಕರ ಸಂಖ್ಯೆ ಸಾಕಷ್ಟಿದೆ. ಆದರೆ ಪ್ರಧಾನಿ ಹುದ್ದೆಗೆ ಅವರ ಉತ್ತರಾಧಿಕಾರಿಯಾಗಿ ಯಾರು ಸೂಕ್ತರು ಎಂಬ ಪ್ರಶ್ನೆಯೇ ಅನೇಕರನ್ನು ಕಾಡುತ್ತಿದೆ.
ನರೇಂದ್ರ ಮೋದಿಯವರು ದೇಶ ಕಂಡಂತಹ ಹೆಮ್ಮೆಯ ಪ್ರಧಾನಮಂತ್ರಿಯಾಗಿದ್ದಾರೆ. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಇದೀಗ 2024ರ ತನಕ ಅಂದರೆ ಸುದೀರ್ಘ 10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ದೇಶದ ಸ್ಥಾನನಮಾನವನ್ನು ವಿಶ್ವಮಟ್ಟದಲ್ಲಿ ಎತ್ತರಕ್ಕೆ ಏರಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಪಂಚದ ಪ್ರಭಾವಿ ಪ್ರಧಾನಿಗಳ, ನಾಯಕರ ಪಟ್ಟಿಯಲ್ಲಿ ನರೇಂದ್ರ ಮೋದಿಯವರೇ(Narendra modi) ಮೊದಲಿಗರು. ಅವರ ವರ್ಚಸ್ಸು, ಮಾತು, ಆಡಳಿತ ವೈಖರಿ ಯಾರಿಗೂ ಬರಲಾರದೇನೋ. ಒಟ್ಟಿನಲ್ಲಿ ಸದ್ಯಕ್ಕೆ ಅವರಿಗೆ ಪರ್ಯಾಯವಾಗಿ ಯಾವುದೇ ವ್ಯಕ್ತಿ ಇಲ್ಲ ಎಂದೆನಿಸುತ್ತದೆ. ಆದರೆ ಈ ನಡುವೆ ಮೋದಿ ಬಳಿಕ ದೇಶದ ಪ್ರಧಾನಿ(PM of India after Modi) ಯಾರಾಗುತ್ತಾರೆ ಎಂಬ ವಿಚಾರವೊಂದು ಮುನ್ನಲೆಗೆ ಬಂದಿದೆ.
ಪ್ರಧಾನಿ ಮೋದಿಗೆ ಇದೀಗ 74-75 ವಯಸ್ಸು. ಹೆಚ್ಚೆಂದರೆ ಮುಂದಿನ 5 ವರ್ಷಗಳ ಅವಧಿಗೆ ಅವರು ಪ್ರಧಾನಿ ಆಗಿ ಮುಂದುವರಿಯಬಹುದು. ಅಂದರೆ 2028ರ ವರೆಗೆ. ಬಿಜೆಪಿ ನಿಯಮದ ಪ್ರಕಾರ 75 ದಾಟಿದವರಿಗೆ ಅಧಿಕಾರವಿಲ್ಲ ಎಂಬುದನ್ನೂ ನಾವು ನೆನಪಿಡಬೇಕು. ಆದರೆ ಮೋದಿ ಹವಾ ಆ ನಿಯಮವನ್ನೂ ಮೀರಿದ್ದು. ಒಟ್ಟಿನಲ್ಲಿ 5 ವರ್ಷಗಳ ಬಳಿಕ ಮುಂದಿನ ಪ್ರಧಾನಿ ಯಾರು? ಬಿಜೆಪಿ(BJP) ನೇತಾರ ಯಾರು ಎಂಬುದು ಯಕ್ಷ ಪ್ರಶ್ನೆ. ಈಗಾಗಲೇ ಅಮಿತ್ ಶಾ, ಯೋಗಿ ಆದಿತ್ಯನಾಥ್, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್… ಹೀಗೆ ಹಲವು ನಾಯಕರ ಹೆಸರು ಪಟ್ಟಿಯಲ್ಲಿದೆ. ಹಾಗಿದ್ದರೆ ಜನರು ಇವರಲ್ಲಿ ಯಾರಿಗೆ ಹೆಚ್ಚು ಒಲವು ತೋರಿದ್ದಾರೆ?
‘ಇಂಡಿಯಾ ಟುಡೆ ನಡೆಸಿದ ‘ಮೂಡ್ ಆಫ್ ದಿ ನೇಷನ್'(Mood Of the Nation Survey) ಸಮೀಕ್ಷೆಯ ಆಗಸ್ಟ್ ಆವೃತ್ತಿಯಲ್ಲಿ ಮೋದಿ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಯಾರು ಎಂಬ ಬಗ್ಗೆ ಜನರ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅಂದಹಾಗೆ ಇಂಡಿಯಾ ಟುಡೇ ಟುಡೇ 543 ಲೋಕಸಭಾ ಕ್ಷೇತ್ರಗಳಲ್ಲಿ(Lok Sabha Constituency) 40,591 ಜನರನ್ನು ಸಂದರ್ಶಿಸಿ ಮೂಡ್ ಆಫ್ ನೇಷನ್ ಸಮೀಕ್ಷೆ ಕೈಗೊಂಡಿದೆ. ಸದ್ಯ ಮೋದಿ ಕ್ಯಾಬಿನೆಟ್‌ನಲ್ಲಿ ನಂಬರ್ 2 ಆಗಿರುವ ಗೃಹ ಸಚಿವ ಅಮಿತ್ ಶಾ (Amit Shah) ಅವರು ಉತ್ತರಾಧಿಕಾರಿಯಾಗಲು ಸೂಕ್ತ ವ್ಯಕ್ತಿ ಎಂದು ಹೆಚ್ಚಿನ ಜನ ಅಭಿಪ್ರಾಯಪಟ್ಟಿದ್ದಾರೆ.
ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಇದ್ದರೆ, ಮೂರನೇ ಸ್ಥಾನದಲ್ಲಿ ಭೂ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಇದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅನುಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಯೋಗಿ ಪರ ಶೇ 19ರಷ್ಟು ಮಂದಿ ಒಲವು ತೋರಿಸಿದ್ದಾರೆ. ಶೇ 13ರಷ್ಟು ಜನರ ಬೆಂಬಲ ಹೊಂದಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮೂರನೇ ಸ್ಥಾನದಲ್ಲಿದ್ದಾರೆ. ಸುಮಾರು ಶೇ 5ರಷ್ಟು ಮತ ಪಡೆದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ 4ನೇ ಸ್ಥಾನ ಹಂಚಿಕೊಂಡಿದ್ದಾರೆ.
ಅಮಿತ್ ಶಾ, ಯೋಗಿ ಜನಪ್ರಿಯತೆ ಕುಸಿತ:
ಶೇ 25ರಷ್ಟು ಮತಗಳೊಂದಿಗೆ ಸಮೀಕ್ಷೆಯಲ್ಲಿ ಅಮಿತ್ ಶಾ ಮುಂಚೂಣಿಯಲ್ಲಿದ್ದರೂ, 2024ರ ಫೆಬ್ರವರಿ ಮತ್ತು 2023ರ ಆಗಸ್ಟ್‌ನಲ್ಲಿ ನಡೆಸಿದ್ದ ಮೂಡ್ ಆಫ್ ದಿ ನೇಷನ್ ಸರ್ವೆಯ ಫಲಿತಾಂಶಕ್ಕೆ ಹೋಲಿಸಿದರೆ ಗೃಹ ಸಚಿವರ ಪ್ರಭಾವಳಿ ಕಡಿಮೆಯಾದಂತೆ ತೋರುತ್ತಿದೆ. ಈ ಹಿಂದಿನ ಎರಡು ಸಮೀಕ್ಷೆಗಳಲ್ಲಿ ಅಮಿತ್ ಶಾ ಪರ ಕ್ರಮವಾಗಿ ಶೇ 29 ಹಾಗೂ ಶೇ 28ರಷ್ಟು ಮತಗಳು ಬಂದಿದ್ದವು. ಹಾಗೆಯೇ, ಪ್ರಧಾನಿ ಹುದ್ದೆಯಿಂದ ಮೋದಿ ನಿರ್ಗಮಿಸಿದರೆ ಅವರ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಅಮಿತ್ ಶಾ ಎಂದು ಶೇ 31ರಷ್ಟು ಮಂದಿ ದಕ್ಷಿಣ ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ. ದೇಶಾದ್ಯಂತ ಒಟ್ಟಾರೆ ಶೇ 25ರಷ್ಟು ಅನುಮೋದನೆ ಪಡೆದಿರುವ ಅಮಿತ್ ಶಾ ಅವರಿಗೆ ಅತಿ ಹೆಚ್ಚು ಬೆಂಬಲ ಸಿಕ್ಕಿರುವುದು ದಕ್ಷಿಣ ಭಾರತದಲ್ಲಿ ಎನ್ನುವುದು ಗಮನಾರ್ಹ.
ಅಮಿತ್ ಶಾ ಅವರಂತೆ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆಯೂ ಕುಸಿದಿದೆ. 2023ರ ಆಗಸ್ಟ್ ಸಮೀಕ್ಷೆಯಲ್ಲಿ ಶೇ 25 ಹಾಗೂ 2024ರ ಫೆಬ್ರವರಿ ಸಮೀಕ್ಷೆಯಲ್ಲಿ ಅವರು ಶೇ 24ರಷ್ಟು ಜನ ಬೆಂಬಲ ಪಡೆದಿದ್ದರು. ಆದರೆ ಅದೀಗ ಶೇ 19ಕ್ಕೆ ಇಳಿಕೆಯಾಗಿದೆ. ಅಲ್ಲದೆ ಯೋಗಿ ಅದಿತ್ಯನಾಥ್ ಅವರು ಸತತ ಎರಡು ಬಾರಿ ಉತ್ತರ ಪ್ರದೇಶ ಚುನಾವಣೆ ಗೆದ್ದಿದ್ದಾರೆ. 2027 ರಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಈ ಬಾರಿಯ ಲೋಕಸಭಾ ಚುನಾವಣೆ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. 2027ರ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ಯೋಗಿ ಅದಿತ್ಯನಾಥ್ ಅವರು ವರ್ಚಸ್ಸು ವೃದ್ಧಿಯಾಗುವ ಸಾಧ್ಯತೆಯಿದೆ.