Belthangady: ಬೆಳಾಲು ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ನಡೆಸಿದ್ದು ಈ ಊರಿನ ಸಂಬಂಧಿಕರು, ಇಬ್ಬರ ಬಂಧನ !
Belthangady: ಬೆಳ್ತಂಗಡಿ ತಾಲೂಕು, ಬೆಳಾಲು ಗ್ರಾಮದಲ್ಲಿ ನಡೆದ ಶಿಕ್ಷಕ ಬಾಲಕೃಷ್ಣ ಭಟ್ ಹತ್ಯಾ ಪ್ರಕರಣದ ಇನ್ನೇನು ತಾತ್ವಿಕ ಅಂತ್ಯ ಕಾಣುತ್ತಿದೆ. ಈಗಾಗಲೇ ಇಬ್ಬರನ್ನು ಈ ಸಂಬಂಧ ಬಂಧಿಸಲಾಗಿದೆ. ಹಾಗೆಂದು ಪೊಲೀಸ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ: 20.08.2024 ರಂದು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ನಿವಾಸಿಯಾದ, ನಿವೃತ್ತ ಮುಖ್ಯೋಪಾಧ್ಯಾಯ ಎಸ್ ಪಿ ಬಾಲಕೃಷ್ಣ ಬಡೆಕ್ಕಿಲ್ಲಾಯ (83) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿರುತ್ತದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಈಗ ಬಂಧಿತ ಆರೋಪಿಗಳು ಮೃತರಿಗೆ ಸಂಬಂಧಿಕರಾಗಿದ್ದು, ಭೂಮಿ ವಿವಾದದಲ್ಲಿ ವೈಮನಸ್ಸು ಉಂಟಾಗಿ ಆರೋಪಿಗಳು ಸದರಿ ಕೃತ್ಯವನ್ನು ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿರುತ್ತದೆ. ಆರೋಪಿಗಳ ಪೈಕಿ ಓರ್ವನು ಅಪರಾಧಿ ಹಿನ್ನೆಲೆ ಹೊಂದಿದ್ದಾನೆ. ಆತನ ವಿರುದ್ಧ ಕೇರಳ ರಾಜ್ಯದ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣವು ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿರುವ ಬಗ್ಗೆಯೂ ತಿಳಿದು ಬಂದಿರುತ್ತದೆ.
ಮೊದಲಿಗೆ ಅವರ ಮಗನ ಮೇಲೆಯೇ ಊರವರಿಗೆ ಅನುಮಾನ ಇತ್ತು. ಆದರೆ ತನಿಖೆಯಿಂದ ಮಗ ಸುರೇಶ್ ಭಟ್ ಅಪವಾದದಿಂದ ಹೊರ ಬಂದಿದ್ದಾರೆ. ಕೊಲೆ ನಡೆದ ದಿನ ಮಗ ಸುರೇಶ್ ಭಟ್ ಇಲ್ಲದ ಸಂದರ್ಭದಲ್ಲಿ ಮನೆಗೆ ಇಬ್ಬರು ಬಂದಿದ್ದರು ಎಂದು ಊರಲ್ಲಿ ಕೆಲವರು ಮಾತಾಡಿದ್ದರು. ಅದರಂತೆ ಮಧ್ಯಾಹ್ನದ ಹೊತ್ತಲ್ಲಿ ಮನೆಗೆ ಯಾರೋ ಬಂದು ಅವರು ಬಾಳೆ ಎಲೆಯಲ್ಲಿ ಊಟ ಮಾಡಿದ ಗುರುತು ಕಂಡುಬಂದಿತ್ತು. ಊಟ ಮಾಡಿ ಎಸೆದ ಬಾಳೆ ಎಲೆ ಹಿತ್ತಲಿನಲ್ಲಿ ಬಿದ್ದಿತ್ತು. ಹಾಗಾಗಿ ಯಾರೋ ಪರಿಚಿತರೇ ಮನೆಗೆ ಬಂದಿದ್ದಾರೆ, ಈ ಕೊಲೆ ಪರಿಚಿತರಿಂದಲೇ ನಡೆದಿದೆ ಎನ್ನುವ ಬಗ್ಗೆ ಪೊಲೀಸರಿಗೆ ಮೊದಲಿಂದಲೇ ಅನುಮಾನವಿತ್ತು. ಇದೀಗ ಅದು ಸತ್ಯವಾಗಿದೆ. ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಹಾಗಾಗಿ ಅಪರಾಧಿಗಳು ಕೇರಳ ಮೂಲದವರು ಎಂದು ತನಿಖೆ ಸೂಚಿಸುತ್ತಿದೆ. ಬಾಲಕೃಷ್ಣ ಬದುಕಿಲ್ಲಾಯ ಅವರ ಮಗಳನ್ನು ಕೇರಳದ ಗಡಿ ಜಿಲ್ಲೆ, ಕಾಸರಗೋಡಿಗೆ ಮದುವೆ ಮಾಡಿ ಕೊಡಲಾಗಿತ್ತು ಎನ್ನುವುದು ಇಲ್ಲಿ ಗಮನಾರ್ಹ ಅಂಶ. ಒಟ್ಟಾರೆ ಶಿಕ್ಷಕ ಬಾಲಕೃಷ್ಣ ಭಟ್ ಅವರ ಕೊಲೆ ಸಂಬಂಧಿಕರಿಂದ ನಡೆದಿದೆ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಖಚಿತವಾಗಿದೆ.