Hospital: ಇಂದು 24 ಗಂಟೆ ದೇಶದ ಆಸ್ಪತ್ರೆಗಳು ಬಂದ್‌! ಕೋಲ್ಕತಾ ವೈದ್ಯೆ ರೇಪ್‌, ಹತ್ಯೆ ಪ್ರಕರಣ ವಿರುದ್ಧ ವೈದ್ಯಕೀಯ ಸಂಘ ಪ್ರತಿಭಟನೆ!

Share the Article

Hospital: ಕೋಲ್ಕತಾದ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣ ವಿರುದ್ಧ ಪ್ರತಿಭಟಿಸಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆ.17ರ ಶನಿವಾರ ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ದೇಶಾದ್ಯಂತ ವೈದ್ಯಕೀಯ ಸೇವೆಗಳನ್ನು ಬಂದ್ ಮಾಡುವುದಾಗಿ ಪ್ರಕಟಿಸಿದೆ.

ಬೆಳಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ತುರ್ತು ಸೇವೆಗಳು ಆಸ್ಪತ್ರೆಗಳಲ್ಲಿ (Hospital) ಲಭ್ಯವಿರುತ್ತವೆ. ಆದರೆ, ಹೊರರೋಗಿ ವಿಭಾಗಗಳು (ಒಪಿಡಿ) ಕೆಲಸ ಮಾಡುವುದಿಲ್ಲ. ಇಡೀ ದಿನ ಯಾವುದೇ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದಿಲ್ಲ. ಆಧುನಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೂ ಈ ಬಂದ್‌ ಅನ್ವಯಿಸುತ್ತದೆ ಎಂದು ಐಎಂಎ ಹೇಳಿದೆ.

‘ಇಂದು ಮಹಿಳಾ ವೈದ್ಯರಿಗೆ ಭದ್ರತೆ ಇಲ್ಲದಂತಾಗಿದೆ. ಆಸ್ಪತ್ರೆಗಳಲ್ಲಿ ವೈದ್ಯರಿಗೆ ಭದ್ರತೆ ನೀಡುವುದು ಅಧಿಕಾರಿಗಳ ಹೊಣೆ. ಅಧಿಕಾರಿಗಳ ನಿರ್ಲಕ್ಷ ದಿಂದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ದೈಹಿಕ ಹಲ್ಲೆ ಹಾಗೂ ಅಪರಾಧ ಕೃತ್ಯಗಳು ಸಂಭವಿಸುತ್ತಿವೆ’ ಎಂದು ಐಎಂಎ ವಿಷಾದ ವ್ಯಕ್ತಪಡಿಸಿದೆ.

ಮುಖ್ಯವಾಗಿ ದೇಶದಾದ್ಯಂತ ಇರುವ ಎಲ್ಲಾ ಆಸ್ಪತ್ರೆಗಳನ್ನು ವಿಮಾನ ನಿಲ್ದಾಣಗಳಂತೆ ಸುರಕ್ಷಿತ ವಲಯಗಳಾಗಿ ಘೋಷಿಸಿಬೇಕು. ಅತ್ಯಾಚಾರ ಹಾಗೂ ಕೊಲೆಯಾದ ವೈದ್ಯೆ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು. ಈ ಪ್ರಕರಣವನ್ನು ಶೀಘ್ರವಾಗಿ ತನಿಖೆ ಮಾಡುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಮುಖ್ಯಸ್ಥ ಡಾ। ಆರ್.ವಿ. ಅಶೋಕನ್ ಒತ್ತಾಯಿಸಿದ್ದಾರೆ.

Leave A Reply

Your email address will not be published.