Sharavati: ರಾಜಧಾನಿಗೆ ಶರಾವತಿ ನೀರು ತರಲು ಪ್ಲಾನ್: ಮತ್ತೊಂದು ಪರಿಸರ ನಾಶದ ಹಾದಿ, ಈ ಸರ್ಕಾರಗಳು ಇದ್ದರೆಷ್ಟು ಹೋದರೆಷ್ಟು?
Sharavati: ಬೆಂಗಳೂರಿನ ಜನರಿಗಾಗಿ ಅಥವಾ ವಲಸಿಗರ ಓಟಿಗಾಗಿ ಕರ್ನಾಟಕವನ್ನಾಳುವ ಜೆಸಿಬಿ(JDS, Congress, BJP) ಪಕ್ಷದ ಅಯೋಗ್ಯ ರಾಜಕಾರಣಿಗಳು ಯಾರನ್ನು ಬೇಕಾದರೂ ಮಾರುತ್ತಾರೆ. ಏನನ್ನು ಬೇಕಾದರೂ ಅಡವಿಡುತ್ತಾರೆ. ಬೆಂಗಳೂರು ಕೇಂದ್ರಿತ ವ್ಯವಸ್ಥೆಗಾಗಿ ಇಲ್ಲಿಯವರೆಗೆ ಮಲೆನಾಡು ಹಾಗೂ ಕರಾವಳಿಯನ್ನು ಅದೆಷ್ಟೊಂದು ಬಾರಿ ಅಗೆದು ಬಗೆದು ಲೂಟಿ ಹೊಡೆದಿರುವುದೇ ಇದಕ್ಕೆ ಸಾಕ್ಷಿ. ಈಗ ಮತ್ತೊಂದು ಸುತ್ತಿನ ಲೂಟಿಗೆ ಸಜ್ಜಾಗಿದ್ದಾರೆ.
ಮಂಗಳೂರಿಂದ ನೇತ್ರಾವತಿ ನದಿ ನೀರನ್ನು ತರುವ ಯೋಜನೆ ಮಾಡಿ ಇಡೀ ಪಶ್ಚಿಮ ಘಟ್ಟವನ್ನೇ ಬರ್ಬಾದ್ ಮಾಡಿ ಆಯ್ತು. ಅತ್ತ ಪರಿಸರವೂ ಹಾಳು ಇತ್ತ ನೀರು ಬರಲಿಲ್ಲ. ಹಣ ಎಲ್ಲಿ ಹೋಯ್ತು ಅನ್ನೋದಕ್ಕೆ ಉತ್ತರವಿಲ್ಲ. ಇದೀಗ ಬೆಂಗಳೂರಿಗೆ ಶರಾವತಿ ನೀರು ತರಲು ಸಮೀಕ್ಷೆ ಮಾಡಲಾಗುತ್ತಿದೆ. 73 ಲಕ್ಷ ರು.ಗೆ ಟೆಂಡರ್ ಕರೆಯಲಾಗಿದ್ದು ಲಿಂಗನಮಕ್ಕಿಯಿಂದ ಸಮುದ್ರಕ್ಕೆ ಹೋಗುವ 40 ಟಿಎಂಸಿ ನೀರು ಮೇಲೆ ಇದೀಗ ಸರ್ಕಾರದ ಕಣ್ಣು ಬಿದ್ದಿದೆ. ಈ ಯೋಜನೆಯಿಂದ ಮಧ್ಯ ಬಾಗದ ಕರ್ನಾಟಕ, ಪೂರ್ವ ಭಾಗದ ಜಿಲ್ಲೆಗಳಿಗೂ ಕುಡಿಯುವ ನೀರು ಪೂರೈಕೆಯಾಗಲಿದೆ ಅಂತೆ. ಯಾರ ಕಿವಿಗೆ ಸರ್ಕಾರ ಹೂವಿಡಲು ಹೊರಟಿದೆ ಅನ್ನೋದೆ ಪ್ರಶ್ನೆ.
ದುರಂತವೆಂದರೆ ತಮ್ಮ ನೆಲದ ಮೇಲೆ ಸರ್ಕಾರ ನಡೆಸುವ ಇಂಥಾ ಅತ್ಯಾಚಾರವನ್ನು ಅಪ್ಪಿ ತಪ್ಪಿಯೂ ಮಲೆನಾಡಿನಿಂದ, ಕರಾವಳಿಯಿಂದ ಆಯ್ಕೆಯಾದ ಶಾಸಕರು ಪ್ರಶ್ನಿಸುವುದಿಲ್ಲ. ಪ್ರಶ್ನಿಸುವ ತಾಖತ್ತೂ ಇಲ್ಲ. ಈ ಪ್ರದೇಶದ ಪ್ರತಿನಿಧಿಗಳು ಪಕ್ಷಾತೀತವಾಗಿ ಒಮ್ಮೆ ಒಟ್ಟಾಗಿ ನಿಂತು ನೋಡಲಿ. ಯಾಕೆ ಸರ್ಕಾರ ಬಗ್ಗುವುದಿಲ್ಲ ನೋಡೋಣ. ಆದರೆ ಸದನದಲ್ಲಿ ನೆಟ್ಟಗೆ ಪ್ರಶ್ನೆ ಕೇಳಲೂ ತಡವರಿಸುವ ಈ ಮುಸುಡಿಗಳು ತಮ್ಮ ಜನರನ್ನು, ಕ್ಷೇತ್ರವನ್ನು ಅದೇನು ತಾನೇ ರಕ್ಷಿಸಿಯಾರು! ಯಾವುದಾದರೂ ದೊಡ್ಡ ಯೋಜನೆ ಜಾರಿಯಾದರೆ ಸಾಕು ತಾವೊಂದಷ್ಟು ಗೆಬರಿಕೊಳ್ಳಬಹುದು ಅಂತಷ್ಟೇ ಯೋಚಿಸುತ್ತಾರೆ.
ಇನ್ನೂ ನಾವೂ ಕೂಡಾ ಹಾಗೇ ಇದ್ದೇವೆ. ಜಾತಿ, ಧರ್ಮದ ಸಮಾವೇಶಗಳಿಗೆ ಒಟ್ಟಾಗುವಂತೆ ನಾವು ನಮ್ಮ ನೆಲದ ಅಸ್ಮಿತೆಗಾಗಿ ಒಗ್ಗೂಡುವುದಿಲ್ಲ. ಹೀಗಾಗಿಯೇ ಯಾವ ದೊಡ್ಡ ಯೋಜನೆಗಳು ಬಂದರೂ ನಮ್ಮ ಕೈಲಿ ಏನನ್ನೂ ಕಿಸಿಯಲಾಗುವುದಿಲ್ಲ. ಸರ್ಕಾರಗಳೂ ಹಾಗೆಯೇ… ಮಲೆನಾಡಿನಲ್ಲಿ ಯಾವುದೇ ಯೋಜನೆ ಪ್ರಾರಂಭಕ್ಕೂ ಮುನ್ನ ಸ್ಥಳೀಯರ ಅಭಿಪ್ರಾಯ ಒಪ್ಪಿಗೆಯನ್ನು ಕೇಳುವುದಿಲ್ಲ. ಇದು ಬ್ರಿಟಿಷ್ ಆಳ್ವಿಕೆಯ ಮುಂದುವರಿಕೆ ಅಷ್ಟೇ.
ಈ ಲೂಟಿಕೋರರಿಂದ ಪಶ್ಚಿಮಘಟ್ಟ ಉಳಿಯಬೇಕೆಂದರೆ ಇರುವುದೊಂದೇ ದಾರಿ. ಕಲ್ಯಾಣ ಕರ್ನಾಟಕಕ್ಕೆ ನೀಡಿದಂತೆ ಸಂವಿಧಾನದಲ್ಲಿ ತಿದ್ದುಪಡಿ ತಂದು ಮಲೆನಾಡು ಕರಾವಳಿಗೂ ವಿಶೇಷ ಸ್ಥಾನಮಾನ ಕಲ್ಪಿಸುವುದು. ಇಡೀ ನಾಲ್ಕು ರಾಜ್ಯಗಳಿಗೆ ನೀರುಣಿಸುವ ಪಶ್ಚಿಮಘಟ್ಟಕ್ಕೆ ಇಷ್ಟನ್ನೂ ಮಾಡದೇ ಹೋದರೆ ಈ ಸರ್ಕಾರಗಳು ಇದ್ದರೆಷ್ಟು ಹೋದರೆಷ್ಟು.