Temple Bell: ಪೂಜೆಯ ವೇಳೆ ಯಾಕೆ ಗಂಟೆ ಬಾರಿಸುತ್ತಾರೆ..? ಇದಕ್ಕೆ ಒಂದು ಪುರಾಣ ಕಥೆ ಇದೆ.

Temple Bell: ” ಘಂಟಾ ಕರ್ಣ “.. ಇವನು ಶಿವಗಣದಲ್ಲೊಬ್ಬ.ಈತನ ಬಗ್ಗೆ ಅನೇಕ ಕಥೆಗಳಿವೆ. ಶಾಪಗ್ರಸ್ತನಾದ ಈತ ಮಾನವ ಯೋನಿಯಲ್ಲಿ ಹುಟ್ಟಿ, ವಿಕ್ರಮನ ಆಸ್ಥಾನದಲ್ಲಿ ಪಂಡಿತರನ್ನು ಗೆಲ್ಲಲಿಕ್ಕಾಗಿ ವರ ಬೇಡಲು ಶಿವನನ್ನು ಆರಾಧಿಸಿದ. ಶಿವ ಪ್ರತ್ಯಕ್ಷನಾಗಿ, ಕಾಳಿದಾಸನ ವಿನಾ ಎಲ್ಲರನ್ನೂ ಗೆಲ್ಲುತ್ತೀಯ ಎಂದು ವರಕೊಟ್ಟ.

ಅಷ್ಟಕ್ಕೇ ತೃಪ್ತನಾಗದೆ, ಕೋಪಗೊಂಡ ಘಂಟಾ ಕರ್ಣ ತಾನಿನ್ನು ” ಶಿವ ” ಶಬ್ದವನ್ನುಚ್ಚರಿಸುವುದಿಲ್ಲ ಎಂದು ಪಣ ತೊಟ್ಟು ತನ್ನ ಜೊತೆ ವಾದ ಹೂಡಲು ಕಾಳಿದಾಸನನ್ನು ಆಹ್ವಾನಿಸಿದ. ಶಿವನ ಮೇಲೆ ಒಂದು ಸ್ತೋತ್ರವನ್ನು ಘಂಟಾ ಕರ್ಣ ರಚಿಸಿದರೆ, ತಾನು ಪರಾಭವನಾದೆನೆಂದು ಒಪ್ಪಿಕೊಳ್ಳುವುದಾಗಿ ಕಾಳಿದಾಸ ತಿಳಿಸಿದ. ಹಾಗೆ ಮಾಡಿ ಘಂಟಾ ಕರ್ಣ ಕಾಳಿದಾಸನನ್ನು ಸೋಲಿಸಿದನಂತೆ. ಸ್ವಾರಸ್ಯವೇನೆಂದರೆ, ಈತ ರಚಿಸಿದ ಶಿವ ಸ್ತೋತ್ರದಲ್ಲಿ ಎಲ್ಲಿಯೂ ಶಿವನ ಹೆಸರು ಬಂದಿರಲಿಲ್ಲ ಎಂಬುದು. ಆಗ ಶಿವ ಪ್ರಸನ್ನನಾಗಿ ಈತನನ್ನು ತನ್ನ ಪರಿವಾರದಲ್ಲಿ ಸೇರಿಸಿಕೊಂಡ.

ಈ ಕಥೆಯ ಮತ್ತೊಂದು ರೂಪಾಂತರ ಶ್ರೀ ಹರಿವಂಶದಲ್ಲಿ ಬಂದಿದೆ. ಘಂಟಾ ಕರ್ಣ ಪರಮ ಶಿವಭಕ್ತ. ಅನ್ಯ ದೈವದ ಹೆಸರೇ ತನ್ನ ಕಿವಿಗೆ ಬೀಳದಂತೆ ಕಿವಿಗೆ ಘಂಟೆ ಕಟ್ಟಿಕೊಂಡಿದ್ದ. ಒಮ್ಮೆ ಶಿವನು ವೇಷಾಂತರದಿಂದ ಬಂದು ‘ಹರಿಯಿತು’ ಎಂಬ ಪದವನ್ನು ಈತನ ಎದುರಿಗೆ ಪ್ರಯೋಗಿಸಲಾಗಿ ಸಿಟ್ಟುಗೊಂಡ ಘಂಟಾಕರ್ಣ ಶಿವನನ್ನು ಅಟ್ಟಾಡಿಸಿ ಓಡಿಸಿದ. ಹರ ಮಹತ್ತ್ವವನ್ನು ಘಂಟಾಘೋಷವಾಗಿ ಸಾರಿದ ಈತನನ್ನು ಘಂಟಾ ಕರ್ಣನೆಂದು ಕರೆಯಲಾಗಿದೆ. ಈತನು ಪೂಜಿಸಿದ ಪುಷ್ಪ ಬಾಡುತ್ತಿರಲಿಲ್ಲ. ಒಮ್ಮೆ ಸೂರ್ಯ ಅದನ್ನು ಬಾಡಿಸಲು, ಕೋಪಗೊಂಡ ಘಂಟಾ ಕರ್ಣನು ಕುಷ್ಠ ರೋಗಿಯಾಗೆಂದು ಸೂರ್ಯನನ್ನು ಶಪಿಸಿದ. ಆಗ ಸೂರ್ಯ ಈತನನ್ನೇ ಶರಣುಹೋಗಲು ಮನೋಹರನೆಂಬ ಗಣೇಶ್ವರನ ಪಾದೋದಕದಿಂದ ರೋಗ ವಾಸಿಯಾಗುವುದೆಂದು ಶಾಪ ವಿಮೋಚನ ಮಾರ್ಗವನ್ನು ತಿಳಿಸಿದ.

ಆಗ ಸೂರ್ಯನು ಕಾಶಿಯಲ್ಲಿ ಶ್ರೀ ಬಾಲಕೇಶ್ವರನನ್ನು ಸ್ಥಾಪಿಸಿ, ಗಣೇಶ್ವರನ ಪಾದೋದಕವನ್ನು ಸ್ವೀಕರಿಸಿ, ಕಷ್ಟವನ್ನು ಕಳೆದುಕೊಂಡ. ಈಗಲೂ ಬಂಗಾಳದಲ್ಲಿ ಘಂಟಾ ಕರ್ಣನನ್ನು ದೇವರೆಂದು ಭಾವಿಸಿ, ಆಧಿವ್ಯಾಧಿಗಳಿಂದ ತಮ್ಮನ್ನು ರಕ್ಷಿಸಲು ಈತನನ್ನು ಪುಜಿಸುತ್ತಾರೆ. ಈ ಪೂಜೆಗೆ ಯಾರ ಆವಶ್ಯಕತೆಯೂ ಇಲ್ಲ. ಮನೆಯಲ್ಲಿನ ವೃದ್ಧ ಸ್ತ್ರೀಯೇ ಈ ಕೆಲಸವನ್ನು ಸಾಗಿಸಬಹುದು. ಘಂಟಾ ಕರ್ಣನ ಪುಜೆಗೆ ಬೇಕಾಗುವ ಸರಂಜಾಮನ್ನು ಭಿಕ್ಷೆಯೆತ್ತಿ, ಕೂಡಿಸುತ್ತಾರೆ. ಇನ್ನೂ ಹಲವು ಕಡೆ ಮಸಿಯಾದ ಒಂದು ಮಡಕೆಯನ್ನು ತೆಗೆದುಕೊಂಡು,ಅದಕ್ಕೆ ಗೋಮಯವನ್ನು ಲೇಪಿಸಿ, ಕವಡೆಗಳನ್ನು ಅಂಟಿಸಿ ಶೃಂಗರಿಸಿ, ಘಂಟಾ ಕರ್ಣನ ಹೆಸರಿನಲ್ಲಿ ಪುಜಿಸುತ್ತಾರೆ.

ಇನ್ನೊಂದು ಹೇಳಿಕೆಯ ಪ್ರಕಾರ ಈತ ವಿಷ್ಣು ಭಕ್ತನಾಗಿದ್ದ. ಒಮ್ಮೆ ಶಿವನೇ ಸರ್ವೋತ್ತಮನೆಂದು ವಿಷ್ಣುವಿನಿಂದಲೇ ಅರಿತು, ತಪಸ್ಸು ಮಾಡಿ ಶಿವನಿಗೆ ತನ್ನನ್ನೇ ಆರ್ಪಿಸಿಕೊಂಡ. ಆಗ ಈತನ ದೇಹವೇ ಶಿವ ಗುಡಿಯ ಹೊಸ್ತಿಲಾಯಿತು. ಕೈಕಾಲು ಬಾಗಿಲ ತೋಳಾದವು. ತಲೆ ಘಂಟೆಯಾಯಿತು. ಮೊದಲು, ಈ ಘಂಟೆ ಬಾರಿಸಿ ಅನಂತರ ಪುಜಿಸಿದರೆ, ಶಿವ ಮೆಚ್ಚುವನೆಂಬ ನಂಬಿಕೆಯಿದೆ.

1 Comment
  1. https://temp-mail.org says

    Temp mail This was beautiful Admin. Thank you for your reflections.

Leave A Reply

Your email address will not be published.