Music Scholarship: ಸಂಗೀತ, ನೃತ್ಯ ಕಲಾಕ್ಷೇತ್ರದ ವಿದ್ಯಾರ್ಥಿಗಳಿಗೂ ಸಿಗಲಿದೆ‌ ಶಿಷ್ಯವೇತನ : ಇಂದೇ ಅರ್ಜಿ ಸಲ್ಲಿಸಿ

Music Scholarship:  ಕೇವಲ ಶೈಕ್ಷಣಿಕ ವಿಷಯಕ್ಕೆ ಮಾತ್ರ ಈವರೆಗೆ ಶಿಷ್ಯ ವೇತನಗಳನ್ನು ಸರ್ಕಾರ ನೀಡುತ್ತಿತ್ತು. ಆದರೆ ಇದೀಗ ಕಲಾಕ್ಷೇತ್ರದ ವಿದ್ಯಾರ್ಥಿಗಳಿಗೂ ಶಿಷ್ಯವೇತನ ಪಡೆಯುವ ಅವಕಾಶವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕಲ್ಪಿಸಿದೆ. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ (Music), ನೃತ್ಯ (Dance), ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ ಮುಂತಾದ ಕಲಾಗಳನ್ನು ಕಲಿಯುತ್ತಿರುವ 16 ರಿಂದ 24 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ಈ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. 2023-24 ಮತ್ತು 2024-25ನೇ ಸಾಲಿನಿಂದ ಶಿಷ್ಯವೇತನಕ್ಕೆ ಆಯ್ಕೆ ಪ್ರಕ್ರಿಯೆ ಮೊಬೈಲ್, ವಿಡಿಯೋ ಚಿತ್ರೀಕರಣದ ಮೂಲಕ ನಡೆಯಲಿದೆ ಎಂದು ಅಕಾಡೆಮಿ ತಿಳಿಸಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಶಿಷ್ಯವೇತನ ಅರ್ಜಿಗಳ ಬಗ್ಗೆ ಮಾಹಿತಿಯನ್ನು ಅಕಾಡೆಮಿ ಫೇಸ್‍ಬುಕ್ (facebook:com/karnatakasangeeta1978) ಮೂಲಕ ಪಡೆದುಕೊಂಡು ನಂತರ ವೆಬ್‍ಸೈಟ್ sangeetanrityaacademy.karnataka.gov.in ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬೇಕು. ಸಂದರ್ಶನದ ಬದಲಿಗೆ ಅಭ್ಯರ್ಥಿಗಳು ಇನ್ನು ಮುಂದೆ ಅರ್ಜಿಯಲ್ಲಿ ನೀಡಿರುವ ಪಠ್ಯಕ್ರಮವನ್ನು ಮೊಬೈಲ್/ ವಿಡಿಯೋ ಚಿತ್ರೀಕರಿಸಿ, ಪೆನ್‍ಡ್ರೈವ್‍ನಲ್ಲಿ ಅಳವಡಿಸಿ, ಪೆನ್‍ಡ್ರೈವ್‍ನೊಂದಿಗೆ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560002 ಕಾರ್ಯಾಲಯಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು.

ಆಯ್ಕೆ ಹೇಗೆ ನಡೆಯುತ್ತದೆ..?
ವಿದ್ಯಾರ್ಥಿಗಳಿಂದ ಬಂದ ಅರ್ಜಿಗಳನ್ನು ಆಯಾಯ ಕಲಾ ಪ್ರಕಾರಕ್ಕೆ ಅನುಗುಣವಾಗಿ ತೀರ್ಪುಗಾರರಿಗೆ ಕಳುಹಿಸಲಾಗುತ್ತದೆ. ಅಭ್ಯರ್ಥಿಗಳು ಚಿತ್ರೀಕರಿಸಿ, ಕಳುಹಿಸಿಕೊಟ್ಟಿರುವ ಪೆನ್‍ಡ್ರೈವ್ ಅನ್ನು ಪರಿಶೀಲಿಸಲಾಗುತ್ತದೆ. ನಂತರ ಸ್ಕಾಲರ್‌ಶಿಪ್‌ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪಠ್ಯಕ್ರಮ ಚಿತ್ರೀಕರಿಸಿದ ಪೆನ್‍ಡ್ರೈವ್‍ನೊಂದಿಗೆ ಅರ್ಜಿಯನ್ನು ಸ್ವೀಕರಿಸಲು ಆಗಸ್ಟ್, 12 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಇಲ್ಲಿ ಅಂತಿಮವಾಗುತ್ತದೆ. ಆಸಕ್ತ ಅರ್ಹ ಕಲಾವಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಆಯಾಯ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಹಾಗೂ ಸಿಬ್ಬಂದಿಗಳನ್ನು ಕಚೇರಿ ವೇಳೆಯಲ್ಲಿ ಭೇಟಿ ಮಾಡಬಹುದು.

Leave A Reply

Your email address will not be published.