Mangalore Pilikula: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ಅಧೀನದ ಮೃಗಾಲಯದಲ್ಲಿ ಏಕೈಕ ಎಮು ಪಕ್ಷಿ ಸಾವು ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಪಡೆದು ತನಿಖೆ ನಡೆಸಲಾಗುವುದು ಎಂದು ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ, ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಪಿಲಿಕುಳ ಜೈವಿಕ ಉದ್ಯಾನವನದ ಅಧೀನದ ಮೃಗಾಲಯದಲ್ಲಿ ಏಕೈಕ ಎಮು ಪಕ್ಷಿ ದಾಳಿಗೊಳಗಾದ ಸ್ಥಿತಿಯಲ್ಲಿ ಮಂಗಳವಾರ ಸಾವಿಗೀಡಾಗಿರುವ ಬಗ್ಗೆ ಸಮಗ್ರ ವರದಿ ಪ್ರಕಟಿಸಿತ್ತು. ಈಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ಮಾಹಿತಿ ಪಡೆದು ತನಿಖೆ ನಡೆಸುವ ಭರವಸೆ ನೀಡಿದ್ದಾರೆ.
ಅಧ್ಯಕ್ಷರಿಗೆ- ಆಯುಕ್ತರಿಗೆ ಮಾಹಿತಿ ನೀಡಿಲ್ಲ
ಚಿರತೆ ದಾಳಿಯಿಂದ ಜೈವಿಕ ಉದ್ಯಾನವನದ ಏಕೈಕ ಎಮು ಪಕ್ಷಿ ಸಾವಿಗೀಡಾದ ಬಗ್ಗೆ ಅಲ್ಲಿನ ಸಿಬ್ಬಂದಿಗಳೇ ಮಾಹಿತಿ ನೀಡಿದ್ದು, ಪಿಲಿಕುಳದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಎಮು ಸಾವಿಗೆ ಪಿಲಿಕುಳ ಅಧಿಕಾರಿಗಳಿಂದ ಸ್ಪಷ್ಟ ಹೇಳಿಕೆ ಸಿಗಲಿಲ್ಲ. ಎಮು ಲಿವರ್, ಕಿಡ್ನಿ ಸಮಸ್ಯೆಯಿಂದ ಸಾವಿಗೀಡಾಗಿದೆ ಎಂದು ಆರಂಭದಲ್ಲಿ ತಿಳಿಸಿದ್ದ ಅಧಿಕಾರಿಗಳು, ಅನಂತರ ಯಾವುದೋ ದಾಳಿಯಿಂದ ಕಾಲಿಗೆ ಗಾಯವಾಗಿದ್ದು, ಬಳಿಕ ಸತ್ತಿದೆ ಎಂದು ತಿಳಿಸಿದ್ದಾರೆ.
ಎಮು ಸಾವಿನ ಬಗ್ಗೆ ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಿಗಾಗಲಿ, ಆಯುಕ್ತರಿಗಾಗಲಿ 2 ದಿನವಾದರೂ ಪಿಲಿಕುಳ ಅಧಿಕಾರಿಗಳು ಮಾಹಿತಿ ನೀಡಿಲ್ಲ.
ಗುರುವಾರ ಮಾಧ್ಯಮಗಳಲ್ಲಿ ಮಾಹಿತಿ ಪ್ರಕಟವಾಗುತ್ತಿದ್ದಂತೆ ಇಂತಹ ಘಟನೆಯೇ ನಡೆದಿಲ್ಲ, ಎಮು ಸಾವಿಗೆ ಕೇರ್ಟೇಕರ್ ಒಬ್ಬರು ಕಾರಣರಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪಿಲಿಕುಳ ನಿಸರ್ಗ ಧಾಮ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
——————–
ಪಿಲಿಕುಳದ ಪ್ರಾಣಿಗಳ ಸರಣಿ ಸಾವು ತನಿಖೆ
ಪಿಲಿಕುಳದಲ್ಲಿ ಪ್ರಾಣಿಗಳ ಹೆಸರಿನಲ್ಲಿ ಅನೇಕ ದಂದೆಗಳು ನಡೆಯುತ್ತಿದ್ದರೂ ಅಲ್ಲಿನ ನಿರ್ದೇಶಕ, ಅಧಿಕಾರಿಗಳ ಮೇಲೆ ಈವರೆಗೆ ತನಿಖೆ ಆಗಿಲ್ಲ. ಪಿಲಿಕುಳದಲ್ಲಿ ಎಮು ಪಕ್ಷಿ ಸಾವು ಪ್ರಕರಣದ ತನಿಖೆಯ ಜತೆಗೆ ಈ ಹಿಂದೆ ಸಾವಿಗೀಡಾದ ಪ್ರಾಣಿಗಳ ಬಗ್ಗೆ ತನಿಖೆ ನಡೆಸಿ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಒತ್ತಾಯಿಸಿದ್ದಾರೆ.
ಪಿಲಿಕುಳ ನಿಸರ್ಗ ಧಾಮ ನಿರ್ದೇಶಕರ ಕಚೇರಿಯಲ್ಲಿ ಪಿಲಿಕುಳ ಬಯೋಲಾಜಿಕಲ್ ಪಾರ್ಕ್ನಲ್ಲಿರುವ ಪ್ರಾಣಿಗಳ ಸಂಖ್ಯೆ ಸಮರ್ಪಕವಾಗಿ ದಾಖಲಾಗಿಲ್ಲ. ಕೇಳಿದಾಗ ದಿನಕ್ಕೊಂದು ಲೆಕ್ಕ ನೀಡುತ್ತಾರೆ. ಸ್ಥಳೀಯ ಹಾಗೂ ಹೊರಬಾಗದಿಂದ ತಂದ ಪ್ರಾಣಿಗಳ ಲೆಕ್ಕ ಇವರಲಿಲ್ಲ. ದೇಶದಲ್ಲೇ ಕಳಿಂಗ ಸರ್ಪದ ಬ್ರೀಡಿಂಗ್ ಸೆಂಟರ್ ಇಲ್ಲಿ ಮಾತ್ರ ಇದ್ದು, ಇಲ್ಲಿಯವರೆಗೆ ಎಷ್ಟು ಕಾಳಿಂಗ ಸರ್ಪದ ಬ್ರೀಡಿಂಗ್ ನಡೆದಿದೆ ಎಂಬ ಮಾಹಿತಿ ಇಲ್ಲ, ಬ್ರೀಡಿಂಗ್ ಮಾಡಿದ ಸರ್ಪ ಎಲ್ಲಿಗೆ ರಫ್ತಾಗುತ್ತಿದೆ ಎಂಬ ಮಾಹಿತಿಯೂ ಸಿಗುತ್ತಿಲ್ಲ. ಒಟ್ಟಿನಲ್ಲಿ ಪ್ರಾಣಿ ಸಂಗ್ರಹಾಲಯದ ಹೆಸರಲ್ಲಿ ಇಲ್ಲಿನ ಕೆಲವು ಅಧಿಕಾರಿಗಳು ದಂಧೆ ನಡೆಸುವ ಅನುಮಾನ ಇದೆ. ನಿವೃತ್ತಿಯಾದ ಸಿಬ್ಬಂದಿಗಳ ಕೈಯಲ್ಲಿ ಇಲ್ಲಿ ಅಧಿಕಾರ ನೀಡಿದ್ದರಿಂದ ಇಂತಹ ಅವ್ಯವಸ್ಥೆ ಆಗಿದೆ. ಈಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಆಯುಕ್ತರಿಗೆ ಮಾಹಿತಿ ನೀಡಿ ಸಮಗ್ರ ತನಿಖೆ ನಡೆಸಲು ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.