Dharmasthala Sowjanya murder: ಧರ್ಮಸ್ಥಳ ಸೌಜನ್ಯ ಕೊಲೆ ಆರೋಪಿ ಬಿಡುಗಡೆ, ಈ ಕೇಸಿನಲ್ಲೀಗ ದೈವ, ದೇವರೇ ಅಪರಾಧಿ !?

latest Karnataka crime news Dharmasthala Sowjanya murder case accused released

Dharmasthala Sowjanya murder: ಇದು ಇಡೀ ಭಾರತದ ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಮಸುಕು ಮಾಡುವ ಕಥನ. ಇಷ್ಟಕ್ಕೂ ಇದೊಂದು ಕಥೆಯಲ್ಲ, ನಿಜ ಘಟನೆಯೊಂದರ ಬಗ್ಗೆ ನಡೆದ ಸುದೀರ್ಘ ಹೋರಾಟ. ಇದು ದಕ್ಷಿಣ ಕನ್ನಡದ ಅತ್ಯಂತ ಬುದ್ಧಿವಂತರೆನಿಸಿಕೊಂಡ ಜನರನ್ನು ಗೇಲಿ ಮಾಡಿ ನಗುವ ಸಮಯ. ತನ್ನದೇ ಸಮುದಾಯದ ಹುಡುಗಿಯ ಭೀಕರ ಹತ್ಯೆಗೆ(Dharmasthala Sowjanya murder) ಬಲಿಷ್ಠವಾಗಿ ಒಂದಾಗದ ದಕ್ಷಿಣ ಕನ್ನಡದ ಒಕ್ಕಲಿಗ ಸಮುದಾಯವನ್ನು ಅಸಹನೆಯಿಂದ ನೋಡುವ ಸಮಯ. ಮತ್ತು ಅದೇ ಸಮಯದಲ್ಲಿ ದಕ್ಷಿಣ ಕನ್ನಡದ ಒಕ್ಕಲಿಗ ಗೌಡರ ಪ್ರತಿನಿಧಿಯಾಗಿದ್ದ, ಈಗಲೂ ತಾನೊಬ್ಬ ನಾಯಕ ಎಂದುಕೊಳ್ಳುತ್ತಿರುವ ಆಗಿನ ಮುಖ್ಯಮಂತ್ರಿ ಡಿವಿ ಸದಾನಂದ ಗೌಡನನ್ನು ಹೇಸಿಗೆ ಭರಿತ ನೋಟದಿಂದ ಕಾಣುವ ಸಮಯ. ಜತೆಗೆ ಅವತ್ತಿನಿಂದ ಇವತ್ತಿನವರೆಗೂ ಗಟ್ಟಿಯಾಗಿ ನಿಂತು ದನಿಯೆತ್ತಿ ಮಾತಾಡಿದ ಸೌಜನ್ಯ ಸಾವಿಗೆ(Dharmasthala Sowjanya murder) ನ್ಯಾಯ ಕೊಡಿಸಲು ನಿಂತ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಒಂದು ಸಲ್ಯೂಟ್ ಹೊಡೆಯುವ ಸಂದರ್ಭ ಕೂಡಾ.

Dharmasthala Sowjanya murder
Image source: Public tv

 

ಹುಡುಗಿಯೊಬ್ಬಳನ್ನು ನಿಚ್ಚಳ ಬೆಳಕಿನಲ್ಲಿ ಅಪಹರಿಸಿ ಕೊಂದು ಹಾಕಿ ಇವತ್ತಿಗೆ 10 ವರ್ಷಗಳು. ಆದರೂ ಆಕೆಯ ಆತ್ಮ ಮಲಿನಗೊಂಡ ನೇತ್ರಾವತಿಯ ತಟದ ಇನ್ನೂ ಉಳಿದುಕೊಂಡ ಕತ್ತಲು ಕಾಡುಗಳಲ್ಲಿ ಅತೃಪ್ತವಾಗಿ ಓಡಾಡಿಕೊಂಡಿದೆ. ಇದ್ದ ಓರ್ವ ಆರೋಪಿ ಕೂಡ ಈಗ ನಿರಪರಾಧಿಯಾಗಿ ಹೊರಕ್ಕೆ ಬಂದಿದ್ದಾನೆ. ಹಾಗಾದರೆ ಆ ಕೊಲೆ ಮಾಡಿದ್ದು ಯಾರು ? ಇಂತಹ ಹತ್ತು ಹಲವು ಪ್ರಶ್ನೆಗಳನ್ನು, ಅಲ್ಲಲ್ಲಿ ಉತ್ತರಗಳನ್ನು ಅನುಮಾನಗಳನ್ನು ಮತ್ತು ಒಂದು ಗಾಢ ನೋವನ್ನು ತುಂಬಿಕೊಂಡು ನಿಂತಿದೆ ಇವತ್ತಿನ ಈ ನಮ್ಮ ಬರಹ.

ಇದು ಸುಮಾರು 11 ವರ್ಷಗಳ ಹಿಂದಿನ ಘಟನೆ. ಇಸವಿ 2012. ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯಾ ಉಜಿರೆಯ ಎಸ್.ಡಿ.ಎಂ. ಕಾಲೇಜು ವಿದ್ಯಾರ್ಥಿನಿ. 2012 ರ ಅ. 9 ರಂದು ಕಾಲೇಜಿನಿಂದ ಮನೆಗೆ ಮರಳುವಾಗ ನಾಪತ್ತೆಯಾಗಿದ್ದಳು. ನಿಜಕ್ಕೂ ಅವತ್ತು ಆಕೆ ಸ್ವಲ್ಪ ಬೇಗ ಬರಬೇಕಿತ್ತು. ಬೆಳಿಗ್ಗೆ ಆಕೆ ಹಸಿದೇ ಮನೆ ಬಿಟ್ಟಿದ್ದಳು. ಅಂದು ಬಹುಶ: ‘ ಹೊಸ ಅಕ್ಕಿ ‘ ಊಟ ಇತ್ತೆಂದು ಕಾಣಿಸುತ್ತದೆ. ಹಾಗೆ ಬೆಳಿಗ್ಗೆ ಉಪವಾಸವಿದ್ದು, ಬೇಗ ಬೇಗ ಕಾಲೇಜು ಮುಗಿಸಿ ಮನೆಯ ಕಡೆ ಹೆಜ್ಜೆ ಹಾಕಿದ್ದಳು ಸೌಜನ್ಯ. ಉಜಿರೆಯಲ್ಲಿ ಕಾಲೇಜು ಓದುತ್ತಿದ್ದ ಆಕೆ ನೇತ್ರಾವತಿಯ ಸ್ನಾನ ಘಟ್ಟದ ಬಳಿ ಬಸ್ಸು ಇಳಿದಿದ್ದಳು. ಅಲ್ಲೇ ಒಂದು ಬದಿಯಲ್ಲಿ ಇದೆ ಆಕೆಯ ಮಾವನ ಅಂಗಡಿ. ಒಂದು ಬಾರಿ ಅಲ್ಲಿಗೆ ಭೇಟಿ ಕೊಟ್ಟು ನಂತರ, ಮನೆಯತ್ತ ಬಿರುಸಾಗಿ ನಡೆದಿದ್ದಾಳೆ ಹುಡುಗಿ. ದಾರಿ ಮಧ್ಯೆ ಧರ್ಮಸ್ಥಳದ ಪ್ರಕೃತಿ ಚಿಕಿತ್ಸೆಯ ಆಸ್ಪತ್ರೆಯ ಗೇಟ್ ಇದೆ. ಅದರ ಮುಂದೆ ಸಿಸಿ ಟಿವಿ ಕೂಡಾ ಇದೆ. ಆಕೆ ಅಲ್ಲಿ ಹಾದು ಹೋದದ್ದು ಕೂಡ ರೆಕಾರ್ಡ್ ಆಗಿದೆ. ಅದೇ ಕೊನೆ ಆಕೆಯನ್ನು ಮತ್ಯಾರೂ ಜೀವಂತವಾಗಿ ನೋಡಿಲ್ಲ.

ಅಂದು ಸಂಜೆ ಆದರೂ ಮನೆಯಲ್ಲಿ ಮಗಳ ಸುಳಿವಿಲ್ಲದನ್ನು ಅರಿತು ಆತಂಕಗೊಂಡ ಪೋಷಕರು ಅವರಿವರಿಗೆ ಕರೆ ಮಾಡುತ್ತಾರೆ. ಆದರೂ ಎಷ್ಟು ಹುಡುಕಿದರೂ ಸೌಜನ್ಯಳ ಪತ್ತೆಯಿಲ್ಲ. ಆದರೆ ಆಕೆ ಕಾಲೇಜ್ ಬಿಟ್ಟು ಬಂದದ್ದು ಬಸ್ ಇಳಿದದ್ದು, ಅಲ್ಲಿಂದ ಮನೆ ಕಡೆ ಹೆಜ್ಜೆ ಹಾಕಿದ್ದನ್ನು ನೋಡಿದವರಿದ್ದಾರೆ. ಅಲ್ಲಿಯ ನಂತರ ಆಕೆ ಕಣ್ಮರೆ ಆಗಿದ್ದಾಳೆ. ತಕ್ಷಣ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತದೆ. ಆ ಸುದ್ದಿ ಹಿಂದೂ ಪರ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ಯವರಿಗೂ ತಲುಪುತ್ತದೆ. ಅದಾಗಲೇ ಕತ್ತಲು ಆವರಿಸಿದ್ದು ಸಂಘಟನೆಯ ಮತ್ತು ಆಸುಪಾಸಿನ ನೂರಾರು ಹುಡುಗರು ಅಲ್ಲಿ ಜೊತೆಯಾಗುತ್ತಾರೆ. ರಾತ್ರಿ ಎರಡುವರೆ ತನಕ ಅಲ್ಲಿನ ಸುತ್ತಮುತ್ತಲ ಇಡೀ ಕಾಡನ್ನು ಜಾಲಾಡುತ್ತಾರೆ. ಆದರೆ ಸೌಜನ್ಯಳ ಸುದ್ದಿಯಾಗಲಿ, ದೇಹವಾಗಲೀ ಸಿಗುವುದಿಲ್ಲ. ಅಂದು ರಾತ್ರಿ 2.30 ಗಂಟೆಯ ತನಕ ಹುಡುಕಿದ ನಂತರ, ಬಹುಶಃ ಇನ್ನು ಇಲ್ಲಿ ಆಕೆ ಸಿಗಲ್ಲ ಅನ್ನುವುದು ಖಾತರಿ ಆಗಿದೆ. ಹಾಗಾಗಿ ಅಂದಿನ ಹುಡುಕಾಟವನ್ನು ನಿಲ್ಲಿಸಲಾಗಿದೆ. ಸುದೀರ್ಘ 8 ತಾಸುಗಳ ಹುಡುಕಾಟದ ನಂತರ ಎಲ್ಲರೂ ತಮ್ಮ ತಮ್ಮ ಮನೆಗೆ ಮರಳಿ, ಮರುದಿನ ಬೆಳಿಗ್ಗೆ ‘ ಕೂಂಬಿಂಗ್ ಆಪರೇಶನ್’ ಮಾಡೋದು ಎಂದು ನಿರ್ಧಾರವಾಗಿದೆ. ಹಾಗೆ ಎಲ್ಲರೂ ನಿರಾಶೆಯಿಂದ ಮತ್ತು ಒಂದಷ್ಟು ಖುಷಿಯಿಂದ ಮನೆಯತ್ತ ಮರಳಿದ್ದಾರೆ. ಆ ಪ್ರದೇಶದಲ್ಲಿ ಸೌಜನ್ಯಳ ದೇಹವು ಸಿಗದೇ ಇದ್ದ ಕಾರಣದಿಂದ ಆಕೆ ಬದುಕಿರುವ ಸಾಧ್ಯತೆ ಇದೆ ಎನ್ನುವ ಸಮಾಧಾನ ಆ ಕ್ಷಣದಲ್ಲಿ ಅಲ್ಲಿದ್ದ ಅವರೆಲ್ಲರಲ್ಲಿ ಮೂಡಿತ್ತು. ಆಕೆಯ ಪೋಷಕರು ಮತ್ತು ಮನೆಯವರು ಸಣ್ಣ ಸಮಾಧಾನದಿಂದ ಇದ್ದರು.

ಮತ್ತೆ ಮರುದಿನ ಬೆಳಕು ಹರಿಯುವ ಜತೆಗೇ ಹುಡುಗರ ದಂಡು ಅಲ್ಲಿ ಸೇರಿತ್ತು. ಮತ್ತೆ ರಾತ್ರಿ ನಿಲ್ಲಿಸಿದ್ದ ಸರ್ಚ್ ಆಪರೇಶನ್ ಶುರುವಾಗಿತ್ತು. ಆದರೆ, ಅಲ್ಲಿ ಹುಡುಕಾಡಿದ ಹುಡುಗರಿಗೆ ಅಚ್ಚರಿ ಕಾದಿತ್ತು. ಯಾಕೆಂದರೆ ಅಲ್ಲಿಯೇ ಕೆಲವೇ ದೂರದಲ್ಲಿ, ಮಣ್ಣಸಂಕ ಬಳಿ ಸೌಜನ್ಯ ಶವವಾಗಿ( Dharmasthala Sowjanya murder) ಮೈಮೇಲೆ ಅಸಂಖ್ಯ ಗಾಯಗಳ ಸಮೇತ ಸತ್ತು ಬಿದ್ದಿದ್ದಳು ! ಆ ಘಟನೆಯು ಅಂದು ಬಹುದೊಡ್ಡ ಅನುಮಾನಕ್ಕೆ ಕಾರಣವಾಗಿದ್ದು, ಆಕೆಯನ್ನು ಕಿಡ್ನ್ಯಾಪ್ ಮಾಡಿ ಮತ್ತೆಲ್ಲಿಗೋ ಕರೆದೊಯ್ದು, ಅತ್ಯಾಚಾರ ಮತ್ತು ಕೊಲೆ ಮಾಡಿ ಬಿಸಾಕಿದ್ದಾರೆ ಎನ್ನುವುದು ಖಚಿತವಾಗಿತ್ತು. ಅಪರಾಧಿಗಳನ್ನು ತಕ್ಷಣ ಬಂಧಿಸಬೇಕು ಎಂದು ಗ್ರಾಮಸ್ಥರು ಮತ್ತು ಹಿಂದೂ ಪರ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ತಂಡ ದೊಡ್ಡದಾಗಿ ಬೇಡಿಕೆ ಇಟ್ಟಿದ್ದರು.

ಬಳಿಕ ತರಾತುರಿಯಲ್ಲಿ ವೈದ್ಯಕೀಯ ಪರೀಕ್ಷೆ ನಡೆದು ಹೋಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಅಘಾತಕಾರಿ ಸತ್ಯ ಹೊರಬಿದ್ದಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂಬುದು ಸಾಬೀತಾಗಿತ್ತು. ಅಷ್ಟೇ ಅಲ್ಲ, ಆಕೆ ಮೇಲೆ ಭೀಕರವಾಗಿ ಅತ್ಯಾಚಾರ ಮಾಡಿ ಆನಂತರ ಆಕೆಯ ಗುಪ್ತಾಂಗಕ್ಕೆ ಮರಳು ತುಂಬಿಸಿ ವಿಕೃತಿ ಮೆರೆಯಲಾಗಿತ್ತು. ಇಷ್ಟೆಲ್ಲಾ ಆಗಿದ್ದರೂ ಅಂದು ಪೋಸ್ಟ್ ಮಾರ್ಟಂ ನಡೆಸಿದ ವೈದ್ಯೆ ಡಾ. ರಶ್ಮಿ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿಯೇ ಇಲ್ಲ ಎನ್ನುವ ಬಲವಾದ ಆರೋಪ ಕೇಳಿ ಬಂದಿತ್ತು. ಮುಂದೆ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಸುದೀರ್ಘ ಹೋರಾಟ ನಡೆದಿದೆ. ಈ ಮಧ್ಯೆ ಆಕೆಯ ಅಪಹರಣ ಮತ್ತು ಕೊಲೆಯಾದ 3 ನೆಯ ದಿನಕ್ಕೆ ಸಂತೋಷ್ ರಾವ್ ಎಂಬ ಓರ್ವನನ್ನು ಧರ್ಮಸ್ಥಳದ ಸಿಬ್ಬಂದಿಗಳು ಹಿಡಿದು ತಂದು ಈತನೇ ಕೊಲೆ ನಡೆಸಿದ್ದು ಎಂದು ಪೊಲೀಸರಿಗೆ ಒಪ್ಪಿಸುತ್ತಾರೆ. ಪೊಲೀಸರು ಕೂಡಾ ಆತನನ್ನೇ ಆರೋಪಿ ಎಂದು ಬಿಂಬಿಸಿ ಆತನ ಮೇಲೆ FIR ಮಾಡುತ್ತಾರೆ.

ಆದರೆ ಊರವರ ಮತ್ತು ಆಕೆಯ ಹೆತ್ತವರ ಅನುಮಾನ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಕುಟುಂಬದ ಮೇಲೆ ತಿರುಗಿದೆ. ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಹಿಂದೂ ಪರ ಸಂಘಟನೆ ಬೃಹತ್ ರೀತಿಯಲ್ಲಿ ಇದನ್ನು ಪ್ರತಿಭಟಿಸುತ್ತದೆ. ನೂರಾರು ಹುಡುಗರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ. ಈಗಾಗಲೇ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕುಟುಂಬಸ್ಥರು ಈ ಕೃತ್ಯದಲ್ಲಿ ಭಾಗಿಯಾದ ಅನುಮಾನಗಳು ದಟ್ಟವಾಗಿರುವ ಸಂದರ್ಭದಲ್ಲಿ ಹೋರಾಟ ನಡೆಸುತ್ತಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಲು ಪೊಲೀಸರು ಉತ್ಸುಕರಾಗುತ್ತಾರೆ. ಆಗ ಧರ್ಮಸ್ಥಳ ಪ್ರಭುತ್ವದ ಮೇಲಿನ ಅನುಮಾನ ಮತ್ತಷ್ಟು ಬಲವಾಗುತ್ತದೆ. ತಕ್ಷಣ ಸುದ್ದಿ ತಿಳಿದ ಮಹೇಶ್ ಶೆಟ್ಟಿ ತಿಮರೋಡಿ ಬಂಧನದಿಂದ ತಪ್ಪಿಸಿಕೊಳ್ಳುತ್ತಾರೆ. ಮುಂದೆ ಸೌಜನ್ಯ ಹೋರಾಟ ಬೃಹತ್ ರೂಪ ಪಡೆದುಕೊಳ್ಳುತ್ತದೆ. ಅದೊಂದು ದಿನ ಬೆಳ್ತಂಗಡಿಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗಿ ಜಾತ್ಯತೀತವಾಗಿ ಹೋರಾಟದಲ್ಲಿ ಭಾಗಿಯಾಗುತ್ತಾರೆ.

ಅಂದು ರಾತ್ರಿ, ಬೆಳಗಾಗೋದ್ರೊಳಗೆ ಸೌಜನ್ಯ ಪ್ರಕರಣ ರಾಷ್ಟ್ರ ವ್ಯಾಪಿಯಾಗಿ ಬೆಳೆಯಿತು. ಅರಳುವ ಮುನ್ನವೇ ಬಾಡಿದ ಆ ಹೆಣ್ಣು ಮಗುವಿನ ಆತ್ಮಕ್ಕೆ ಶಾಂತಿ ದೊರೆಯಬೇಕಾದರೆ ಅಪರಾಧವೆಸಗಿದ ಪಾಪಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಆಕ್ರೋಶಗಳು ಜೋರಾದವು. ಆ ಸಮಯದಲ್ಲಿ ಈ ಪ್ರಕರಣದ ಕುರಿತು ಅನೇಕ ವಿಚಾರಗಳು ಗರಿದೆರಿದ್ದವು. ಈ ಕೃತ್ಯದಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ತಮ್ಮಹರ್ಷೇಂದ್ರ ಕುಮಾರ್ ಅವರ ಮಗ ನಿಶ್ಚಲ್ ಕೈವಾಡವಿದೆ ಎಂದು ಭಾರೀ ಕೂಗು ಕೇಳಿಬಂದಿತ್ತು. ಉಜಿರೆ, ಬೆಳ್ತಂಗಡಿಯ ಸುತ್ತಮುತ್ತಲಂತೂ ಈ ಕೂಗೂ ಭಾರೀ ಜೋರಾಗಿ ಪ್ರತಿಧ್ವನಿಸುತ್ತಿತ್ತು. ದಿನಬೆಳಗಾದರೆ ಸಾಕು ಪರ- ವಿರೋಧಧ ಪ್ರತಿಭಟನೆಗಳು, ಘೋಷಣೆಗಳು ಕೂಗಿ ಕೂಗಿ ಜನ ರೋಸಿ ಹೋದರು. ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರ ನೇತೃತ್ವದಲ್ಲಿ ಎಣಿಕೆ ದಣಿಯುವ ಸಂಖ್ಯೆಲ್ಲಿ ಹೋರಾಟ, ಸಭೆಗಳು ನಡೆದವು. ವರ್ಷದಿಂದ ವರ್ಷಕ್ಕೆ ನ್ಯಾಯ ಸಿಗೋ ಭರವಸೆ ಕುಂಟುತ್ತಲೇ ಹೋಯಿತು. ಆದರೆ ಕೊನೆಗದೂ ಹುಸಿಯಾಗೇ ಬಿಟ್ಟಿತು.

ಇನ್ನು,ಕೊಲೆ ನಡೆದ ಮೂರನೇ ದಿನದ ಬಳಿಕ ಬಂಧಿಸಲಾದ ಕಾರ್ಕಳ (Karkala) ತಾಲ್ಲೂಕಿನ ಕುಕ್ಕುಂದೂರು (Kukkundur) ಗ್ರಾಮದ ನಿವಾಸಿ ಸಂತೋಷ್ ರಾವ್‌ (Santosh rao) ಅವರನ್ನು ಅರೋಪಿಯೆಂದು ಶಂಕಿಸಿ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ನಂತರ ಪ್ರಕರಣವನ್ನು ಸಿಐಡಿಗೆ (CID) ವಹಿಸಲಾಗಿತ್ತು.

ಅಂದ ಹಾಗೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆಯಾದಾಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ಶ್ರೀಮಾನ್ ಡಿವಿ ಸದಾನಂದ ಗೌಡರು. ಯಡಿಯೂರಪ್ಪನವರ ಕೃಪಾಕಟಾಕ್ಷದಿಂದ ಮುಖ್ಯಮಂತ್ರಿ ಆಗಿ ಕೂತಿದ್ದ ಡಿವಿ ಸದಾನಂದ ಗೌಡರು ಮತ್ತು ಅವತ್ತು ಅತ್ಯಾಚಾರವಾಗಿ ಕೊಲೆಯಾಗಿ ಹೋಗಿದ್ದ ಸೌಜನ್ಯ – ಈ ಇಬ್ಬರು ಕೂಡಾ ಘಟನೆ ನಡೆದ ಬೆಳ್ತಂಗಡಿ ತಾಲೂಕು ಮತ್ತು ಇಡೀ ದಕ್ಷಿಣ ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗ ಗೌಡ ಸಮುದಾಯಕ್ಕೆ ಸೇರಿದವರು. ಹಾಗಾಗಿ ತನ್ನ ಸಮುದಾಯದ ಹುಡುಗಿಗೆ ನ್ಯಾಯ ಸಿಗಬಹುದು ಎನ್ನುವ ಆಶಾ ಭಾವನೆ ಸೌಜನ್ಯಾಳ ಪೋಷಕರಲ್ಲಿತ್ತು. ಆದರೆ ಡಿ ವಿ ಸದಾನಂದ ಗೌಡರು ಆ ಆಶಾಭಾವನೆಯನ್ನು ಹೊಸಕಿ ಹುಸಿ ಮಾಡಿದ್ದರು. ಸದಾನಂದ ಗೌಡರು ಘಟನೆ ನಡೆದ ನಂತರ ಒಂದು ಬಾರಿ ತಾಲೂಕಿಗೆ ಬಂದಿದ್ದರು ಕೂಡಾ. ಆಗ ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಬಲ್ಲರು ಎಂಬ ಆಶಾಭಾವನೆ ಅವರಲ್ಲಿ ಇತ್ತು. ಆದರೆ ಅವರ ಅಂದಿನ ಭೇಟಿ ಸೌಜನ್ಯಾಳಿಗೆ ನ್ಯಾಯ ಕೊಡಿಸಲು ಬಂದ ಉದ್ದೇಶವಾಗಿರಲಿಲ್ಲ. ಅದು ಯಾವುದೋ ಲಾಭಕ್ಕೆ ಮತ್ತು ಅನುಸಂಧಾನಕ್ಕೆ ವಿನಾ ಸತ್ತ ಹುಡುಗಿಗೆ ನ್ಯಾಯ ಕೊಡಿಸಲು ಅಲ್ಲ ಅನ್ನುವುದನ್ನು ಇವತ್ತಿಗೂ ಬಹುಸಂಖ್ಯಾತ ಜನರು ನಂಬಿಕೊಂಡಿದ್ದಾರೆ.

ಮುಂದೆ ಚುನಾವಣೆ ನಡೆದು ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ, ಬೆಳ್ತಂಗಡಿಯ ಶಾಸಕರಾಗಿ ಇದ್ದವರು ವಸಂತ ಬಂಗೇರರು. ವಸಂತ ಬಂಗೇರ ಆವತ್ತು ಜನರ ಹೋರಾಟದ ಪರ ನಿಂತಿದ್ದರು. ಅವರ ಒತ್ತಾಸೆಯಿಂದ ಮತ್ತು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಳಜಿಯ ಕಾರಣ ಈ ಘಟನೆಯನ್ನು ಮುಂದೆ ಸಿಬಿಐಗೆ ವಹಿಸಲಾಗಿತ್ತು.

ಈ ನಡುವೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯ ಸೋದರ ಹರ್ಷೇಂದ್ರ ಕುಮಾರ್ (Harshendra kumar) ಅವರ ಪುತ್ರ ನಿಶ್ಚಲ್ ಜೈನ್ (Nishal jain) ಸೇರಿದಂತೆ ಧರ್ಮಸ್ಥಳದ ಧೀರಜ್ ಕೆಲ್ಲ, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ಆರೋಪಿಗಳೆಂಬ ಕೂಗು ಎಲ್ಲೆಡೆ ಮಾರ್ದನಿಸಿತ್ತು. ಸಿಬಿಐ ಕೆಲ್ಲ – ಜೈನ್ ಮೂವರನ್ನು ವಿಚಾರಣೆ ನಡೆಸಿತ್ತು. ಹರ್ಷೇಂದ್ರ ಕುಮಾರ್ ಅವರು ಸಿಬಿಐ ಮುಂದೆ ಹಾಜರಾಗಿ, ಅತ್ಯಾಚಾರ ಮತ್ತು ಕೊಲೆ ನಡೆದಾಗ ಅವರು ದೇಶದಲ್ಲಿ ಇರಲಿಲ್ಲ ಎಂದು ತೋರಿಸಲು ಅಮೆರಿಕದಲ್ಲಿ ತನ್ನ ಮಗನ (ನಿಶ್ಚಲ್ ಜೈನ್) ಪಾಸ್‌ಪೋರ್ಟ್, ವೀಸಾ ಮತ್ತು ಬ್ಯಾಂಕ್ ವಹಿವಾಟು ಸೇರಿದಂತೆ ಹಲವಾರು ದಾಖಲೆಗಳನ್ನು ಹಾಜರುಪಡಿಸಿದ್ದರು ಎನ್ನುವ ಸುದ್ದಿಯೂ ಇತ್ತು. ಹೀಗಾಗಿ ಸಿಐಡಿ ಅಧಿಕಾರಿಗಳು ಸಾಕ್ಷ್ಯಾಧಾರಗಳಲ್ಲಿ ಅರ್ಹತೆ ಕಂಡು ನಿಶ್ಚಲ್‌ಗೆ ಕ್ಲೀನ್ ಚಿಟ್ ನೀಡಿದ್ದರು ಎನ್ನಲಾಗಿತ್ತು.

ಈಗ ಪ್ರಕರಣದ ತೀರ್ಪು ಕೊನೆಗೂ ಪ್ರಕಟವಾಗಿದೆ. ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿ ಸಂತೋಷ್ ರಾವ್‌ನನ್ನು ನಿರ್ದೋಷಿ ಎಂದಿದೆ. ಪೊಲೀಸರು, ಸಿಐಡಿ ಬಳಿಕ ತನಿಖೆ ನಡೆಸಿದ್ದ ಸಿಬಿಐ 2016ರಲ್ಲಿ ವರದಿಯನ್ನು ನೀಡಿದ್ದರೂ, ಸಾಕ್ಷಾಧಾರದ ಕೊರತೆಯಿಂದ ಆರೋಪಿಯನ್ನು ದೋಷ ಮುಕ್ತಗೊಳಿಸಲಾಗಿದೆ. ಈ ತೀರ್ಪು ನಿರೀಕ್ಷಿತವೇ. ಕಾರಣ, ಕಳೆದ ಹತ್ತು ವರ್ಷಗಳಿಂದ ಸೌಜನ್ಯ ಪೋಷಕರು ಅದನ್ನೇ ಹೇಳಿಕೊಂಡು ಬರುತ್ತಿರುವುದು. ‘ ಈಗ ಆರೋಪಿ ಎಂದು ಗುರುತಿಸಿರುವ ಸಂತೋಷ್ ರಾವ್ ನಿಜವಾದ ಆರೋಪಿಯಲ್ಲ. ಅಪರಾಧಿಗಳು ಬೇರೆಯೇ ಇದ್ದಾರೆ’ ಎಂದು ಸೌಜನ್ಯ ಕುಟುಂಬ ಮೊದಲಿನಿಂದಲೂ ಹೇಳಿಕೊಂಡು ಬಂದಿತ್ತು. ಆದರೆ ಅದನ್ನು 10 ವರ್ಷಗಳ ನಂತರ ಒಂದು ಸಿಐಡಿ ತನಿಖೆ, ಇನ್ನೊಂದು ಸಿಬಿಐ ತನಿಖೆ ನಂತರ ಇದೀಗ ಕೋರ್ಟ್ ಹೇಳಿದೆ. ಪಾಪ, ತನ್ನದಲ್ಲದ ತಪ್ಪಿಗೆ ಧರ್ಮಸ್ಥಳದಲ್ಲಿ ಸುಖಾ ಸುಮ್ಮನೆ ತಿರುಗಾಡಿಕೊಂಡಿದ್ದ ತಪ್ಪಿಗೆ ಸಂತೋಷ ರಾವ್ ಹತ್ತು ವರ್ಷಗಳ ಮಟ್ಟಿಗೆ ಜೈಲು ಪಾಲಾಗಬೇಕಾಗಿ ಬಂದದ್ದು ದುರಂತವೇ ಸರಿ. ಎಲ್ಲಾ ಸರಿ, ಸೌಜನ್ಯ ಪೋಷಕರ ಮತ್ತು ಇತರ ಹೋರಾಟಗಾರರು ಊಹಿಸಿದಂತೆ ಸಂತೋಷ್ ರಾವ್ ನಿರಪರಾಧಿ. ಹಾಗಾದ್ರೆ ಆವತ್ತು ಸೌಜನ್ಯಳನ್ನು ಅಂದು ಅತ್ಯಾಚಾರ ಮಾಡಿ ಕೊಂದವರು ಯಾರು ? ಮತ್ತೆ ಘಟನೆ ಗ್ರೌಂಡ್ ಝೀರೋ ಗೆ ಬಂದು ನಿಂತಿದೆ. ಮೊನ್ನೆಗೆ ತನಿಖೆಗೆ ಒಂದು ಅಂತ್ಯ ಬಿದ್ದಿದೆ. ಈ ಅಂತ್ಯ ಅನ್ನೋದು, ಒಂದು ಆರಂಭ ಕೂಡಾ ಹೌದು.

ಹಳೆಯ ಆರೋಪಿ ನಿರಪರಾಧಿ ಎಂದಾದರೆ, ನಿಜವಾದ ಆರೋಪಿ ಯಾರು ? ಇದು ಸೌಜನ್ಯಾ ಪೋಷಕರ ಪ್ರಶ್ನೆ. ಸೌಜನ್ಯಾ ಅಪರಾಧಿಗಳು ಸಿಗದೇ ಹೋದರೆ, ಈ ಹತ್ಯೆಯನ್ನು ಮಾಡಿದ್ದು ಮನುಷ್ಯರಲ್ಲವೇ, ಅಂದರೆ ಇದು ದೇವರು ಮಾಡಿದ ಕೊಲೆಯೇ ?

ನಿನ್ನೆ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರು ಹಳೆಯ ಘಟನೆಗಳನ್ನೆಲ್ಲ ಮೆಲುಕು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ‘ ನಮಗೆ ನಮ್ಮ ಕೋರ್ಟುಗಳಿಂದ ನ್ಯಾಯ ಸಿಗಲ್ಲ. ಇವರಿಗೆ ಧರ್ಮಸ್ಥಳದ ಮಂಜುನಾಥ ಮತ್ತು ಅಣ್ಣಪ್ಪ ದೈವಗಳೇ ಶಿಕ್ಷೆ ನೀಡಬೇಕು. ಈಗಾಗಲೇ ಸದಾನಂದ ಗೌಡ ಇದರ ಬಗ್ಗೆ ಅನುಭವಿಸುತ್ತಾ ಇದ್ದಾರೆ. ಇನ್ನೂ ಹಲವು ಜನ ಇದರ ಬಗ್ಗೆ ಅನುಭವಿಸಲಿಕ್ಕಿದೆ.’ ಎಂದು ವಿಷಾದದಿಂದ ಮಾತು ಮುಗಿಸಿದ್ದಾರೆ. ಈ ನೋವಿನಲ್ಲೂ, ನಿರಪರಾಧಿ ಒಬ್ಬನನ್ನು ಬಿಡಿಸಿ ತಂದ ಬಗ್ಗೆ ಸಾರ್ಥಕತೆಯ ದನಿ ಹೊರಹೊಮ್ಮಿದೆ. ಅಂದು ಸೌಜನ್ಯಾಳ ನಗ್ನ ಭಗ್ನ ದೇಹದ ನೋವುಗಳನ್ನು ಕಂಡಿದ್ದ ನೇತ್ರಾವತಿಯ ಕಪ್ಪು ಕಾಡಿನ ಮಣ್ಣಿನ ಅಸಂಖ್ಯ ಹುಳಗಳು ಸಕುಟುಂಬ ಪರಿವಾರವಾಗಿ ತಾಳ್ಮೆಯಿಂದ ಕಾಯುತ್ತಿವೆ: ಕರ್ಮ ರಿಟರ್ನ್ಸ್ ಎಂಬ ಬಲವಾದ ನಂಬಿಕೆಯೊಂದಿಗೆ !

ಇದನ್ನೂ ಓದಿ: Women death: ಗ್ಯಾಸ್ ಸಿಲಿಂಡರ್ ಸ್ಫೋಟ ; ಅಡುಗೆ ಮಾಡುತ್ತಿದ್ದ ಮಹಿಳೆ ಸಾವು !

Leave A Reply

Your email address will not be published.