EPFO Interest Rate : ಇಪಿಎಫ್‌ಒ ಖಾತೆದಾರರಿಗೆ ಸಿಹಿ ಸುದ್ದಿ! ಭವಿಷ್ಯ ನಿಧಿ ಬಡ್ಡಿದರ ಶೇ.8.15 ನಿಗದಿ!

EPFO Interest Rate: ನೌಕರರ ಭವಿಷ್ಯ ನಿಧಿ (ಇಪಿಎಫ್‌ಒ) ಯು (employees’ provident fund – EPF) ಸದಸ್ಯರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ. ಹೌದು, ಠೇವಣಿಗಳ ಮೇಲೆ 2022-23ನೇ ಸಾಲಿಗೆ ಶೇಕಡಾ 8.15 ರಷ್ಟು ಬಡ್ಡಿದರವನ್ನು ಇಪಿಎಫ್‌ಒ ( EPFO fixed ) ಮಂಗಳವಾರ ತನ್ನ ಸಭೆಯಲ್ಲಿ ನಿಗದಿಪಡಿಸಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ (ಸಿಬಿಟಿ) ಮಂಗಳವಾರ ನಡೆದ ಸಭೆಯಲ್ಲಿ 2022-23ನೇ ಸಾಲಿಗೆ ಇಪಿಎಫ್ಗೆ ಶೇಕಡಾ 8.15 ರಷ್ಟು ಬಡ್ಡಿದರವನ್ನು ನೀಡಲು ನಿರ್ಧರಿಸಿದೆ ಎಂದು ಮೂಲಗಳ ಮೂಲಕ ತಿಳಿದು ಬಂದಿದೆ.

ಈ ಮೊದಲು ಅಂದರೆ ನಿವೃತ್ತಿ ನಿಧಿ ಸಂಸ್ಥೆ 2013-14 ಮತ್ತು 2014-15ರಲ್ಲಿ ಶೇಕಡಾ 8.75 ರಷ್ಟು ಬಡ್ಡಿದರವನ್ನು ನೀಡಿತ್ತು, ಇದು 2012-13 ರ ಶೇಕಡಾ 8.5 ಕ್ಕಿಂತ ಹೆಚ್ಚಾಗಿದೆ. 2011-12ರಲ್ಲಿ ಬಡ್ಡಿದರ ಶೇ.8.25ರಷ್ಟಿತ್ತು.

ಇಪಿಎಫ್‌ಒ ತನ್ನ ಚಂದಾದಾರರಿಗೆ 2016-17ರಲ್ಲಿ ಶೇಕಡಾ 8.65 ಮತ್ತು 2017-18 ರಲ್ಲಿ ಶೇಕಡಾ 8.55 ರಷ್ಟು ಬಡ್ಡಿದರವನ್ನು ನೀಡಿತ್ತು. 2015-16ರಲ್ಲಿ ಬಡ್ಡಿ ದರ ಶೇ.8.8ರಷ್ಟಿತ್ತು.

ಮಾರ್ಚ್ 2020 ರಲ್ಲಿ, ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು (EPFO Interest Rate) 2019-20ರಲ್ಲಿ ಏಳು ವರ್ಷಗಳ ಕನಿಷ್ಠ ಶೇಕಡಾ 8.5 ಕ್ಕೆ ಇಳಿಸಿತ್ತು.

ಇನ್ನು ಮಾರ್ಚ್ 2022 ರಲ್ಲಿ, ಇಪಿಎಫ್‌ಒ ತನ್ನ ಐದು ಕೋಟಿ ಚಂದಾದಾರರಿಗೆ 2021-22 ರ ಇಪಿಎಫ್ ಮೇಲಿನ ಬಡ್ಡಿಯನ್ನು ನಾಲ್ಕು ದಶಕಗಳ ಕನಿಷ್ಠ ಶೇಕಡಾ 8.1 ಕ್ಕೆ ಇಳಿಸಿತ್ತು. ಅದಲ್ಲದೆ 1977-78ರಲ್ಲಿ ಇಪಿಎಫ್ ಬಡ್ಡಿದರವು ಶೇಕಡಾ 8 ರಷ್ಟಿತ್ತು.

ಸದ್ಯ 2020-21ರ ಇಪಿಎಫ್ ಠೇವಣಿಗಳ ಮೇಲಿನ ಶೇಕಡಾ 8.5 ರಷ್ಟು ಬಡ್ಡಿದರವನ್ನು ಮಾರ್ಚ್ 2021 ರಲ್ಲಿ ಸಿಬಿಟಿ ನಿರ್ಧರಿಸಿತು.

ಇದೀಗ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ ನಿರ್ಧಾರದ ನಂತರ, 2022-23ರ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಹಣಕಾಸು ಸಚಿವಾಲಯಕ್ಕೆ ಒಪ್ಪಿಗೆಗಾಗಿ ಕಳುಹಿಸಲಾಗುವುದು. ನಂತರ ಸರ್ಕಾರದ ಅನುಮೋದನೆಯ ನಂತರ, 2022-23ರ ಇಪಿಎಫ್ ಮೇಲಿನ ಬಡ್ಡಿದರವನ್ನು ಇಪಿಎಫ್‌ಒನ ಐದು ಕೋಟಿ ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.

ಆದರೆ ಹಣಕಾಸು ಸಚಿವಾಲಯದ ಮೂಲಕ ಸರ್ಕಾರವು ಅನುಮೋದಿಸಿದ ನಂತರವೇ ಇಪಿಎಫ್‌ಒ ಬಡ್ಡಿದರವನ್ನು ಒದಗಿಸುತ್ತದೆ ಎಂಬ ಮಾಹಿತಿ ಇದೆ.

Leave A Reply

Your email address will not be published.