ದೋಸೆ ಇರುವ 16 ಪ್ಲೇಟ್ ಗಳನ್ನು ಒಂದರ ಮೇಲೊಂದು ಇಟ್ಟು ಸರ್ವ್ ಮಾಡಿದ ಬೆಂಗಳೂರಿನ ಹೋಟೆಲ್ ಮಾಣಿ : ‘ ವೈಟರ್ ಪ್ರೊಡಕ್ಟಿವಿಟಿಗೆ ‘ ಒಲಂಪಿಕ್ಸ್ ನಲ್ಲಿ ಈತ ಚಿನ್ನ ಗೆಲ್ಲುತ್ತಾನೆ ಎಂದ ಆನಂದ್ ಮಹೀಂದ್ರಾ !

Share the Article

ಹೊಟೇಲುಗಳಲ್ಲಿ ಆಹಾರ ಸಪ್ಲೈ ಮಾಡುವ ಮಾಣಿಯಾಗಿ ಕೆಲಸ ಮಾಡಲು ಹೆಚ್ಚಿನ ಕೌಶಲ್ಯಗಳ ಅಗತ್ಯವಿರುವುದಿಲ್ಲ ಎಂದು ಯಾರಾದರೂ ಭಾವಿಸಿದ್ದರೆ ನಿಮ್ಮ ಅಭಿಪ್ರಾಯಗಳನ್ನು ಮನಸ್ಸಿನಿಂದ ಮಡಚಿ ಹಾಕಿ. ಕಾರಣ, ಈಗ ಭಾರತದ ಹೆಮ್ಮೆಯ ಉದ್ಯಮಿ ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ಈ ವೀಡಿಯೊ ಹೋಟೆಲ್ ಸಪ್ಲಾಯರ್ ಗಳೆಡೆಗೆ ಇರುವ ನಿಮ್ಮ ಅಭಿಪ್ರಾಯವನ್ನು ಬದಲಿಸುತ್ತದೆ.

ಇಲ್ಲಿ ನಾವು ತೋರಿಸುವ ವಿಡಿಯೋದಲ್ಲಿ ಮಸಾಲೆ ದೋಸೆ ಸಪ್ಲೈ ಮಾಡುವ ಮಾಣಿಯೊಬ್ಬರು ಅಡುಗೆಮನೆಯಿಂದ ಹೊರಡುವಾಗ ಮಸಾಲದೋಸೆಗಳ ಬೃಹತ್ ಗೋಪುರ ಕಟ್ಟಿಕೊಂಡು ಹೊರಡುತ್ತಾರೆ. ಹೀಗೆ, ದೊಡ್ಡ ಕಾವಲಿಯಿಂದ ಗರಿಗರಿಯಾಗಿ ಎದ್ದ ಒಂದೊಂದೇ ದೋಸೆಗಳು ಈ ಮಾಣಿ ನೀಡುವ ಪ್ಲೇಟ್ನಲ್ಲಿ ಬಂದು ಬೀಳುತ್ತವೆ. ಪ್ರತಿ ದೋಸೆ ಭರಿತ ಪ್ಲೇಟನ್ನೂ ಈ ಅನುಭವಿ ಮಾಣಿ ಒಂದೊಂದಾಗಿ ಎಡಗೈಯಲ್ಲಿ ಒಟ್ಟುತ್ತಾರೆ. ಒಂದರ ಮೇಲೆ ಮತ್ತೊಂದು, ಮತ್ತೊಂದರ ಮೈಮೇಲೆ ಮಗದೊಂದು, ಅದರ ಮೇಲೆ ಇನ್ನೊಂದು, ಇದರ ಮೇಲೆ ಹನ್ನೊಂದು – ಲೆಕ್ಕ ಇಲ್ಲಿಗೆ ಮುಗಿಯುವುದಿಲ್ಲ. ಒಟ್ಟು 16 ದೋಸೆಗಳ ಪ್ಲೇಟನ್ನು ಒಂದೇ ಕೈಗೆ ಭಾರ ಹಾಕಿ ಹಿಡಿದು, ದೋಸೆ ತಟ್ಟೆಗಳ ಎತ್ತರದ ಗೋಪುರವನ್ನೇ ಒಯ್ಯುತ್ತಿರುವ ವಿಡಿಯೋ ಒಂದು ಉದ್ಯಮಿ ಆನಂದ್ ಮಹೀಂದ್ರಾ ಅವರ ಗಮನಕ್ಕೆ ಬಂದಿದೆ. ಅದನ್ನು ಅವರು ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ. ಈಗ ಹೋಟೆಲ್ ಮಾಣಿ ಕರ್ನಾಟಕದ ಬಿಸಿ-ಗರಿ ದೋಸೆಯ ಜತೆಗೆ ಜಗತ್ – ಫೇಮಸ್ ಆಗಿದ್ದಾರೆ.

ಹೋಟೆಲ್ ಮಾಣಿ ದೋಸೆಗಳನ್ನು ಗೋಪುರ ಕಟ್ಟುವುದರಲ್ಲಿ ಮತ್ತು ಸರ್ವ್ ಮಾಡುವುದರಲ್ಲಿ ಮಾತ್ರ ಎಕ್ಸ್ ಪರ್ಟ್ ಅಲ್ಲ. ವಿವಿಧ ರೀತಿಯ ದೋಸೆಗಳನ್ನು ಆಯಾ ಟೇಬಲ್‌ಗಳಿಗೆ ಯಾರು ಏನು ಆರ್ಡರ್ ಮಾಡಿದ್ದಾರೆ ಎಂಬುದನ್ನು ನೆನಪಿಸಿ ಸರ್ವ್ ಮಾಡೋದರಲ್ಲಿ ಕೂಡಾ ನಿಷ್ಣಾತ.
ಈ ವೀಡಿಯೊವನ್ನು ಹಂಚಿಕೊಳ್ಳುವಾಗ, “ನಾವು ‘ ವೇಟರ್ ಪ್ರೊಡಕ್ಟಿವಿಟಿ ‘ ಅನ್ನು ಒಲಿಂಪಿಕ್ ಕ್ರೀಡೆಯಾಗಿ ಗುರುತಿಸಬೇಕಾಗಿದೆ. ಈ ಜಂಟಲ್ ಮ್ಯಾನ್ ಒಲಿಂಪಿಕ್ ಸ್ಪರ್ಧೆಯಲ್ಲಿ ಚಿನ್ನಕ್ಕಾಗಿ ಸ್ಪರ್ಧಿಯಾಗುತ್ತಾರೆ ” ಎಂದು ಆನಂದ್ ಮಹೀಂದ್ರಾ ಕಾಮೆಂಟ್ ಬರೆದಿದ್ದಾರೆ.

ಮಾಣಿಯ ಪ್ರಯತ್ನಗಳನ್ನು ಟ್ವಿಟ್ಟರ್ ಬಳಕೆದಾರರು ಶ್ಲಾಘಿಸುತ್ತಾ, “ತಟ್ಟೆಗಳನ್ನು ಸಮತೋಲನಕ್ಕಾಗಿ ಮತ್ತು ಅವನ ಕೈಗಳು ಸುಡುವುದನ್ನು ತಡೆಯಲು ಹೇಗೆ ಎಚ್ಚರಿಕೆಯಿಂದ ಇರಿಸಲಾಗುತ್ತದೆ ಎಂಬುದರ ಕುರಿತು ಭೌತಶಾಸ್ತ್ರ ಮತ್ತು ಥರ್ಮೋಡೈನಾಮಿಕ್ಸ್ ಬಗ್ಗೆ ಅವರಿಗೆ ಉತ್ತಮ ತಿಳುವಳಿಕೆ ಇದೆ ಎಂದಿದ್ದಾರೆ “. ಈ ಹೋಟೆಲ್ ಮಾಣಿಯ ಅತ್ಯುತ್ತಮ ಬ್ಯಾಲೆನ್ಸಿಂಗ್ ಆಕ್ಟ್‌ನ ಈ ವೀಡಿಯೊವನ್ನು ಬೆಂಗಳೂರಿನ ಪ್ರಸಿದ್ಧ ರೆಸ್ಟೋರೆಂಟ್ ‘ ವಿದ್ಯಾರ್ಥಿ ಭವನ’ ದಲ್ಲಿ ತೆಗೆದುಕೊಳ್ಳಲಾಗಿದೆ. 1943 ರಲ್ಲಿ ವಿದ್ಯಾರ್ಥಿಗಳ ಆಹಾರದ ಅಗತ್ಯಗಳನ್ನು ಪೂರೈಸುವ ಸಣ್ಣ ಉಪಾಹಾರ ಗೃಹವಾಗಿ ಪ್ರಾರಂಭವಾದ ಹೋಟೆಲ್ ಇದೀಗ ತನ್ನ ರುಚಿ, ಕಲಾಗಾರಿಕೆ ಮತ್ತು ತಕ್ಕುದಾದ ಬೆಲೆಯ ಕಾರಣಕ್ಕೆ ಭಾರೀ ಖ್ಯಾತಿ ಪಡೆದುಕೊಂಡಿದೆ.

ವಿದ್ಯಾರ್ಥಿ ಭವನದ ಅಧಿಕೃತ ಟ್ವಿಟ್ಟರ್ ಖಾತೆಯು ಮಹೀಂದ್ರಾ ಅವರ ಟ್ವೀಟ್‌ಗೆ ಕಾಮೆಂಟ್ ಮಾಡಿದ್ದು, “ನಮ್ಮ ಮಾಣಿ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿ ಆನಂದ್ ಮಹೀಂದ್ರಾ ಸರ್ ಗೆ ಧನ್ಯವಾದಗಳು. ನಮ್ಮ ರೆಸ್ಟೊರೆಂಟ್‌ನಲ್ಲಿರುವ ಎಲ್ಲಾ ವೇಟರ್‌ಗಳು ಇದಕ್ಕಾಗಿ ತರಬೇತಿ ಪಡೆದಿದ್ದಾರೆ. ಸಿದ್ಧಪಡಿಸಿದ ಡೋಸೇಗಳ ಸಂಪೂರ್ಣ ಬ್ಯಾಚ್ಅನ್ನು ಅವರು ಏಕಕಾಲದಲ್ಲಿ ತನ್ನ ಸೇವೆಯ ಮೇಜಿನ ಬಳಿ ಗ್ರಾಹಕರಿಗೆ ಸಾಗಿಸುತ್ತಾರೆ. ನಿಮ್ಮನ್ನು ನಮ್ಮ ಹೋಟೆಲ್ ಗೆ ಆಹ್ವಾನಿಸಲು ಈ ಅವಕಾಶವನ್ನು ಬಳಸಿಕೊಳ್ಳಲು ಬಯಸುತ್ತೇವೆ ” ಎಂದಿದೆ ದೋಸಾ ಟವರ್ ವಿದ್ಯಾರ್ಥಿ ಭವನದ ಟ್ವಿಟ್ಟರ್.

Leave A Reply