ಪಂದ್ಯದ ನಡುವೆ ಹೀಯಾಳಿಸಿದ ಪ್ರೇಕ್ಷಕ | ಕೋಪಗೊಂಡ ಪಾಕ್‌ ವೇಗಿ ಮಾಡಿದ್ದೇನು ? ಅಬ್ಬಾ…ವೀಡಿಯೋ ವೈರಲ್‌

ನಮ್ಮ ನೆಚ್ಚಿನ ಯಾವುದೇ ಕಾರ್ಯದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಾಗ ಯಾರಾದರೂ ಹೀಯಾಳಿಸಿ ಅವಮಾನ ಗೈದರೆ ಕೋಪ ಬರುವುದು ಸಹಜ. ಆದರೆ, ಕೋಪ ಕೆಲವೊಮ್ಮೆ ತಾರಕಕ್ಕೇರಿದರೆ ಎಲ್ಲರ ಮುಂದೆ ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ.

ಕೋಪದಲ್ಲಿ ಕುಯ್ದ ಮೂಗು ಮತ್ತೆ ಅದೇ ರೀತಿ ಜೋಡಿಸುವುದು ಸುಲಭದ ಮಾತಲ್ಲ. ಅದೇ ರೀತಿ ಕೋಪದ ಕೈಗೆ ಬುದ್ದಿ ಕೊಟ್ಟು ಅವಾಂತರ ಮಾಡಿಕೊಳ್ಳುವುದು ಸಹಜ. ಇದೇ ರೀತಿ, ನವದೆಹಲಿ ಪಂದ್ಯದ ನಡುವೆ ಪ್ರೇಕ್ಷಕರು ಹೀಯಾಳಿಸಿ ಅವಮಾನ ಗೈದರೆಂಬ ಕಾರಣಕ್ಕೆ ಪಾಕ್‌ ವೇಗಿಯೊಬ್ಬ ರೊಚ್ಚಿಗೆದ್ದು ಹಲ್ಲೆ ಮಾಡಲು ಹೋಗಿರುವ ಘಟನೆ ಮುನ್ನಲೆಗೆ ಬಂದಿದೆ.

ಕಳೆದ ಕೆಲ ಸಮಯದಿಂದ ಪಾಕ್‌ ತಂಡದಲ್ಲಿ ಹಸನ್‌ ಅಲಿ ಕ್ರಿಕೆಟ್ ಆಡುವ ಅವಕಾಶವನ್ನು ಕಳೆದುಕೊಂಡಿದ್ದು, ಏಕದಿನ, ಟೆಸ್ಟ್‌, ಟಿ-20 ಮೂರು ಮಾದರಿಯಿಂದಲೂ ಅವರನ್ನು ಹೊರಗಿಡಲಾಗಿದೆ.

ಈ ನಡುವೆ 28 ವರ್ಷದ ಹಸನ್‌ ಅಲಿ ಕ್ಲಬ್‌ ಮ್ಯಾಚ್‌ ವೊಂದರಲ್ಲಿ ಆರಿಫ್ವಾಲಾ ತಂಡದಲ್ಲಿ ಆಡುತ್ತಿದ್ದರು ಎನ್ನಲಾಗಿದ್ದು, ಫೀಲ್ಡಿಂಗ್‌ ಮಾಡಲು ನಿಂತಿದ್ದ ವೇಳೆ ಪ್ರೇಕ್ಷಕನೊಬ್ಬ ಹಸನ್‌ ಅಲಿಯನ್ನು ತಮಾಷೆ ಮಾಡಿ ಹಂಗಿಸಿ ಮಾತನಾಡಿದ್ದಾನೆ ಎನ್ನಲಾಗಿದೆ.

ಈ ಹಿಂದೆ 2021ರ ಟಿ-20 ವಿಶ್ವಕಪ್‌ ನ ಸೆಮಿ‌ ಫೈನಲ್ ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ವೇಡ್‌ ಅವರ ಕ್ಯಾಚ್‌ ಬಿಟ್ಟ ಹಸನ್‌ ಅಲಿ ಅವರ ಕಳಪೆ ಫೀಲ್ಡಿಂಗ್‌ ಬಗ್ಗೆ ಹೇಳಿ, ಕೆಟ್ಟದಾಗಿ ನಿಂದಿಸಿ ಅವಮಾನ ಮಾಡಿದ ಹಿನ್ನೆಲೆ ಕೋಪಗೊಂಡ ಹಸನ್‌ ಅಲಿ ಸ್ಟೇಡಿಯಂನಲ್ಲಿದ್ದ ಆ ಪ್ರೇಕ್ಷಕನ ಮಾತಿಗೆ ಕೆರಳಿ ಹಲ್ಲೆ ಮಾಡಲು ಮುಂದಾಗಿದ್ದಾರೆ.

ಕೋಪದಲ್ಲಿ ಹಲ್ಲೆ ಮಾಡಲು ಮುಂದಾದ ಹಸನ್‌ ಅಲಿ ಯವರನ್ನು ತಕ್ಷಣ ಅಲ್ಲಿದ್ದ ಸಿಬ್ಬಂದಿಗಳು ಹಾಗೂ ತಂಡದ ಸದಸ್ಯರು ತಡೆದಿದ್ದಾರೆ. ಹಸನ್‌ ಅಲಿ ಕೋಪದ ಕೈಗೆ ಬುದ್ದಿ ಕೊಟ್ಟು ಆವೇಶಕ್ಕೆ ಒಳಗಾದ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್‌ ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಸದ್ಯ ವೈರಲ್‌ ಆಗಿ ಸಂಚಲನ ಮೂಡಿಸಿದೆ.

Leave A Reply

Your email address will not be published.