ಬೆಳ್ತಂಗಡಿ : ಕಕ್ಕಿಂಜೆಯ ಆ್ಯಂಬುಲೆನ್ಸ್ ಪಲ್ಟಿ ಪ್ರಕರಣ | ಘಟನೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ಬೆಳ್ತಂಗಡಿ: ಕಕ್ಕಿಂಜೆ ಆಸ್ಪತ್ರೆಯ ಆ್ಯಂಬುಲೆನ್ಸ್ ಬೆಳ್ತಂಗಡಿಯ ಸೇತುವೆ ಬಳಿ ಪಲ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಲವು ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕಕ್ಕಿಂಜೆಯ ಸೈಂಟ್ ಜೋಸೆಫ್ ಆಸ್ಪತ್ರೆಯ ಆಂಬುಲೆನ್ಸ್ ಡಿ. 4 ರಂದು ರಾತ್ರಿ 8 ಗಂಟೆಯ ಹೊತ್ತಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಕಕ್ಕಿಂಜೆಯ ರೋಗಿಯೊಬ್ಬರನ್ನು ಕರೆತರಲು ಹೊರಟಿದ್ದು, ಆ ವೇಳೆ ಮಂಗಳೂರಿನಿಂದ, ಬರುವುದು ಬೇಡ ಎಂದು ಕರೆ ಬಂದಿದೆ. ನಂತರ ಮಾರ್ಗಮಧ್ಯದಿಂದ ಆ್ಯಂಬುಲೆನ್ಸ್ ಚಾಲಕ ವಾಹನ ತಿರುಗಿಸಿ ಕಕ್ಕಿಂಜೆ ಕಡೆ ತೆರಳುವ ವೇಳೆ ಬೆಳ್ತಂಗಡಿ ಸೇತುವೆಯಲ್ಲಿ ಆ್ಯಂಬುಲೆನ್ಸ್ ಪಲ್ಟಿಯಾದ ಘಟನೆ ನಡೆದಿದೆ.

ಆದರೆ ಈ ಘಟನೆಯಲ್ಲಿ ಕೆಲವು ಮಾಹಿತಿಗಳು ಬಯಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅದೇನೆಂದರೆ, ಆಂಬುಲೆನ್ಸ್ ನಲ್ಲಿ ಆಸ್ಪತ್ರೆಯ ಚಾಲಕ ಇರಲಿಲ್ಲ, ಬದಲಾಗಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ಹುಸೈರ್ (23) ವಾಹನ ಚಲಾಯಿಸಿದ್ದ. ಮಂಗಳೂರಿಗೆ ತೆರಳುವಾಗ ಡಾಕ್ಟರ್ ನಿತೀನ್ ವಾಹನ ಚಲಾಯಿಸಿದ್ದರು. ಹಿಂತಿರುಗುವಾಗ ಹುಸೈರ್ ಚಾಲಕನಾಗಿದ್ದ ಎನ್ನಲಾಗಿದೆ.

ಇನ್ನೂ ಸೈಂಟ್ ಜೋಸೆಫ್ ಆಸ್ಪತ್ರೆಯ ಡಾಕ್ಟರ್ ನಿತೀನ್ ಮಡಂತ್ಯಾರ್ ಟೋನಿ ಬಾರ್ & ರೆಸ್ಟೋರೆಂಟ್ ನಿಂದ ಬಿಯರ್ ಪಾರ್ಸೆಲ್ ತಂದಿದ್ದಾಗಿಯೂ ಹಾಗೂ ಬಿಯರ್ ಕುಡಿದುಕೊಂಡೇ ವಾಹನ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಡಾಕ್ಟರ್ ನಿತೀನ್ ತಂದಿದ್ದ ಬಿಯರ್ ಪೂರ್ತಿ ಖಾಲಿ ಮಾಡಿದ್ದು, ಇನ್ನೂ ಸಾಲದೆ ಇದ್ದಾಗ ಬೆಳ್ತಂಗಡಿಯಲ್ಲಿನ ಶ್ವೇತಾ ವೈನ್ಸ್ ಗೆ ಹೋಗಿ ಒಂದು ಬಿಯರ್ (ಪಿಂಟ್) ಖರೀದಿಸಿಕೊಂಡು ಬಂದಿದ್ದು, ಅದಾಗಲೇ ಸಾಕಷ್ಟು ಕುಡಿದಿದ್ದರಿಂದ ಡಾಕ್ಟರ್ ಗೆ ಕುಡಿದ ನಶೆ ತಲೆ ಏರಿತು, ಹಾಗಾಗಿ ಹುಸೈರ್ ಆಂಬುಲೆನ್ಸ್ ಚಲಾಯಿಸಿದ್ದಾರೆ. ಈ ವೇಳೆ ಡಾಕ್ಟರ್ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತು ಇನ್ನೂ ಕುಡಿಯುತ್ತಿದ್ದರು ಎಂದು ವರದಿಯಾಗಿದೆ.

ವಾಹನ ಅತಿ ವೇಗದಲ್ಲಿ ಚಲಿಸುತ್ತಿತ್ತು. ಅದಾಗಲೇ ಬೆಳ್ತಂಗಡಿಯ ಸೇತುವೆ ಬಳಿ ತಲುಪಿತ್ತು. ಈ ವೇಳೆ ಡಾಕ್ಟರ್ ನಿತೀನ್ ಕುಡಿದ ಮತ್ತಿನಲ್ಲಿ ಹ್ಯಾಂಡ್ ಬ್ರೇಕ್ ಮೇಲೆನೆ ಕುಳಿತು ಚಾಲಕ ಹುಸೈನ್ ಕೈ ಯನ್ನು ಹಿಡಿದು ಎಳೆದಾಡಿದ್ದಾರೆ. ಆತನ ಎಳೆದಾಟಕ್ಕೆ ಚಾಲಕನಿಗೆ ನಿಯಂತ್ರಣ ತಪ್ಪಿ ಆಂಬುಲೆನ್ಸ್ ಸೇತುವೆ ಬದಿಯ ಕಂದಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಈ ವೇಳೆ ಆಂಬುಲೆನ್ಸ್ ನಲ್ಲಿ ನಾಲ್ಕು ಬಿಯರ್ ಬಾಟಲ್ಗಳು ಪತ್ತೆಯಾಗಿತ್ತು. ಈ ವಿಚಾರ ಬಹಿರಂಗವಾಗುತ್ತದೆ ಎಂದು ಗಾಯಗೊಂಡವರಿಂದ ಮಾಹಿತಿ ಪಡೆದ ಓರ್ವ ವ್ಯಕ್ತಿ ಬಂದು ಅದನ್ನು ಹೊರತೆಗೆದು ಬಿಸಾಕಿದ್ದಾನೆ ಎಂದು ಘಟನೆ ನಡೆದ ಸ್ಥಳದಲ್ಲಿದ್ದ ವೀಕ್ಷಕರು ತಿಳಿಸಿದ್ದಾರೆ.

ಕಕ್ಕಿಂಜೆಯ ಈ ಆಸ್ಪತ್ರೆ ಮೊದಲು ಕುಮೇಂದ್ರ ಆಯುರ್ವೇದಿಕ್ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತಿತ್ತು. ಕೆಲ ಸಮಯದ ನಂತರ ಈ ಆಸ್ಪತ್ರೆ ಬಂದ್ ಆಗಿತ್ತು. ಹಾಗಾಗಿ ಇದನ್ನು ಸೈಂಟ್ ಜೋಸೆಫ್ ಚಾರಿಟೇಬಲ್ ಟ್ರಸ್ಟ್ ಪಡೆದುಕೊಂಡು ಆಯುರ್ವೆದಿಕ್ ಲೈಸೆನ್ಸ್ ಪತ್ರದಲ್ಲಿ ಇಂಗ್ಲೀಷ್ ಮೆಡಿಸಿನ್ ಹೆಸರು ನಮೂದಿಸಿ ಆರಂಭಿಸಲು ತಯಾರಿ ಆಗಿತ್ತು. ಇದನ್ನು ತಿಳಿದ ಸ್ಥಳೀಯರು ಬೆಳ್ತಂಗಡಿ ತಾಲೂಕು ಆರೋಗ್ಯ ಅಧಿಕಾರಿಗೆ ದೂರು ನೀಡಿದ್ದರು. ಹಾಗಾಗಿ ಹೊಸ ಇಂಗ್ಲೀಷ್ ಮೆಡಿಸಿನ್ ಲೈಸೆನ್ಸ್ ಪಡೆದು ಕಳೆದ ಒಂದು ವರ್ಷದಿಂದ ಆಸ್ಪತ್ರೆ ಆರಂಭವಾಯಿತು. ಆಂಬುಲೆನ್ಸ್ ಅನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Leave A Reply

Your email address will not be published.