New Bank Locker Rules : ಆರ್‌ಬಿಐ ನಿಂದ ಮಹತ್ವದ ಮಾಹಿತಿ | ಬದಲಾಗಲಿದೆ ಬ್ಯಾಂಕ್‌ ಲಾಕರ್‌ ರೂಲ್ಸ್‌

ಬ್ಯಾಂಕ್ ಲಾಕರ್‌ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಆರ್ ಬಿ ಐ (Reserve Bank of India) ಮಹತ್ವದ ಬದಲಾವಣೆಯನ್ನು ಮಾಡಿದೆ. ಈ ಮೊದಲು ಬ್ಯಾಂಕ್ ಲಾಕರ್ ನಲ್ಲಿ ಇರಿಸಿದ್ದ ಗ್ರಾಹಕರ ಮೌಲ್ಯಯುತ ವಸ್ತುಗಳು ಕಳೆದುಹೋದಾಗ ಬ್ಯಾಂಕ್‌ ನಿಂದ ಸರಿಯಾಗಿ ಸ್ಪಂದನೆ ಮತ್ತು ಪರಿಹಾರ ಸಿಗದಿರುವ ದೂರನ್ನು ಆರ್ ಬಿಐ ಪರಿಗಣಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ಬದಲಾದ ನಿಯಮದಿಂದ ಲಾಕರ್‌ಗಳಲ್ಲಿ ಇಟ್ಟಿರುವ ವಸ್ತುಗಳು ಅಥವಾ ದಾಖಲೆಗಳು ಕಳೆದು ಹೋದರೆ ಬ್ಯಾಂಕ್‌ಗಳು ಗ್ರಾಹಕರಿಗೆ ಭಾರಿ ಮೊತ್ತದ ಪರಿಹಾರವನ್ನು ನೀಡಬೇಕಾಗುತ್ತದೆ. ಇದರಿಂದ ಬ್ಯಾಂಕ್ ಲಾಕರ್ ನಲ್ಲಿ ಮೌಲ್ಯಯುತ ವಸ್ತುಗಳನ್ನು ಇಡುವ ಗ್ರಾಹಕರಿಗೆ ಸಹಾಯವಾಗಲಿದೆ. ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಲಾಕರ್ ನಿಯಮಗಳಲ್ಲಿ ಬದಲಾವಣೆ ಮಾಡಿರುವುದಾಗಿ ಆರ್‌ಬಿಐ ತಿಳಿಸಿದೆ.

ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುವ ಮೌಲ್ಯಯುತ ವಸ್ತುಗಳು ಕಳೆದು ಹೋದರೆ ಅಂಥ ಗ್ರಾಹಕರಿಗೆ ಸಂಬಂಧಪಟ್ಟ ಬ್ಯಾಂಕ್ ಲಾಕರ್ ಬಾಡಿಗೆ ಶುಲ್ಕದ 100 ಪಟ್ಟು ಪರಿಹಾರ ನೀಡಬೇಕು ಎಂದು ಪರಿಷ್ಕೃತ ನಿಯಮದಲ್ಲಿ ಹೇಳಲಾಗಿದೆ. ಬ್ಯಾಂಕ್ ಲಾಕರ್ ತೆರೆದ ಬಗ್ಗೆ ಗ್ರಾಹಕರಿಗೆ ಇ-ಮೇಲ್, ಎಸ್ಎಂಎಸ್ ಗಳ ಮೂಲಕ ಸಂದೇಶವನ್ನು ರವಾನೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಹಾಗೂ ಲಾಕರ್ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಬೇಕು ಎಂದು ಪರಿಷ್ಕೃತ ನಿಯಮದಲ್ಲಿ ತಿಳಿಸಲಾಗಿದೆ. ಗ್ರಾಹಕರ ಮೌಲ್ಯಯುತ ವಸ್ತುಗಳು ಕಳೆದುಹೋಗದಂತೆ ನೋಡಿಕೊಳ್ಳಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಖಾಲಿ ಲಾಕರ್ ಗಳು, ವೈಟಿಂಗ್ ಲಿಸ್ಟ್‌ನಲ್ಲಿರುವ ಲಾಕರ್‌ಗಳ ಮಾಹಿತಿಯನ್ನು ಬ್ಯಾಂಕ್‌ಗಳು ಪ್ರಕಟಿಸಬೇಕು. ಬ್ಯಾಂಕ್ ನಿಂದ ಲಾಕರ್ ನ ಬಗ್ಗೆ ಗ್ರಾಹಕರಿಗೆ ಸರಿಯಾದ ವಿವರ ದೊರೆಯಬೇಕು ಎಂದು ಆರ್‌ಬಿಐ ಹೇಳಿದೆ.

ಅಲ್ಲದೆ, ಬ್ಯಾಂಕ್‌ಗಳು ಲಾಕರ್ ಸೇವೆಗಾಗಿ ಗ್ರಾಹಕರ ಮೇಲೆ ಭಾರಿ ಮೊತ್ತದ ಶುಲ್ಕ ವಿಧಿಸುವಂತಿಲ್ಲ ಎಂದು ನೂತನ ನಿಯಮದಲ್ಲಿ ಹೇಳಲಾಗಿದೆ. ಅಂದರೆ ಲಾಕರ್ ಬಾಡಿಗೆ 2,000 ರೂ. ಎಂದಿಟ್ಟುಕೊಂಡರೆ ನಿರ್ವಹಣಾ ಶುಲ್ಕ ಎಂದು 6,000 ರೂ.ಗಿಂತ ಹೆಚ್ಚು ವಿಧಿಸುವಂತಿಲ್ಲ. ಹಾಗೂ ಲಾಕರ್ ಕೊಠಡಿಗೆ ಭೇಟಿ ನೀಡುವ, ಅಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳ ಮತ್ತು ಅಲ್ಲಿನ ಪ್ರತಿಯೊಂದು ಚಟುವಟಿಕೆಗಳ ಮೇಲೆ ಸಿಸಿಟಿವಿ ಕ್ಯಾಮೆರಾ ಮೂಲಕ ನಿಗಾ ಇರಿಸಬೇಕು ಎಂದು ಬದಲಾದ ನಿಯಮದಲ್ಲಿ ಉಲ್ಲೇಖಿಸಲಾಗಿದೆ.

Leave A Reply

Your email address will not be published.