ದಕ್ಷಿಣ ಕನ್ನಡ : ಡಿಸೆಂಬರ್ 1ರಿಂದ ಆಟೋ ದರ ಪರಿಷ್ಕರಣೆ | ಸಾರ್ವಜನಿಕರ ಜೇಬಿಗೆ ಬೀಳಲಿದೆಯೇ ಕತ್ತರಿ?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡಿಸೆಂಬರ್ 1ರಿಂದ ಆಟೋ ಪ್ರಯಾಣದ ದರವನ್ನು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಪರಿಷ್ಕರಿಸಿದೆ.

1.5 ಕಿ.ಮೀ. ವ್ಯಾಪ್ತಿಗೆ ಕನಿಷ್ಠ ದರ 35 ರೂ. (ಗರಿಷ್ಠ ಮೂವರು ಪ್ರಯಾಣಿಕರು), ಅನಂತರ ಪ್ರತೀ ಕಿ.ಮೀ.ಗೆ 20 ರೂ. ನಿಗದಿಪಡಿಸಲಾಗಿದೆ. ಕಾಯುವಿಕೆ ಮೊದಲ 15 ನಿಮಿಷ ಉಚಿತ. ಅನಂತರ 15 ನಿಮಿಷದ ವರೆಗೆ 5 ರೂ. ಇರಲಿದೆ. ಪ್ರಯಾಣಿಕರ ಸರಕಿಗೆ (ಲಗೇಜ್‌) ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜತೆಗೆ ಇರಬೇಕು. ಮೊದಲ 20 ಕೆಜಿಗೆ ಉಚಿತ ಮತ್ತು ಅನಂತರ ಪ್ರತೀ 10 ಕೆಜಿಗೆ 5 ರೂ. ಹೆಚ್ಚುವರಿ ನೀಡಬೇಕಾಗಿದೆ. ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ಮಾತ್ರ ಈ ಮೇಲಿನ ದರದ ಒಂದೂವರೆ ಪಟ್ಟು ಪಡೆಯಲು ಅವಕಾಶ ಇದೆ.

ಆಟೋ ರಿಕ್ಷಾಗಳ ಪ್ರಯಾಣ ದರವನ್ನು ನ. 15ರಿಂದ ಅನ್ವಯವಾಗುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಪರಿಷ್ಕರಿಸಿ ಕೆಲ ದಿನಗಳ ಹಿಂದೆ ಆದೇಶಿಸಿತ್ತು. ಆ ವೇಳೆ 1.5 ಕಿ.ಮೀ. ವ್ಯಾಪ್ತಿಗೆ 35 ರೂ. ಬಳಿಕ ಪ್ರತೀ ಕಿ.ಮೀ.ಗೆ 17 ರೂ. ನಿಗದಿಪಡಿಸಲಾಗಿತ್ತು. ರಿಕ್ಷಾ ಚಾಲಕರಿಂದ ವಿರೋಧ ಬಂದ ಹಿನ್ನೆಲೆಯಲ್ಲಿ ಇದೀಗ ಮತ್ತೆ ಮರು ಪರಿಷ್ಕರಣೆ ಮಾಡಲಾಗಿದೆ.

ಈ ನೂತನ ದರ ಡಿ. 1ರಿಂದ ಜಾರಿಗೆ ಬರಲಿದೆ. ಡಿ. 1ರಿಂದ ಒಂದು ತಿಂಗಳ ಒಳಗಾಗಿ ಎಲ್ಲ ಆಟೋ ರಿಕ್ಷಾ ದರ ಮೀಟರ್‌ನಲ್ಲಿ ಸತ್ಯಾಪನೆ ಮಾಡಿಸಿ ಮುದ್ರೆ ಹಾಕಿಸಿಕೊಳ್ಳಬೇಕು. ತೂಕ ಮತ್ತು ಮಾಪನ ಶಾಸ್ತ್ರ ಇಲಾಖೆಯಿಂದ ದೃಢೀಕರಿಸಿಕೊಳ್ಳಲು ಸೂಚಿಸಲಾಗಿದೆ. ರಿಕ್ಷಾ ಚಾಲಕ ಮಾಲಕರು ತಮ್ಮ ಆಟೋ ರಿಕ್ಷಾಗಳ ಪ್ಲಾಗ್‌ ಮೀಟರ್‌ನಲ್ಲಿ ಮರು ನಿಗದಿಪಡಿಸಿದ ದರವನ್ನು ರಿಕ್ಷಾಬಿರೇಷನ್‌ ಹಾಗೂ ಸೀಲ್‌ ಮಾಡಿಸಿಕೊಂಡು ಪ್ರಯಾಣಿಕರಿಂದ ಪ್ರಯಾಣಕ್ಕೆ ತಕ್ಕಂತೆ ಪರಿಷ್ಕರಿಸಿ ಮೀಟರ್‌ ದರವನ್ನು ಪಡೆದುಕೊಳ್ಳುವಂತೆ ಆದೇಶಿಸಲಾಗಿದೆ.

Leave A Reply

Your email address will not be published.