ತಾಳಿ ಕಟ್ಟಬೇಕೆನ್ನುವಷ್ಟರಲ್ಲೇ ವಧು ಅಸ್ವಸ್ಥ | ವಧು ತಿಂದ ಸಿಹಿತಿಂಡಿಯಲ್ಲಿ ವಿಷ, ಅಷ್ಟಕ್ಕೂ ಅಲ್ಲೇನಾಗಿತ್ತು?

ಒಂದು ಮದುವೆ ಸುಸೂತ್ರವಾಗಿ ನಡೆಯುವ ಮುನ್ನ ಸಾವಿರಾರು ವಿಘ್ನಗಳಂತೆ. ಹೌದು ಮದುವೆ ಯಾವ ಕ್ಷಣದಲ್ಲಿ ಯಾವ ಕಾರಣಕ್ಕೆ ನಿಲ್ಲಬಹುದು ಎಂಬುದು ಊಹಿಸಲು ಸಹ ಸಾಧ್ಯ ಇಲ್ಲ. ಇಲ್ಲೊಂದು ಮದುವೆಯಲ್ಲಿ ವಿಚಿತ್ರ ಸಂಗತಿ ನಡೆದಿದೆ.

ಹೌದು ಮದುವೆ ಸಂಭ್ರಮದಲ್ಲಿದ್ದ ವಧುವಿಗೆ ಮಹಿಳೆಯೊಬ್ಬರು ಯಾರಿಗೂ ಗೊತ್ತಾಗದಂತೆ ಸಿಹಿ ಜೊತೆಯಲ್ಲಿ ವಿಷ ಬೆರೆಸಿ ಕೊಟ್ಟಿದ್ದು ಅದನ್ನು ತಿಂದ ವಧು ಕೆಲ ಸಮಯದ ಬಳಿಕ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

ನೆರೆಯ ಮದನಪಲ್ಲಿ ಇಂದಿರಾನಗರ ವಾಸಿ ನೂರ್‌ ಬಾಷ ಜತೆ ಮದುವೆ ಮಾಡಲು ಭಾನುವಾರ ಚಿಂತಾಮಣಿಯ ಬೆಂಗಳೂರು ರಸ್ತೆಯಲ್ಲಿರುವ ರಾಯಲ್‌ ಪ್ಯಾಮಿಲಿ ಫಂಕ್ಷನ್‌ ಹಾಲ್‌ನಲ್ಲಿ ಮದುವೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ವಧು ಫಿಜಾಖಾನಂ ತಮ್ಮ ಸಂಬಂಧಿಕರ ಜೊತೆಗೆ ಪ್ರತ್ಯೇಕ ರೂಂನಲ್ಲಿದ್ದಾಗ ಬಂದ ಮಹಿಳೆಯೊಬ್ಬರು ತಾನು ವರನ ಕಡೆಯವಳು ನನ್ನ ಗಂಡ ಸೌದಿಯಲ್ಲಿದ್ದಾರೆ, ನಿಮಗೆ ಒಳ್ಳೆಯ ಸ್ವೀಟ್‌ ಮಾಡಿಕೊಂಡು ಬಂದಿದ್ದೇನೆಂದು ಸಿಹಿತಿಂಡಿ ತಿನ್ನಿಸಿದ್ದಾಳೆ. ನಂತರ ಜ್ಯೂಸ್‌ ಕೊಟ್ಟು ಕುಡಿಯಿರಿ ಎಂದು ಹೇಳಿ ಹೊರ ಹೋಗಿದ್ದಾಳೆ.

ಸಿಹಿ ತಿಂಡಿ ತಿಂದು ಜ್ಯೂಸ್‌ ಕುಡಿದ್ದ ಫಿಜಾಖಾನಂಗೆ ಕೆಲ ಸಮಯ ಬಳಿಕ ತಲೆ ಸುತ್ತಿದಂತೆ ಆಗಿ ನಿಶಕ್ತಿಯಿಂದ ಪ್ರಜ್ಞೆ ಕಳೆದುಕೊಂಡು ಕೆಳಕ್ಕೆ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಪೋಷಕರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಸದ್ಯ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೆ.ಆರ್‌.ಪುರದ ತಸ್ಲಿಮಾ ಆಲಂ ಕೋಂ ತನ್ವೀರ್‌ ಎಂಬುವಳ ವಿರುದ್ಧ ದೂರು ದಾಖಲಾಗಿದೆ.
ವಿಷದ ಸಿಹಿ ತಿಂಡಿ ಹಾಗೂ ಜ್ಯೂಸ್‌ ಕುಡಿದು ಅಸ್ವಸ್ಥಳಾದ ವಧುವನ್ನು ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ ಫಿಜಾಕಾನಂ ಕೋಂ ಜಭೀವುಲ್ಲಾ (20) ಎಂದು ಗುರುತಿಸಲಾಗಿದೆ. ಪೊಲೀಸ್ ವಿಚಾರಣೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Leave A Reply

Your email address will not be published.