Education Loan : ಶಿಕ್ಷಣ ಸಾಲ ಹೇಗೆ ಪಡೆಯೋದು? ಯಾವ ಕೋರ್ಸ್‌ಗೆ ಎಷ್ಟು ಲೋನ್‌ ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಇಂದಿನ ಕಾಲದಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ. ಆದರೆ, ಶಿಕ್ಷಣವನ್ನು ಮುಂದುವರೆಸಲು ಕೆಲವೊಮ್ಮೆ ಆರ್ಥಿಕ ಮುಗ್ಗಟ್ಟಿನ ಸಮಸ್ಯೆ ತಲೆದೋರಿ ಓದಿಗೆ ವಿರಾಮ ಹೇಳಿ ದಿನಗೂಲಿ ಮಾಡುವ ಅನೇಕ ವಿದ್ಯಾರ್ಥಿಗಳು ನಮ್ಮ ನಡುವೆ ಇದ್ದಾರೆ . ಈ ರೀತಿ ಆರ್ಥಿಕ ಸಮಸ್ಯೆಯಿಂದ ಪರದಾಡುವ ವಿದ್ಯಾರ್ಥಿಗಳಿಗೆ ಕೆಲವೊಂದು ಸ್ಕಾಲರ್ಶಿಪ್ ಇಲ್ಲವೇ ಶಿಕ್ಷಣ ಸಾಲ ನೆರವಿಗೆ ಬರುತ್ತದೆ.

ದೇಶದಲ್ಲಿರುವ ಹೆಚ್ಚಿನ ಬ್ಯಾಂಕ್‌ಗಳು ಶಿಕ್ಷಣ ಸಾಲವನ್ನು ನೀಡಿ ವಿದ್ಯಾರ್ಥಿಗಳಿಗೆ ನೆರವಾಗುತ್ತಿವೆ. ಇದೆ ರೀತಿ, ಶಿಕ್ಷಣ ಸಾಲಗಳನ್ನು ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಪೋರ್ಟಲ್ ಸದುಪಯೋಗ ಪಡಿಸಿಕೊಳ್ಳಬಹುದು. ಕೇಂದ್ರ ಹಣಕಾಸು ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮಾರ್ಗದರ್ಶನದಲ್ಲಿ ಈ ಪೋರ್ಟಲ್‌ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಬಹುತೇಕ ಎಲ್ಲಾ ಬ್ಯಾಂಕ್‌ಗಳು ಈ ಪೋರ್ಟಲ್‌ಗೆ ಸಂಪರ್ಕವನ್ನು ಹೊಂದಿದೆ.ಈ ಪೋರ್ಟಲ್ ಅನ್ನು ಪ್ರವೇಶಿಸುವ ಮೂಲಕ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಶಿಕ್ಷಣ ಸಾಲಗಳಿಗೆ ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಭಾರತದಲ್ಲಿ ಶಿಕ್ಷಣದ ವೆಚ್ಚ ದಿನಂಪ್ರತಿ ಏರಿಕೆಯಾಗಿ ದುಬಾರಿಯಾಗುತ್ತಲೇ ಇದ್ದು,ಈ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ತಾವು ಬಯಸಿದ ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ತಾವು ಅಂದುಕೊಂಡ ಕೋರ್ಸ್‌ನಲ್ಲಿ ಶಿಕ್ಷಣ ಪಡೆಯುವುದು ಆರ್ಥಿಕ ದೃಷ್ಟಿಯಿಂದ ದೊಡ್ಡ ತೊಡಕಾಗಿದ್ದು, ಇಂತಹ ಸಂದಂರ್ಭದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳ ಶಿಕ್ಷಣ ಸಾಲ (Education Loan) ನೆರವಾಗುತ್ತದೆ. ಅದರಲ್ಲೂ ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಇತರೆ ವೃತ್ತಿಪರ ಕೋರ್ಸ್‌ಗಳನ್ನು ಅಧ್ಯಯನ ಮಾಡಲು ಎಷ್ಟು ಹಣ ವ್ಯಯಿಸಿದರು ಕೂಡ ಸಾಲದು!!

ಇಂದಿನ ಕಾಲದಲ್ಲಿ ಕಾಲೇಜು ಮೆಟ್ಟಿಲು ಹತ್ತುವಾಗ ಲಕ್ಷ ಕಟ್ಟಬೇಕಾದ ಪರಿಸ್ಥಿತಿಯ ನಡುವೆ ಎಲ್‌ಕೆಜಿ ಪ್ರವೇಶ ಪಡೆಯಲು ಲಕ್ಷಗಟ್ಟಲೆ ಹಣವನ್ನು ಹೊಳೆಯಂತೆ ಕಟ್ಟಬೇಕಾಗಿದೆ. ಇದರ ಜೊತೆಗೆ ಸಮವಸ್ತ್ರ, ವಾಹನ ವ್ಯವಸ್ಥೆ, ಪಠ್ಯ ಪುಸ್ತಕ ಮತ್ತು ವಿಶೇಷ ದಿನಗಳು ಎಂದು ಹೇಳಿ ಪೋಷಕರ ಜೇಬಿಗೆ ಕತ್ತರಿ ಬೀಳುವುದು ಖಚಿತ .

ಈ ಸಂದರ್ಭದಲ್ಲಿ ಎಲ್ಲರ ನೆರವಿಗೆ ಬರುವುದು ಶಿಕ್ಷಣ ಸಾಲವೆಂದರೆ ತಪ್ಪಾಗದು. ಈ ಶಿಕ್ಷಣ ಸಾಲಗಳನ್ನು ಪಡೆಯಲು ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಪೋರ್ಟಲ್ WWW.vidyalakshmi.co.in ಅನ್ನು ಬಳಸಿ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ಬಡ್ಡಿದರಲ್ಲಿ ಸಾಲವನ್ನು ನೀಡುತ್ತವೆ. ಸೂಕ್ತ ಪರಿಶೀಲನೆಯನ್ನು ನಡೆಸಿ ಇದರ ಲಾಭವನ್ನು ಪಡೆದುಕೊಳ್ಳಬಹುದು.ವಿದ್ಯಾರ್ಥಿಗಳು ಶಿಕ್ಷಣ ಸಾಲ ಪಡೆಯುವ ಮೊದಲು ಪ್ರತಿಯೊಂದನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿಕೊಂಡು ವಿವಿಧ ಬ್ಯಾಂಕ್‌ಗಳು ನೀಡುವ ಆಫರ್‌ಗಳನ್ನು ನೋಡಿಕೊಂಡು ಆಯ್ಕೆ ಮಾಡಿಕೊಳ್ಳಬಹುದು.

ಸಾಮಾನ್ಯವಾಗಿ ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್‌ಡಿ ಅಧ್ಯಯನಕ್ಕೆ ಸಾಲವನ್ನು ನೀಡಲಾಗುತ್ತದೆ. ಅಲ್ಪಾವಧಿ ಕೋರ್ಸ್‌ಗಳಿಗೆ ಅಂದರೆ ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ಸಾಲ ಲಭ್ಯವಿರುವುದಿಲ್ಲ. ಈ ಬಗ್ಗೆ ಬ್ಯಾಂಕ್‌ಗಳಲ್ಲಿ ಕೇಳಿ ದೃಢಪಡಿಸಿಕೊಂಡರೆ ಉತ್ತಮ.

ಶಿಕ್ಷಣ ಸಾಲವನ್ನು ಪಡೆಯಬೇಕಾದರೆ ಕೆಲವು ಮಹತ್ವದ ಅಂಶಗಳನ್ನು ಪರಿಶೀಲಿನೆ ನಡೆಸಬೇಕಾಗುತ್ತದೆ. ಸಾಲದ ಮೇಲಿನ ಬಡ್ಡಿದರ, ಮರುಪಾವತಿ ಮಾಡುವ ದಿನಾಂಕ, ಪೂರ್ವಪಾವತಿ ಶುಲ್ಕ, ಭದ್ರತೆ ಅಥವಾ ಜಾಮೀನು ಹಾಗು ಮುಖ್ಯವಾಗಿ ಸಾಲದ ಅರ್ಜಿಯ ಕ್ಷಿಪ್ರ ವಿಲೇವಾರಿ ಇವುಗಳನ್ನು ಪರಿಶೀಲಿಸಬೇಕಾಗುತ್ತದೆ.

ಶೈಕ್ಷಣಿಕ ಸಾಲದಲ್ಲಿ ಎರಡು ರೀತಿಯ ಸಾಲಗಳನ್ನು ನೀಡಲಾಗುತ್ತದೆ. ಭದ್ರತಾ ಸಾಲ ಮತ್ತು ಭದ್ರತೆಯಿಲ್ಲದ ಸಾಲ. ಸಾಮಾನ್ಯವಾಗಿ 50 ಸಾವಿರದಿಂದ ನಾಲ್ಕು ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಯಾವುದೇ ಭದ್ರತೆಯ ಅವಶ್ಯಕತೆ ತಲೆದೋರುವುದಿಲ್ಲ ಅಷ್ಟೇ ಅಲ್ಲದೆ, ಮಾರ್ಜಿನ್‌ ಕೂಡಾ ಇರುವುದಿಲ್ಲ ಹಾಗಾಗಿ, ಬ್ಯಾಂಕ್ ಪೂರ್ಣ ಪ್ರಮಾಣದ ಮೊತ್ತವನ್ನು ಅರ್ಜಿದಾರರಿಗೆ ಸಾಲವಾಗಿ ನೀಡುತ್ತದೆ. ಇದಕ್ಕೆ ಭದ್ರತೆಯಿಲ್ಲದ ಸಾಲವೆಂದು ಪರಿಗಣಿಸಲಾಗುವ ಜೊತೆಗೆ ಇದಕ್ಕೆ ಬಡ್ಡಿದರ ಕೊಂಚ ಜಾಸ್ತಿ ಕಟ್ಟಬೇಕಾಗುತ್ತದೆ.

ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಪೋಷಕರನ್ನು ಜಂಟಿ ಸಾಲಗಾರರೆಂದು ಪರಿಗಣಿಸುತ್ತಾರೆ. ವಿದ್ಯಾರ್ಥಿ ಸಾಲ ಮರುಪಾವತಿ ಮಾಡಲು ವಿಫಲವಾದರೆ ಪೋಷಕರೇ ಅದಕ್ಕೆ ಜವಾಬ್ದಾರರಾಗುತ್ತಾರೆ.

ಇನ್ನೂ ರೂ. 4 ಲಕ್ಷದಿಂದ ರೂ. 7.5 ಲಕ್ಷದವರೆಗಿನ ಸಾಲಕ್ಕೆ ಮೂರನೇ ಪಾರ್ಟಿ ಜಾಮೀನುದಾರರಾಗಬೇಕಾಗುತ್ತದೆ ಇಲ್ಲವೇ ಭದ್ರತೆ ನೀಡಬೇಕಾಗುತ್ತದೆ. ಇದು ಸೆಕ್ಯುರ್ಡ್‌ ಅಥವಾ ಭದ್ರತಾ ಸಾಲ ಎಂದು ಪರಿಗಣಿಸಲಾಗುತ್ತದೆ.ಇಲ್ಲಿ ಸಾಲದ ಮೊತ್ತ ರೂ. 7.5 ಲಕ್ಷಕ್ಕಿಂತ ಅಧಿಕವಿದ್ದರೆ ಅದಕ್ಕೆ ಆಸ್ತಿ, ಮನೆ ಕೃಷಿಯೇತರ ಭೂಮಿ, ವಿಮೆ, ಭದ್ರತಾ ಠೇವಣಿ ಮೊದಲಾದವುಗಳನ್ನು ಭದ್ರತೆಯ ದೃಷ್ಟಿಯಿಂದ ಒತ್ತೆ ಇಡಬೇಕಾಗುತ್ತದೆ.

ವಿದ್ಯಾರ್ಥಿಗಳಿಗೆ ಬ್ಯಾಂಕ್‌ಗಳು ಸಾಲವನ್ನು ನೀಡುವಾಗ ವಿದ್ಯಾರ್ಥಿಯ ಮೆರಿಟ್ ಅನ್ನು ಕೂಡ ಪರಿಗಣಿಸುತ್ತದೆ. ಮೆರಿಟ್ ಇರುವ ವಿದ್ಯಾರ್ಥಿಗಳಿಗೆ ಭದ್ರತೆ ಇಲ್ಲದೆ ಸಾಲ ಪಡೆಯಲು ಅರ್ಹ ಎಂದು ಕೆಲವು ಬ್ಯಾಂಕ್‌ಗಳು ಪರಿಗಣಿಸುವ ಜೊತೆಗೆ ಸಾಲ ನೀಡುತ್ತದೆ. ಸಾಲ ನೀಡುವ ಪ್ರಕ್ರಿಯೆ ಆಯಾ ಬ್ಯಾಂಕ್‌ಗಳ ಮೇಲೆ ಅವಲಿಂಬಿತವಾಗಿರುತ್ತದೆ.

ಬ್ಯಾಂಕ್‌ಗಳು ಕೇಳುವ ಸೂಕ್ತ ದಾಖಲೆಗಳು, ಅಂದರೆ ಕೆವೈಸಿ, ಶೈಕ್ಷಣಿಕ ಅರ್ಹತೆ ಕುರಿತು ದಾಖಲೆಗಳು, ಪ್ರವೇಶ ಪಡೆಯುವ ಶೈಕ್ಷಣಿಕ ಸಂಸ್ಥೆಯ ವಿವರ, ಶುಲ್ಕ, ಪ್ರವೇಶ ಪತ್ರ, ಸಾರಿಗೆ ವೆಚ್ಚ, ಮೊದಲಾದವುಗಳನ್ನು ನೀಡಬೇಕಾಗುತ್ತದೆ.

ಶಿಕ್ಷಣ ಸಾಲದ ಮರುಪಾವತಿಯು ಶಿಕ್ಷಣ ಮುಗಿದು ಒಂದು ವರ್ಷದ ನಂತರ ಅಥವಾ ಉದ್ಯೋಗಕ್ಕೆ ಸೇರಿದ ಆರು ತಿಂಗಳ ಬಳಿಕ ಆರಂಭವಾಗುತ್ತದೆ. ಇವರೆಡರಲ್ಲಿ ಯಾವುದು ಮೊದಲು ಅದನ್ನು ಪರಿಗಣಿಸಲಾಗುತ್ತದೆ. ಇಎಂಐ ಶುರುವಾಗುವ ಮೊದಲೇ ಮರುಪಾವತಿಗೆ ಯೋಜನೆ ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ದೃಷ್ಠಿಯಿಂದ ಕ್ಷೇಮ ಎನ್ನಬಹುದು.

Leave A Reply