ಶಬರಿಮಲೆ ಯಾತ್ರಾರ್ಥಿಗಳ ಗಮನಕ್ಕೆ : ʻ ಆರೋಗ್ಯ ಸಮಸ್ಯೆ ಇರುವವರು ಶಬರಿ ಮಲೆ ಬೆಟ್ಟ ಏರಬಾರದು : ಆರೋಗ್ಯ ಇಲಾಖೆ ಎಚ್ಚರಿಕೆ

ಬೆಂಗಳೂರು :  ಕೇರಳದ ಪಟ್ಟನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆಯಲ್ಲಿರುವ ಅಯ್ಯಪ್ಪ ದೇವಾಲಯದ ಬಾಗಿಲನ್ನು ವಾರ್ಷಿಕ ಮಂಡಲಂ ಮಕರವಿಳಕ್ಕು ಉತ್ಸವಗಳಿಗಾಗಿ ಭಕ್ತರ ದರ್ಶನಕ್ಕೆ ನವೆಂಬರ್‌ 17ರಂದು ತೆರೆಯಲಾಗಿದೆ. ಎರಡು ತಿಂಗಳುಗಳ ಕಾಲ ನಡೆಯುವ ಭಕ್ತರ ವಾರ್ಷಿಕ ತೀರ್ಥಯಾತ್ರೆ ಆರಂಭವಾಗಿದೆ. ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಶಬರಿಮಲೆಯ ಕಡೆಗೆ ತೆರೆಳತ್ತಿದ್ದು, ಅಯ್ಯಪ್ಪ ಸ್ವಾಮಿ ದೇವಾಲಯ ಭಕ್ತರಿಂದ ತುಂಬಿ ತುಳುಕುತ್ತಿದೆ. ಇದರಿಂದ ನೂಕುನುಗ್ಗಲೂ ಕೂಡ ಉಂಟಾಗುತ್ತಿದೆ. ಕರ್ನಾಟಕದಿಂದಲೂ ಸಾವಿರಾರು ಭಕ್ತರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದು, ತಂಡೋಪಾದಿಯಲ್ಲಿ ಶಬರಿ ಮಲೆಗೆ ತೆರಳಲು ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಬರಿಮಲೆಗೆ ತೆರಳುವ ಭಕ್ತರಿಗೆ ಆರೋಗ್ಯ ಇಲಾಖೆ ಕೆಲವು ಸೂಚನೆಗಳನ್ನು ನೀಡಿದೆ. ಅಯ್ಯಪ್ಪ ಸ್ವಾಮಿ ಭಕ್ತರಲ್ಲಿ ಉಸಿರಾಟದ ತೊಂದರೆ, ಹೃದ್ರೋಗ, ಅಸ್ತಮಾ ಸೇರಿ ಉಸಿರಾಟ ಸಂಬಂಧಿತ ಗಂಭೀರ ಆರೋಗ್ಯ ಸಮಸ್ಯೆ ಇರುವವರು ಶಬರಿ ಮಲೆ ಬೆಟ್ಟ ಏರಬಾರದು ಎಂದು ಯಾತ್ರಾರ್ಥಿಗಳಿಗೆ ಆರೋಗ್ಯ ಇಲಾಖೆ ತಿಳಿಸಿದೆ.

ಇನ್ನು ಕೆಮ್ಮು, ಜ್ವರ, ಶೀತದ ಲಕ್ಷಣ ಹಾಗೂ ಗಂಟಲು ನೋವು ಇರುವ ಭಕ್ತಾಧಿಗಳು ಹೆಚ್ಚು ಪ್ರಯಾಣ ಮಾಡಬಾರದು. ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಕಾಯಿಲೆಗಳಿಂದ ಬಳಲುತ್ತಿರುವ ಭಕ್ತಾಧಿಗಳು, ತಮ್ಮ ವೈದ್ಯರು ಸೂಚಿಸಿರುವ ಔಷಧಗಳನ್ನು ಹಾಗೂ ಚಿಕಿತ್ಸೆಯ ದಾಖಲೆಗಳನ್ನು ತಮ್ಮೊಂದಿಗೆ ಕೊಂಡೊಯ್ಯುವಂತೆ ಆರೋಗ್ಯ ಇಲಾಖೆ ಅಯ್ಯಪ್ಪ ಸ್ವಾಮಿ ಭಕ್ತಾಧಿಗಳಿಗೆ ಸೂಚನೆ ನೀಡಿದೆ.

ಆರೋಗ್ಯ ಸಮಸ್ಯೆ ಇರುವ ಭಕ್ತಾಧಿಗಳು ಅಯ್ಯಪ್ಪ ಸ್ವಾಮಿ ತೀರ್ಥಯಾತ್ರೆಗೂ ಮೊದಲು ವೈದ್ಯರಿಂದ ಸೂಕ್ತ ಮಾರ್ಗದರ್ಶನ ಪಡೆದಿರಬೇಕು. ಯಾತ್ರೆ ಸಂದರ್ಭದಲ್ಲಿ ನಿಗದಿತ ಔಷಧಿಗಳನ್ನು ತೆಗೆದುಕೊಳ್ಳಬೇಕು. ಶಬರಿಮಲೆ ಬೆಟ್ಟ ಏರಲು ಕನಿಷ್ಟ ಎರಡು ವಾರಗಳ ಮುಂಚಿತವಾಗಿ ಓಟ ಹಾಗೂ ನಡಿಗೆ ಸೇರಿದಂತೆ ದೈಹಿಕ ವ್ಯಾಯಾಮಗಳನ್ನು ರೂಢಿಸಿಕೊಳ್ಳುವುದು ಉತ್ತಮ ಎಂದು ಆರೋಗ್ಯ ಇಲಾಖೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಕಿವಿ ಮಾತು ಹೇಳಿದೆ.

ಇನ್ನು ದೇವಾಲಯದಲ್ಲಿ ಕಳೆದ ಎರಡು ವರ್ಷ ಗಳಿಂದ ಸಾಂಕ್ರಾಮಿಕ ಪ್ರೋಟೋಕಾಲ್‌ ತೆಗೆದುಹಾಕಲಾಗಿದ್ದು, ಕೋವಿಡ್‌ ವೇಳೆ ಹಾಕಲಾಗಿದ್ದ ನಿರ್ಬಂಧಗಳನ್ನು ಈ ವರ್ಷ ತೆಗೆದುಹಾಕಲಾಗಿದೆ. ಹೀಗಾಗಿ ಪ್ರಧಾನ ಅರ್ಚಕರ ಪ್ರಕಾರ ಈ ವರ್ಷ ಶಬರಿಮಲೆಗೆ 40 ಲಕ್ಷ ಜನ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ.

ಅಯ್ಯಪ್ಪ ದೇವರ ಪೂಜಾ ಕೇಂದ್ರವಾಗಿರುವ ಶಬರಿಮಲೆ ಶ್ರೀ ಧರ್ಮ ಶಾಸ್ತಾ ದೇವಾಲಯವು ಕೇರಳದ ಎಲ್ಲಾ ಶಾಸ್ತಾ ದೇವಾಲಯಗಳಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಈ ದೇವಾಲಯ ಬೆಟ್ಟದ ತುದಿಯಲ್ಲಿದೆ. ಇದು ಸಮುದ್ರಮಟ್ಟದಿಂದ ಸುಮಾರು 3,000 ಅಡಿಗಳಷ್ಟು ಎತ್ತರದಲ್ಲಿ ಇದೆ. ಹೀಗಾಗಿ ಬೆಟ್ಟವೇರುವ ಭಕ್ತಾಧಿಗಳು ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲಿಸುವುದು ಉತ್ತಮವಾಗಿದೆ.

1 Comment
  1. e-commerce says

    Wow, incredible weblog format! How lengthy have you
    ever been blogging for? you made blogging glance easy.
    The full glance of your web site is magnificent, as
    well as the content! You can see similar here sklep online

Leave A Reply

Your email address will not be published.