ಶ್ರದ್ಧಾ ಘಟನೆ ಮಾಸೋ ಮೊದಲೇ ನಡೆಯಿತು ಇನ್ನೊಂದು ಭೀಕರ ಕೃತ್ಯ |ತನ್ನನ್ನು ಬಿಟ್ಟು ಬೇರೆಯವನನ್ನು ಮದುವೆಯಾಗಿದ್ದಕ್ಕೆ ಕೋಪ | ವಿವಾಹಿತೆಯನ್ನು ಕೊಂದು 6 ತುಂಡು ಮಾಡಿ ಬಾವಿಗೆ ಎಸೆದ ಪ್ರಿಯಕರ!

ದೇಶದ ಜನರು ದೆಹಲಿಯಲ್ಲಿ ನಡೆದ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಕರ್ ನ ಭೀಕರ ಹತ್ಯೆ ಪ್ರಕರಣದ ಗೊಂಗಿನಿಂದ ಹೊರಬರುವ ಮುನ್ನವೇ ಮತ್ತೊಂದು ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಅಜಂಗಢದಲ್ಲಿ ಇಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಭಾನುವಾರ ಅಜಂಗಢದ ಕೆರೆಯಲ್ಲಿ ಮಹಿಳೆಯ ಶವ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಮಾಜಿ ಪ್ರೇಮಿಯೇ ಈ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.

ಉತ್ತರ ಪ್ರದೇಶದ ಪೊಲೀಸರ ಪ್ರಕಾರ ಅಜಂಗಢ ಜಿಲ್ಲೆಯ ಅಹ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ಪಶ್ಚಿಮ್ ಪಟ್ಟಿ ಗ್ರಾಮದಲ್ಲಿ ಮಹಿಳೆಯ ಛಿದ್ರಗೊಂಡ ಶವ ಪತ್ತೆಯಾಗಿದೆ. ಹಳೇ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ.

2022 ರ ಫೆಬ್ರವರಿಯಲ್ಲಿ ಕೊಲೆಯಾದ ಮಹಿಳೆಗೆ ವಿವಾಹವಾಗಿತ್ತು. ತನ್ನನ್ನು ಪ್ರೀತಿಸಿ, ಬೇರೆಯವರನ್ನು ಮದುವೆಯಾಗಿದ್ದಕ್ಕೆ ಆಕೆಯ ಮಾಜಿ ಪ್ರೇಮಿ ಕೋಪಗೊಂಡಿದ್ದ ಎಂಬ ಸುದ್ದಿ ಈಗಾಗಲೇ ಬೆಳಕಿಗೆ ಬಂದಿದೆ.

ಪೊಲೀಸ್ ಮಾಹಿತಿ ಪ್ರಕಾರ ಮೃತ ಮಹಿಳೆ ಈ ವರ್ಷದ ಫೆಬ್ರವರಿಯಲ್ಲಿ ಆರೋಪಿ ವಿದೇಶಕ್ಕೆ ಹೋಗಿದ್ದಾಗ ಬೇರೊಬ್ಬನ ಜೊತೆ ವಿವಾಹವಾಗಿದ್ದಳು. ಆತ ವಾಪಾಸ್ ಬಂದ ನಂತರ ಆಕೆ ಬೇರೊಬ್ಬನನ್ನು ಮದುವೆಯಾಗಿರುವ ವಿಷಯ ಗೊತ್ತಾಗಿತ್ತು. ಆಕೆಯ ಮನವೊಲಿಸಿ ಮದುವೆ ಮುರಿದುಕೊಳ್ಳಲು ಹೇಳಿದ್ದ. ಅದಕ್ಕೆ ಆಕೆ ಒಪ್ಪಿರಲಿಲ್ಲ. ಆಕೆ ಒಪ್ಪದಿದ್ದಾಗ ನವೆಂಬರ್ 10ರಂದು ದೇವಸ್ಥಾನಕ್ಕೆ ಹೋಗೋಣ ಎಂದು ಹೇಳಿ ಆಕೆಯನ್ನು ಹೊರಗೆ ಕರೆದೊಯ್ದಿದ್ದ. ನಂತರ ಆಕೆಯನ್ನು ಗದ್ದೆಗೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಸಾಯಿಸಿದ್ದ. ಅದಾದ ಬಳಿಕ ಆಕೆಯ ತಲೆ, ದೇಹವನ್ನು ಬೇರ್ಪಡಿಸಿ, ಗೆಳೆಯರ ಸಹಾಯದಿಂದ ಆಕೆಯ ದೇಹವನ್ನು ತುಂಡು ಮಾಡಿ ಬೇರೆ ಬೇರೆ ಕಡೆ ಎಸೆದಿದ್ದ ಎಂದು ತಿಳಿಸಿದ್ದಾರೆ.

ಈಗಾಗಲೇ ಬಾವಿಯಲ್ಲಿ ಮಹಿಳೆಯ ಶಿರಚ್ಛೇದಿತ ಶವ ಪತ್ತೆಯಾಗಿದೆ. ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತರ 8 ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ವಿಚಾರಣೆಯಿಂದ ಆರೋಪಿಯು ಮೃತ ಮಹಿಳೆಯೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ.

ಆರೋಪಿಗಳು ಮೃತಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ಆ ತುಂಡುಗಳ ಜೊತೆ ಆಕೆಯ ಬಟ್ಟೆಗಳನ್ನು ಬಾವಿಯಲ್ಲಿ ಹಾಕಿದ್ದಾನೆ. ನಂತರ ಆಕೆಯ ಕತ್ತರಿಸಿದ ತಲೆಯನ್ನು ಕೆರೆಯಲ್ಲಿ ಎಸೆದಿದ್ದಾನೆ. ಇದರಿಂದ ಆಕೆಯ ಶವ ಸಿಕ್ಕರೂ ಅದು ಯಾರದ್ದೆಂದು ಯಾರಿಗೂ ಗೊತ್ತಾಗುವುದಿಲ್ಲ ಎಂದು ಆತ ಊಹಿಸಿದ್ದ ಎಂದು ಅಜಂಗಢದ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಹೇಳಿದ್ದಾರೆ.

ಪ್ರಸ್ತುತ ಮೃತ ಮಹಿಳೆಯ ಮಾಜಿ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದು ಈ ಕ್ರತ್ಯಕ್ಕೆ ಸೇರಿದ ಇತರ ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಮಾಹಿತಿ ಹೊರತು ಹೆಚ್ಚಿನ ಮಾಹಿತಿ ಇನ್ನುಳಿದ ಆರೋಪಿಗಳಿಂದ ತಿಳಿದು ಬರಬೇಕಿದೆ.

Leave A Reply

Your email address will not be published.