ಪಾರಂಪರಿಕ ಬಸವನಗುಡಿಕಡಲೆಕಾಯಿ ಪರಿಷೆ : ಮುಗಿಬಿದ್ದ ಜನತೆ

ಬೆಂಗಳೂರು : ಪಾರಂಪರಿಕ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ರಾಜ್ಯ ಸೇರಿ ಅಂತರ ರಾಜ್ಯದಲ್ಲಿ ಬೆಳೆದ ಬಗೆಬಗೆಯ ಕಡಲೆಕಾಯಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಪರಿಷೆಯ ಆರಂಭ ದಿನವೇ ರವಿವಾರ ಆಗಿರುವುದರಂದ ಕಡಲೆಕಾಯಿ ಮಳಿಗೆಗಳಿಗೆ ಜನರು ಮುಗಿಬಿದ್ದಿದ್ದರು.

ಬಸವನಗುಡಿ, ಎನ್.ಆರ್. ಕಾಲನಿ, ತ್ಯಾಗರಾಜನಗರ, ಹನುಮಂತನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಡಲೆಕಾಯಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.

ಕೆಲವು ವ್ಯಾಪಾರಿಗಳು ಒಂದು ದೊಡ್ಡ ಸೇರು ಹಸಿ ಕಡಲೆಕಾಯಿಗೆ 50 ರೂ. ಮತ್ತು ಸಣ್ಣ ಸೇರು ಕಡಲೆಕಾಯಿಗಳನ್ನು 25 ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಕಡಲೆಕಾಯಿ ಬೆಲೆ ಹೆಚ್ಚಾಗಿದೆ.

ಕಡಲೆಕಾಯಿ ಪರಿಷೆಗೆ ಬಿಬಿಎಂಪಿ ಸಕಲಸಿದ್ಧತೆಗಳನ್ನು ನಡೆಸಿದ್ದು, ಮಾರಾಟಗಾರರಿಗೆ ಸಾವಿರಾರು ಮಳಿಗೆಗಳನ್ನು ಸ್ಥಾಪಿಸಿದೆ. ಇಲ್ಲಿನ ದೊಡ್ಡ ಗಣಪತಿ ದೇವಸ್ಥಾನದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಾಮ್ರಾಟ್, ಗಡಂಗ್, ಬಾದಾಮಿಯಂತಹ ಹತ್ತಾರು ಬಗೆಯ ಕಡಲೆ ಕಾಯಿಗಳು ಬಂದಿದ್ದು, ರುಚಿ ಮತ್ತು ಗಾತ್ರದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿದೆ.

ವಿವಿಧ ಬಗೆಯ ಕಡಲೆ ಕಾಯಿಗಳು ಜನರನ್ನು ಸೆಳೆಯುತ್ತಿದ್ದು, ವ್ಯಾಪಾರ ವಹಿವಾಟು ಜೋರಾಗಿ ಕಂಡುಬಂದಿತು. ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ, ನೆರೆ ರಾಜ್ಯ ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದಲೂ ವಿವಿಧ ಬಗೆಯ ಕಡಲೆ ಕಾಯಿಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ.

ತುರ್ತು ಸಂದರ್ಭದಲ್ಲಿ ಮಕ್ಕಳು, ವೃದ್ಧರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪರಿಷೆಯಲ್ಲಿ ತಿಂಡಿ-ತಿನಿಸು, ಬಣ್ಣ ಬಣ್ಣದ ಬಲೂನು, ಬಗೆ ಬಗೆಯ ಆಟಿಕೆ, ಅಲಂಕಾರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳೂ ಜನರನ್ನು ಸೆಳೆಯುತ್ತಿವೆ.

Leave A Reply

Your email address will not be published.