ಮಂಗಳೂರು : ಆಟೋ ಸ್ಫೋಟದ ಹಿಂದೆ ಉಗ್ರರ ಕೈವಾಡ; ಉದ್ದೇಶಪೂರ್ವಕ ಕೃತ್ಯ ಎಂದ ಡಿಜಿಪಿ | ಪ್ರಯಾಣಿಕನ ಹೇಳಿಕೆಯಿಂದ ಅನುಮಾನ ಹೆಚ್ಚಳ

ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ಸ್ಪೋಟವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರಿಗೆ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಸ್ಪೋಟಗೊಂಡ ಆಟೋದಲ್ಲಿ ಎರಡು ಬ್ಯಾಟರಿ, ನಟ್ಟು​ ಬೋಲ್ಟ್​​, ಸರ್ಕ್ಯೂಟ್​​ ರೀತಿಯ ವೈರಿಂಗ್ ಮಾಡಿರುವ ವಸ್ತುಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳನ್ನು FSL ತಂಡವು ಪರೀಕ್ಷೆಗೊಳಪಡಿಸಿವೆ.

ಇನ್ನೂ ಆಟೋದಲ್ಲಿದ್ದ ಪ್ರಯಾಣಿಕನ ಮೇಲೆ ಅನುಮಾನ ಹೆಚ್ಚಾಗಿದ್ದು, ಈತ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬರುತ್ತಿದ್ದ ಆಟೋವನ್ನು ಹತ್ತಿದ್ದ. ಈತ ಘಟನಾ ಸ್ಥಳದ 1 ಕಿ.ಮೀ ದೂರದ ನಾಗುರಿ ಬಳಿ ಆಟೋ ಹತ್ತಿದ್ದು ಸ್ಪೋಟದ ತೀವ್ರತೆಗೆ ಪ್ರಯಾಣಿಕನ ದೇಹದ ಅರ್ಧ ಭಾಗ ಸುಟ್ಟ ಗಾಯವಾಗಿದೆ. ಕೈ, ಎದೆ, ಮುಖದ ಭಾಗಕ್ಕೆ ಗಾಯವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಪ್ರಯಾಣಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಗಾಯಾಳು ಕಾರ್ಮಿಕ ಉತ್ತರಪ್ರದೇಶ ನಿವಾಸಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಪ್ರೇಮ್​ ರಾಜ್​​ ಕನೋಗಿ ಎಂಬ ಹೆಸರಿನ ಐಡಿ ದಾಖಲೆ ಪತ್ತೆಯಾಗಿದೆ. ಆತನ ಬಾಕ್ಸ್​​​, ಬ್ಯಾಗ್​​ನಿಂದಲೇ ಸ್ಫೋಟ ಸಂಭವಿಸಿರಬಹುದು ಎನ್ನಲಾಗಿದೆ.

ಈತ ಹಿಂದಿ ಭಾಷೆ ಮಾತನಾಡುತ್ತಿದ್ದ ಎನ್ನಲಾಗಿದೆ. ಆದರೆ ತನಿಖೆ ವೇಳೆ ಅಸ್ಪಷ್ಟ ಮಾಹಿತಿ ಸಿಕ್ಕಿದೆ. ಈತ ಪೊಲೀಸರ ಎದುರು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದು, ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಹೇಳಿದ್ದು ಅಣ್ಣ ಬಾಬುರಾವ್ ಗೆ ಕರೆ ಮಾಡಿ ಅಂತ ನಂಬರ್ ನೀಡಿದ್ದ. ಆ ನಂಬರ್​ಗೆ ಕರೆ ಮಾಡಿದಾಗ ಆತ ತನ್ನ ಸಂಬಂಧಿಕನೇ ಅಲ್ಲ, ಆತ ತನ್ನ ರೂಮ್ ನಲ್ಲಿದ್ದ, ಬೆಂಗಳೂರಿಗೆ ಹೋಗ್ತೇನೆಂದು ಹೋಗಿದ್ದ ಎಂದಿದ್ದಾನೆ. ಆತನ ಬಗ್ಗೆ ಬೇರೆ ಗೊತ್ತಿಲ್ಲ ಎಂದಿದ್ದಾನೆ. ಹೀಗಾಗಿ ಗಾಯಗೊಂಡ ಪ್ರಯಾಣಿಕನ ಬಗ್ಗೆ ಅನುಮಾನ ತೀವ್ರವಾಗಿದೆ.

ಇನ್ನೂ ಈ ಸ್ಪೋಟದ ಹಿಂದೆ ಉಗ್ರರ ಕೈವಾಡ ಇದೆ ಅನ್ನೋದು ದೃಢವಾಗಿದೆ. ಇದು ಅನಿರೀಕ್ಷಿತವಾಗಿ ಸ್ಪೋಟಗೊಂಡಿದ್ದಲ್ಲ. ಇದೊಂದು ಉಗ್ರ ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ (DGP Praveen Sood) ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ಬಲವಾದ ಹಾನಿ ಉಂಟುಮಾಡಲು ಈ ಸಂಚು ನಡೆದಿದೆ. ಕರ್ನಾಟಕ ಪೊಲೀಸರಿಂದ ಸೂಕ್ಷ್ಮವಾಗಿ ತನಿಖೆ ನಡೆಸಲಾಗ್ತಿದೆ‌. ಕೇಂದ್ರದ ತನಿಖಾ ಸಂಸ್ಥೆಗಳ ಜೊತೆ ತನಿಖೆ ನಡೆಸಲಾಗ್ತಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ. ಪ್ರವೀಣ್ ಸೂದ್​ ಅವರ ಟ್ವೀಟ್​​ನ್ನು ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ರೀಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.