ವರ್ಕ್​ ಪ್ಲೇಸ್​ನಲ್ಲಿ ಯಾವತ್ತೂ ಕಂಫರ್ಟ್​ ಜೋನ್​ ಇಟ್ಕೋಬೇಡಿ

ನಿತ್ಯ ನೀವು ಕೆಲಸ ಮಾಡುತ್ತೀರಿ. ಕೆಲಸದ ಮಧ್ಯೆ ಇದೇ ಸಮಯಕ್ಕೆ ನಿನ್ನೆಯೂ ನಾನು ಇದೇ ಕೆಲಸ ಮಾಡುತ್ತಿದ್ದೆ ಎಂಬ ಯೋಚನೆ ಬರುತ್ತೆ. ನಿನ್ನೆ ಮಾತ್ರವಲ್ಲ ಮೊನ್ನೆ, ವಾರದ ಹಿಂದೆ, ವರ್ಷಗಳಿಂದಲೂ ನಾನು ಈ ಸಮಯಕ್ಕೆ ಇದೇ ಕೆಲಸ ಮಾಡುತ್ತಿದ್ದೇನೆ ಎಂದು ಅನಿಸಿದರೆ, ನಿಮಗೆ ಏಕತಾನತೆ ಕಾಡುತ್ತಿದೆ ಎಂದರ್ಥ. ನಿಮ್ಮ ಕೆಲಸದಲ್ಲಿ ಯಾವುದೇ ವ್ಯತ್ಯಾಸಗಳು ಇಲ್ಲದಿರುವುದು ವೃತ್ತಿ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ. ನಿಮ್ಮ ನಿತ್ಯದ ಜೀವನಕ್ಕೆ ಸುಗಮ ಎನಿಸಬಹುದು. ಆದರೆ ನಿಂತ ನೀರಿನಂತೆ ನಿಮ್ಮ ಕರಿಯರ್​ ಕಾಣಿಸಲು ಶುರುವಾಗುತ್ತೆ. ಮಾಡಿದ ಕೆಲಸವನ್ನೇ ವರ್ಷಗಳ ಕಾಲ ಮಾಡಿಕೊಂಡಿರುವುದು ಸೂಕ್ತವಲ್ಲ. ಸವಾಲಿನ, ನಿಮ್ಮ ವೃತ್ತಿ ಜೀವನದ ಬೆಳವಣಿಗೆಗೆ ಕಾರಣವಾಗುವಂತ ಕೆಲಸವನ್ನು ಮಾಡಬೇಕು ಎಂದು ನಿಮಗೆ ಅನಿಸಿದೆಯೇ? ಹಾಗಾದರೆ ನಿಮ್ಮ ಕಂಫರ್ಟ್​ ಜೋನ್​ನಿಂದ ಹೊರ ಬಂದು ಹೇಗೆ ಒಳ್ಳೆಯ ಕರಿಯರ್​ ಸೃಷ್ಟಿಸಿಕೊಳ್ಳಬಹುದು ಎಂದು ಇಲ್ಲಿ ತಿಳಿಸಲಾಗಿದೆ.

ಸರಿಯಾದ ಸಮಯದಲ್ಲಿ ಆರಾಮ ವಲಯದಿಂದ ಹೊರಬರುವುದು ಅವಶ್ಯಕ. ನಿಮ್ಮ ಸಾಮರ್ಥ್ಯ ಮತ್ತು ಮಿತಿಗಳನ್ನು ಗುರುತಿಸುವುದು, ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುವುದು ವೃತ್ತಿ ಜೀವನದಲ್ಲಿ ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ. ಕಂಫರ್ಟ್​ ಜೋನ್​ನಿಂದ ಹೊರಬರಲು ಕೆಲವು ವಿಶೇಷ ಸಲಹೆಗಳನ್ನು ತಿಳಿಯಿರಿ.

  1. ನಿಮಗೆ ನೀವೇ ಕಾರಣಗಳನ್ನು ಹೇಳಿಕೊಳ್ಳುವುದನ್ನು ನಿಲ್ಲಿಸಿ: ನನ್ನ ಕುಟುಂಬಕ್ಕಾಗಿ, ಮಕ್ಕಳ ಆರೈಕೆಗಾಗಿ ಇದೇ ಕೆಲಸ ಮಾಡುತ್ತಿದ್ದೇನೆ. ಬೇರೆ ಕೆಲಸ, ನಗರಕ್ಕೆ ತೆರಳಲು ಕೌಟುಂಬಿಕ ಕಾರಣಗಳಿವೆ. ಈಗ ಇರುವ ವೃತ್ತಿಯನ್ನು ಬಿಟ್ಟರೆ ಮುಂದೆ ಕೆಲಸ ಸಿಗದಿರಬಹುದು. ಮುಂದಿನ ಕೆಲಸ ಕಷ್ಟವೆನಿಸಬಹುದು. ಈಗ ಹೇಗಿದೆಯೋ ಅದೇ ರೀತಿ ಜೀವನ ನಡೆದರೆ ಸಾಕು. ಹೊಸದನ್ನು ಕಲಿಯಲು ನನಗೆ ಕಷ್ಟವಾಗಬಹುದು. ನನಗೆ ವಯಸ್ಸಾಯಿತು.. ಹೀಗೆಲ್ಲಾ ನಿಮಗೆ ನೀವೇ ಕಾರಣಗಳನ್ನು ಹೇಳಿಕೊಂಡು ನಿಂತ ನೀರಾಗಬಾರದು. ಹೊಸ ಆಲೋಚನೆ, ಸವಾಲನ್ನು ಎದುರಿಸುವ ಸ್ಥೈರ್ಯವನ್ನು ತೋರಿಸಬೇಕು.
  2. ಭಯವನ್ನು ಮೊದಲು ಹಿಮ್ಮೆಟ್ಟಿಸಿ: ಕೆಲವರ ಮನಸ್ಸಿನಲ್ಲಿ ಏಕಾಂಗಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ ಎಂಬ ಭಯವಿರುತ್ತದೆ. ಆರ್ಥಿಕ ಹೊರೆ ಹೆಚ್ಚಾಗುತ್ತದೆ ಎಂದು ಮತ್ತೊಬ್ಬರು ಭಾವಿಸುತ್ತಾರೆ. ನಿಮ್ಮ ಮನಸ್ಸಿನಲ್ಲೂ ಅಂತಹ ಭಯಗಳಿದ್ದರೆ, ಅವುಗಳನ್ನು ನಿವಾರಿಸಬಹುದು ಎಂದು ನೀವು ತಿಳಿದಿರಬೇಕು. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು. ನಿರ್ಧಾರ ಮಾಡಿ ಮುಂದೆ ಹೆಜ್ಜೆ ಇಟ್ಟ ಮೇಲೆ ಹಿಂತಿರುಗಿ ನೋಡಬಾರದು. ಕರಿಯರ್​ ದೃಷ್ಟಿಯಿಂದ ಹೊಸದನ್ನು ಎದುರಿಸಲು ಹಿಂದೇಟು ಹಾಕಬೇಡಿ.
  3. ನೀವು ಸರಿಯಾಗಿ ಯೋಜಿಸುತ್ತಿದ್ದೀರಾ?: ನೀವು ಕಂಫರ್ಟ್ ಝೋನ್‌ನಿಂದ ಹೊರಬರಲು ಮತ್ತು ಬೇರೆ ಯಾವುದಾದರೂ ಪ್ರದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಯೋಜನೆ ಸರಿಯಾಗಿಲ್ಲದಿದ್ದರೆ ಅದು ಯಶಸ್ವಿಯಾಗುವುದು ಕಷ್ಟ. ನಿಮ್ಮ ಯೋಜನೆಯನ್ನು ಮತ್ತೆ ಪ್ರಾರಂಭಿಸುವುದು ಉತ್ತಮ. ಹೊಸದನ್ನು ಮಾಡಬೇಕೆಂದು ಸೂಕ್ತ ತಯಾರಿ, ಯೋಜನೆಯಿಲ್ಲದೆ ಮುಂದಾಗುವುದು ತಪ್ಪು. ಸರಿಯಾದ ಮಾಹಿತಿ ಪಡೆದು, ತಾಳ್ಮೆಯಿಂದ ಎಲ್ಲವನ್ನು ಪ್ಲಾನ್​ ಮಾಡಬೇಕು.

ಒಂದನ್ನು ಪಡೆಯಬೇಕೆಂದರೆ ಇನ್ನೊಂದನ್ನು ಕಳೆದುಕೊಳ್ಳಬೇಕು ಎಂಬುವುದು ಹಳೆ ಮಾತು. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಮಲ್ಟಿ ಟಾಸ್ಕ್​ ಇಂದಿನ ಜೀವನಕ್ಕೆ ಬೇಕಿದೆ. ವೈಯಕ್ತಿಕ ಬದುಕಿಗಾಗಿ ವೃತ್ತಿ ಜೀವನವನ್ನು ನೀರಸವಾಗಿಸಬೇಡಿ.

Leave A Reply

Your email address will not be published.