ಮಂಗಳೂರು ಕೆಂಗಣ್ಣು | ಬೆಳ್ತಂಗಡಿಯಲ್ಲೂ ಕಾಡಿದ ಕೆಂಗಣ್ಣು ಭೀತಿ!

ಕರಾವಳಿಯ ಗಡಿ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವ ಕೆಂಗಣ್ಣು ಸಮಸ್ಯೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪಂಚಾಯತ್ ಅಧಿಕಾರಿಗಳು ಮುಂದಾಗಿದ್ದಾರೆ.
ಕಾಸರಗೋಡು ಅಲ್ಲದೆ,ಕರ್ನಾಟಕಕ್ಕೆ ಹೊಂದಿಕೊಂಡಿರುವ ಗಡಿ ಪಂಚಾಯತ್‌ಗಳಾದ ಮಂಜೇಶ್ವರ, ಮೀಂಜ, ವರ್ಕಾಡಿಗಳಲ್ಲಿ ಕೆಂಗಣ್ಣು ರೋಗ ಹರಡುತ್ತಿರುವ ಭೀತಿ ಯಿಂದಾಗಿ ಜನರು ಮುನ್ನೆಚ್ಚರಿಕೆ ವಹಿಸುವಂತೆ ಪಂಚಾಯತ್‌ ಅಧಿಕಾರಿಗಳು ಕರೆ ನೀಡಿದ್ದಾರೆ.

ಕರ್ನಾಟಕದಲ್ಲಿ ಕಳೆದ ಎರಡು ವಾರಗಳಿಂದ ಕೆಂಗಣ್ಣು ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ, ಹೊರಗಡೆ ಸಂಚರಿಸುವವರು ಜಾಗೃತರಾಗಿದ್ದು, ಮುಂಜಾಗ್ರತೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಇದರ ಜೊತೆಗೆ ರೋಗ ಲಕ್ಷಣವಿರುವವರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಔಷಧ ಪಡೆದುಕೊಳ್ಳುವಂತೆಯೂ ತಿಳಿಸಿದ್ದಾರೆ.
ಮಂಜೇಶ್ವರ ಹಾಗೂ ಪರಿಸರದಲ್ಲಿ ವಾರ್ಷಿಕೋತ್ಸವ, ವಿವಿಧ ಹಬ್ಬಗಳು, ಶಾಲಾ ಕಲೋತ್ಸವ ಜರಗಲಿರುವುದರಿಂದ ಈ ವೇಳೆ ಕೆಂಗಣ್ಣು ಬಾಧಿತರು ಮನೆಯಲ್ಲೇ ಉಳಿದು ಸಹಕರಿಸಬೇಕೆಂದು ಈ ವೇಳೆ ಪಂಚಾಯತ್‌ಗಳ ಅಧ್ಯಕ್ಷರು ಮನವಿ ಮಾಡಿದ್ದಾರೆ.

ಕೆಂಗಣ್ಣು ಸಮಸ್ಯೆ ಎಲ್ಲೆಡೆ ಹಬ್ಬುತ್ತಿದ್ದು, ಸದ್ಯ ಬೆಳ್ತಂಗಡಿ ತಾಲೂಕಿಗೂ ಕೆಂಗಣ್ಣು ಕಾಯಿಲೆ ವ್ಯಾಪಿಸಿದೆ. ಅಲ್ಲದೆ, ದಿನಂಪ್ರತಿ 20ರಿಂದ 30 ಪ್ರಕರಣಗಳು ತಾಲೂಕಿನ ಆಸ್ಪತ್ರೆಗಳಿಂದ ವರದಿಯಾಗುತ್ತಿವೆ ಎನ್ನಲಾಗಿದೆ. ಈ ಸಮಸ್ಯೆಗೆ ಬಾಧಿತ ರಾಗುತ್ತಿರುವವರಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳ ಸಂಖ್ಯೆ ಹೆಚ್ಚು ಎನ್ನಲಾಗುತ್ತಿದೆ. ಇದರ ಜೊತೆಗೆ, ಕೆಂಗಣ್ಣಿನ ವೈರಸ್‌ ಬಹಳಷ್ಟು ವೇಗವಾಗಿ ಹರಡುತ್ತಿದ್ದು, ಹಾಗಾಗಿ, ಕೆಂಗಣ್ಣಿನ ರೋಗದ ಲಕ್ಷಣ ಕಂಡು ಬಂದರೆ ಗುಣವಾಗುವ ತನಕ ಶಾಲೆಗೆ ಬರದಂತೆ ಮಕ್ಕಳಿಗೆ ಸೂಚಿಸಲಾಗುತ್ತಿದೆ.

ಯಾವುದೇ ಅಪಾಯ ಇಲ್ಲದಿದ್ದರೂ ಹರಡುವ ಕಾಯಿಲೆಯಾಗಿರುವುದರಿಂದ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವುದು ಸೂಕ್ತ ಎನ್ನಲಾಗಿದೆ. ಹಾಗಾಗಿ, ಲಕ್ಷಣ ಕಂಡುಬಂದ ತಕ್ಷಣ ಮನೆಮದ್ದಿಗಿಂತ ಹತ್ತಿರದ ಆಸ್ಪತ್ರೆಯಿಂದ ಔಷಧ ಪಡೆಯುವುದು ಉತ್ತಮ. ಮುಂಜಾಗ್ರತೆ ಕ್ರಮವಾಗಿ ಶಾಲೆಗಳಿಗೆ ತೆರಳಿ ಕಣ್ಣಿಗೆ ಡ್ರಾಪ್ಸ್‌ ಹಾಕಲು ಆಸ್ಪತ್ರೆಗಳಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಈ ಸಂದರ್ಭದಲ್ಲಿ ತಾಲೂಕು ಸರಕಾರಿ ಆಸ್ಪತ್ರೆಯ ನೇತ್ರ ತಜ್ಞೆ ಡಾ| ಶಿಲ್ಪಾ ತಿಳಿಸಿದ್ದಾರೆ.

Leave A Reply

Your email address will not be published.