Password : ನಿಮಗೆ ಗೊತ್ತೇ? ಭಾರತೀಯರು ಯಾವ ಪಾಸ್‌ ವರ್ಡ್‌ ಹೆಚ್ಚು ಬಳಸುತ್ತಾರೆಂದು? ಹಾಗಾದರೆ ತಡ ಯಾಕೆ ಇದರಲ್ಲಿ ನಿಮ್ಮ ಪಾಸ್‌ ವರ್ಡ್‌ ಇದೆಯಾ ಚೆಕ್‌ ಮಾಡಿ

ಇಂದಿನ ಆನ್ಲೈನ್ ಯುಗದಲ್ಲಿ ಪಾಸ್’ವರ್ಡ್ ನ ಪಾತ್ರ ಮಹತ್ವವಾದದ್ದು. ಆನ್ಲೈನ್ ಮೂಲಕ ನಾವು ಅನೇಕ ಚಟುವಟಿಕೆಗಳನ್ನು ನಿರ್ವಹಿಸುತ್ತೇವೆ. ಬ್ಯಾಂಕ್ ವಿಷಯಕ್ಕೆ ಬಂದರೆ, ಎಟಿಎಂನಿಂದ ಹಣ ಪಡೆಯುವುದರಿಂದ ಹಿಡಿದು ಮೊಬೈಲ್ ಮೂಲಕ ಹಣ ಪಾವತಿಸುವವರೆಗೂ ಜನರು ಪಾಸ್‌ವರ್ಡ್ ಅನ್ನು ಬಳಸದೇ ಇರುವುದು ಸಾಧ್ಯವೇ ಇಲ್ಲ. ಬಲು ಕಠಿಣವಾದ, ಸರಳವಲ್ಲದ ಪಾಸ್’ವರ್ಡ್ ಗಳನ್ನು ಹೊಂದುವಂತೆ ವಿನಂತಿಸುತ್ತಲೇ ಇರುತ್ತಾರೆ.

ಆದರೆ, ಜನರು ನಾವೆಲ್ಲಿ ಮರೆತು ಬಿಡುವೆವೋ ಎಂಬ ಭಯದಿಂದ ತಮಗೆ ಸುಲಭವಾದಂತಹ, ಯಾವಾಗಲೂ ನೆನಪಿರುವಂತಹ ಪದಗಳನ್ನೇ ಪಾಸ್‌ವರ್ಡ್ ಗಳನ್ನಾಗಿ ಹೊಂದಿರುತ್ತಾರೆ. ಸುಲಭವಾದ ಪಾಸ್’ವರ್ಡ್ ಹಾಕಿದರೆ ಆನ್ಲೈನ್ ಖದೀಮರು ಬೇಗ ಹ್ಯಾಕ್ ಮಾಡಬಲ್ಲರು. ನಾವೀಗ ಈ ವಿಷಯದ ಬಗ್ಗೆ ಚರ್ಚಿಸಲು ಕಾರಣ ಇಷ್ಟೇ. ಭಾರತದಲ್ಲಿ ನಾರ್ಡ್ ಸೆಕ್ಯುರ್ಟಿಯ ಪಾಸ್‌ವರ್ಡ್ ಮ್ಯಾನೇಜರ್ ಆರ್ಮ್ ‘ನಾರ್ಡ್‌ಪಾಸ್‌’ ವರದಿಯು 2022ರಲ್ಲಿ ಭಾರತೀಯರು ಸಾಮಾನ್ಯವಾಗಿ ಬಳಸುವ ಪಾಸ್‌ವರ್ಡ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದೂ, ಈ ಪಟ್ಟಿಯಲ್ಲಿ ಭಾರತೀಯರು ಹೆಚ್ಚಾಗಿ ಬಳಸುತ್ತಿರುವ ಪಾಸ್‌ವರ್ಡ್‌ಗಳು ಯಾವುವು ಎಂಬುದನ್ನು ತಿಳಿಸಲಾಗಿದೆ. ಪಾಸ್‌ವರ್ಡ್‌’ಗಳ ಪಟ್ಟಿಯು ಬಹಳ ಆತಂಕಕಾರಿಯಾಗಿದೆ.!

ಭಾರತದಲ್ಲಿ ಅದರಲ್ಲೂ ವಿಶೇಷವಾಗಿ 2022 ರಲ್ಲಿ, ಬಹು ಜನರು ಬಳಸಿರುವ ಪಾಸ್’ವರ್ಡ್ “password” ಎಂಬ ಪದವೇ ಆಗಿದೆಯಂತೆ. ಇದನ್ನು ಏನಿಲ್ಲವೆಂದರೂ 3.4 ಮಿಲಿಯನ್ ಗಳಷ್ಟು ಸಲ ಬಳಸಲಾಗಿದೆ. ಇದರ ನಂತರ ಹೆಚ್ಚಾಗಿ ಬಳಸಲ್ಪಟ್ಟಿರುವ ಪಾಸ್‌ವರ್ಡ್ ಗಳೆಂದರೆ “123456” ಹಾಗೂ “12345678” ಎಂಬುದಾಗಿದೆ. ಈ ಪಾಸ್‌ವರ್ಡ್ ಗಳು ಬಲು ದುರ್ಬಲವಾಗಿದ್ದು ಕೇವಲ ಒಂದೇ ನಿಮಿಷದಲ್ಲಿ ಹ್ಯಾಕ್ ಮಾಡಬಹುದಾಗಿದೆ. ಎಂದು ನಾರ್ಡ್ ಪಾಸ್ ವರದಿ ಮಾಡಿದೆ.

ನಾಲ್ಕನೇಯ ಅತಿ ಹೆಚ್ಚು ಬಳಸಲ್ಪಟ್ಟ ಪಾಸ್‌ವರ್ಡ್ “bigbasket”. ಇದು ಕೊಂಚ ವಿಭಿನ್ನವಾಗಿದ್ದು ಊಹಿಸಲು ಕಷ್ಟವೇ ಆಗಿದೆ ಎಂದು ಹೇಳಬಹುದು ಹಾಗೂ ಈ ಪಾಸ್‌ವರ್ಡ್ ಅನ್ನು ಹ್ಯಾಕ್ ಮಾಡಲು ಸುಮಾರು ಐದು ನಿಮಿಷಗಳವರೆಗೆ ಸಮಯ ಬೇಕಾಗಿದ್ದು ಇದು 75,000 ಸಲ ಬಳಸಲ್ಪಟ್ಟಿದೆ.

ಐದನೇ ಕ್ರಮಾಂಕದಲ್ಲಿ “123456789” ಈ ಪಾಸ್’ವರ್ಡ್ ಇದ್ದರೆ ಅದರ ನಂತರ “pass@123” ಹಾಗೂ “1234567890” ಸ್ಥಾನ ಪಡೆದಿವೆ. ಇನ್ನು, ಭಾರತದಲ್ಲಿ ಎಂಟನೇಯ ಸ್ಥಾನದಲ್ಲಿ “anmol123” ಎಂಬ ಪಾಸ್‌ವರ್ಡ್ ಬಳಸಲ್ಪಟ್ಟಿದ್ದು ಇದನ್ನು ಹತ್ತು ಸಾವಿರಕ್ಕೂ ಹೆಚ್ಚು ಬಾರಿ ಬಳಸಲಾಗಿದೆ. ಇದನ್ನು ಭೇದಿಸಲು ಸುಮಾರು 17 ನಿಮಿಷಗಳ ಅವಶ್ಯಕತೆಯಿದೆ ಎನ್ನಲಾಗಿದೆ.

ಈ ಸಂಶೋಧನಾ ವರದಿಯನ್ನು ಗಮನಿಸಿದಾಗ ತಿಳಿದು ಬಂದ ವಿಷಯವೆಂದರೆ, ಇಂದಿಗೂ ಜನರು ಅತ್ಯಮೂಲ್ಯವಾದ ತಮ್ಮ ಖಾತೆಗಳನ್ನು ಸಂರಕ್ಷಿಸಲೋ ಅಥವಾ ಇನ್ಯಾವುದೋ ಮೌಲ್ಯಯುತವಾದ ವಿಷಯ/ ವಸ್ತು ಸಂರಕ್ಷಿಸಲೋ ಜನರು ತಮಗೆ ಸರಳ ಎನಿಸುವಂತಹ, ದುರ್ಬಲವಾದ ಪಾಸ್ವರ್ಡ್ ಬಳಸುತ್ತಿದ್ದಾರೆ. ಆದರೆ ಇಂದು ಸೈಬರ್ ಅಪರಾಧ ಹಾಗೂ ಆನ್ಲೈನ್ ಖದೀಮರು ಅಭಿವೃದ್ಧಿ ಹೊಂದುವುದನ್ನು ನೋಡಿದರೆ, ಮುಂದೆ ಜನರ ಬ್ಯಾಂಕ್ ಖಾತೆಗಳಲ್ಲಿರುವ ಹಣ ಸುರಕ್ಷಿತವಾಗಿರುತ್ತದೆ ಎಂದು ಹೇಳುವುದು ಕಷ್ಟವಾಗುತ್ತದೆ.

ಹಾಗಾಗಿ, ಗೌಪ್ಯ ಅಥವಾ ಕಠಿಣ ಹಾಗೂ ಸರಳವಾಗಿ ಇರದಂತೆ ಪಾಸ್’ವರ್ಡ್ ಹಾಕುವುದನ್ನು ರೂಡಿ ಮಾಡಿಕೊಳ್ಳಿ. ಆನ್‌ಲೈನ್ ಬ್ಯಾಂಕ್ ಆಗಿರಬಹುದು, ಇ-ಕಾಮರ್ಸ್, ಜಿ-ಮೇಲ್ ಅಥವಾ ಸೋಷಿಯಲ್ ಮೀಡಿಯಾ ಯಾವುದೇ ತಾಣದಲ್ಲಿ ಅತ್ಯುತ್ತಮ ಪಾಸ್‌ವರ್ಡ್‌ಗಳನ್ನು ಇಡುವ ಮೂಲಕ ಸುರಕ್ಷಿತವಾಗಿರಿ.

Leave A Reply

Your email address will not be published.