ಥ್ಯಾಂಕ್ಸ್​ ಹೇಳುವ ಮೂಲಕ ದಂಪತಿಗಳು ಒಂದಾಗ್ಬೋದು ಗೊತ್ತಾ?

ಧನ್ಯವಾದ ಅಥವಾ ಕೃತಜ್ಞತೆ ತುಂಬಾ ಚಿಕ್ಕ ಪದವಾಗಿರಬಹುದು, ಆದರೆ ಇದು ಅದೆಷ್ಟೋ ಬಂಧಗಳನ್ನು ಗಟ್ಟಿಗೊಳಿಸುತ್ತದೆ, ಮುನಿಸುಗಳನ್ನು ದೂರು ಮಾಡುತ್ತದೆ, ಪ್ರೀತಿ ಪಾತ್ರರನ್ನು ಹತ್ತಿರ ತರುತ್ತದೆ, ಸಂಬಂಧಗಳನ್ನು ಹದಗೊಳಿಸುತ್ತದೆ. ಇಷ್ಟೆಲ್ಲಾ ಪ್ರಯೋಜನ ಇದೆ ನೋಡಿ ಈ ಒಂದು ಪದದಿಂದ. ಇಷ್ಟೇ ಅಲ್ಲಾ ಧನ್ಯವಾದ ಅಥವಾ ಕೃತಜ್ಞತೆಯನ್ನು ಒಬ್ಬರಿಗೆ ತೋರುವುದರಿಂದ ಅದು ನಮ್ಮ ವ್ಯಕ್ತಿತ್ವವವನ್ನು ಸಹ ತೋರಿಸುತ್ತದೆ.

ಯಾರಿಂದಲಾದರೂ ಸಹಾಯ ಪಡೆದರೆ, ಒಬ್ಬರಿಂದ ಏನನ್ನಾದರೂ ಪಡೆದುಕೊಂಡರೆ ಅವರಿಗೆ ಪ್ರೀತಿಯ ಸಂಕೇತವಾಗಿ ಈ ಧನ್ಯವಾದ ಸಲ್ಲಿಸುವುದು ನಿಮ್ಮ ಸ್ವಭಾವವನ್ನು ತೋರಿಸುತ್ತದೆ. ಇದು ಸ್ನೇಹಿತರ ಮಧ್ಯೆ ಇರಬಹುದು, ಸಂಬಂಧಿಕರು, ಪ್ರೀತಿ ಪಾತ್ರರು, ಇಲ್ಲ ಅಪರಿಚಿತರು ಅಷ್ಟೇ ಯಾಕೆ ಅನ್ನ ನೀಡುವ ರೈತರಿಗೆ, ನಮ್ಮನ್ನು ಕಾಯುವ ಸೈನಿಕರಿಗೂ ಸಹ ನಮ್ಮ ಧನ್ಯವಾದವನ್ನು ತಿಳಿಸಬಹುದು.

ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಧನ್ಯವಾದ – ಅಧ್ಯಯನ

ಹೊಸ ಸಂಶೋಧನೆಯೊಂದು ಧನ್ಯವಾದವನ್ನು ಹೇಳುವುದರಿಂದ ಸಂಬಂಧ ಹಾಳಾಗುವುದಿಲ್ಲ ಎಂದು ಹೇಳಿದೆ. ವಿಶೇಷವಾಗಿ ಗಂಡ-ಹೆಂಡತಿ ಅಥವಾ ನಿಮ್ಮ ಪಾಟ್ನರ್‌ಗೆ ಕೃತಜ್ಞತೆ ಸಲ್ಲಿಸುವುದರಿಂದ ನಿಮ್ಮ ಪ್ರೀತಿ ಮತಷ್ಟು ಗಟ್ಟಿಯಾಗುತ್ತದೆ, ಸಂಘರ್ಷ ಮತ್ತು ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಸಂಬಂಧಗಳನ್ನು ಬಲಪಡಿಸುತ್ತದೆ ಮತ್ತು ಸಂಬಂಧದ ತೃಪ್ತಿ ಮತ್ತು ಬದ್ಧತೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಪರಸ್ಪರ ಒಬ್ಬರಿಗೊಬ್ಬರು ಕೃತಜ್ಞತೆಯನ್ನು ವಿನಿಮಯ ಮಾಡಿಕೊಳ್ಳುವುದರಿಂದ ಅವರ ಸಂಬಂಧಗಳು ಉತ್ತಮವಾಗಿರುತ್ತವೆ ಮತ್ತು ವೈವಾಹಿಕ ಜೀವನ ಉತ್ತಮವಾಗಿ ಸಾಗುತ್ತದೆ ಎಂದು ಸಂಶೋಧನೆ ಹೇಳಿದೆ.

ಹೇಗೆ ಸಮೀಕ್ಷೆ ನಡೆಯಿತು?

ಸಂಶೋಧಕ ಅಲೆನ್ ಡಬ್ಲ್ಯೂ ಬಾರ್ಟನ್ ನೇತೃತ್ವದಲ್ಲಿ ನಡೆದ ಸಂಶೋಧನೆಯು ಕೃತಜ್ಞತೆ ಹೇಳುವುದರಿಂದ ಸಂಬಂಧ ಸದೃಢವಾಗಿರುತ್ತದೆ ಎಂದಿದೆ. ಜಾರ್ಜಿಯಾದಲ್ಲಿನ ಸಣ್ಣ ಗ್ರಾಮೀಣ ಸಮುದಾಯಗಳಲ್ಲಿ ವಾಸಿಸುವ ಮಧ್ಯವಯಸ್ಕ ಜನರು ಈ ಸಂಶೋಧನಾ ಅಧ್ಯಯನದಲ್ಲಿ ಹೆಚ್ಚಾಗಿ ಭಾಗವಹಿಸಿದ್ದರು.

ಭಾಗವಹಿಸಿದವರಲ್ಲಿ ಹೆಚ್ಚಿನವರು ಉದ್ಯೋಗದಲ್ಲಿದ್ದರೂ ಸುಮಾರು 66% ದಂಪತಿಗಳು ಜಂಟಿ ಆದಾಯವನ್ನು ಹೊಂದಿದ್ದರು. ಅಧ್ಯಯನದಲ್ಲಿ ಭಾಗಿಯಾಗಿದ್ದ ದಂಪತಿಗಳು ಸುಮಾರು ಹತ್ತು ವರ್ಷಗಳ ವೈವಾಹಿಕ ಜೀವನದಲ್ಲಿ ಇದ್ದವರಾಗಿದ್ದರು. ಈ ಎಲ್ಲಾ ಸಮೀಕ್ಷೆ ಸುಮಾರು 15 ತಿಂಗಳ ಅವಧಿಯಲ್ಲಿ ನಡೆಯಿತು.

ಅಧ್ಯಯನದಲ್ಲಿ ದಂಪತಿಗಳಿಗೆ ಮೂರು ಸಮೀಕ್ಷೆಗಳನ್ನು ನೀಡಲಾಯಿತು. ಮೊದಲಿಗೆ ಜಗಳವನ್ನು ಹೇಗೆ ನಿಭಾಯಿಸಿಸುತ್ತಾರೆ, ಒಬ್ಬರಿಗೊಬ್ಬರು ಎಷ್ಟು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅವರ ಪಾಲುದಾರರು ಅವರಿಗೆ ಎಷ್ಟು ಕೃತಜ್ಞತೆಯನ್ನು ತೋರಿಸುತ್ತಾರೆ ಎಂದು ಕೇಳಲಾಯಿತು.

316 ಆಫ್ರಿಕನ್ ಅಮೇರಿಕನ್ ದಂಪತಿಗಳ ಸಂಬಂಧಗಳ ಮೇಲೆ ವ್ಯಕ್ತಪಡಿಸಿದ ಕೃತಜ್ಞತೆಯ ಪರಿಣಾಮಗಳು ಒಬ್ಬರ ಪಾಲುದಾರರಿಗೆ ಮೆಚ್ಚುಗೆಯನ್ನು ತಿಳಿಸುವುದು, ಮೌಲ್ಯಯುತ ಮತ್ತು ಮೆಚ್ಚುಗೆಯ ಭಾವನೆ ಸಂಬಂಧವನ್ನು ಗಟ್ಟಿ ಮಾಡುತ್ತದೆ ಎಂದಿದೆ. 15 ತಿಂಗಳ ಅವಧಿಯಲ್ಲಿ, ಬಾರ್ಟನ್ ಅವರ ತಂಡವು 316 ಆಫ್ರಿಕನ್ ಅಮೇರಿಕನ್ ದಂಪತಿಗಳ ಸಂಬಂಧಗಳ ಮೇಲೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಪರಿಣಾಮಗಳನ್ನು ಪರಿಶೀಲನೆ ನಡೆಸಿದೆ.

“ಈ ಅಧ್ಯಯನವು ನಿಜವಾಗಿಯೂ ಸಂಬಂಧಗಳಲ್ಲಿ ಕೃತಜ್ಞತೆಯನ್ನು ಅರ್ಥಮಾಡಿಕೊಳ್ಳಲು ಪ್ರೇರೇಪಿಸಲ್ಪಟ್ಟಿದೆ. ಸವಾಲುಗಳು ಮತ್ತು ಕಷ್ಟಗಳಿಂದ ದಂಪತಿಗಳನ್ನು ರಕ್ಷಿಸಲು, ಅದು ನಕಾರಾತ್ಮಕ ಸಂವಹನ ಅಥವಾ ಆರ್ಥಿಕ ಒತ್ತಡದಂತಹ ಸ್ಥಿತಿಗಳಿಂದ ಹೊರಬರಲು ಧನ್ಯವಾದ ಧನಾತ್ಮಕವಾಗಿ ಕೆಲಸ ಮಾಡುತ್ತದೆ” ಎಂದಿದ್ದಾರೆ ಬಾರ್ಟನ್. ಮೊದಲಿನ ಸಂಶೋಧನೆ ಕೃತಜ್ಞತೆಯ ಬಗ್ಗೆ ಹೇಳಿದರೆ, ನಂತರದ ಸಂಶೋಧನೆ ದಂಪತಿಗಳು ಒಬ್ಬರಿಗೊಬ್ಬರು ಮೆಚ್ಚುಗೆ ವ್ಯಕ್ತಪಡಿಸುವ ರೀತಿ ಕೂಡ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದಿದೆ.

ಬಾರ್ಟನ್ ಇಲಿನಾಯ್ಸ್ ಅರ್ಬಾನಾ-ಚಾಂಪೇನ್ ವಿಶ್ವವಿದ್ಯಾಲಯದಲ್ಲಿ ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನದ ಪ್ರಾಧ್ಯಾಪಕರಾಗಿದ್ದಾರೆ. ಈ ಅಧ್ಯಯನವನ್ನು ಸೋಶಿಯಲ್‌ ಮತ್ತು ಪರ್ಸನಲ್‌ ರಿಲೇಷನ್‌ಶಿಪ್‌ ಜರ್ನಲ್‌ನಲ್ಲಿ ಪ್ರಕಟ ಮಾಡಲಾಗಿದೆ. ಪ್ರಸ್ತುತ ಅಧ್ಯಯನವು 2015ರ ಬಾರ್ಟನ್ ನೇತೃತ್ವದಲ್ಲಿ ವೈವಾಹಿಕ ಗುಣಮಟ್ಟದ ಮೇಲೆ ಆರ್ಥಿಕ ಸಂಕಷ್ಟದ ಪರಿಣಾಮಗಳನ್ನು ಪರಿಶೀಲಿಸಿದೆ.

Leave A Reply

Your email address will not be published.