ಎಪಿಕ್ ಕಾರ್ಡ್ ಗೆ ‘ಆಧಾರ್ ‘ ಜೋಡಿಸಿ

ಗದಗದಲ್ಲಿ ಮತದಾನ ಗುರುತಿನ ಚೀಟಿಗೆ ಆಧಾರ್‌ ಲಿಂಕ್‌ ಮಾಡಿಸುವ ಮೂಲಕ ನಿಖರ ಮತದಾರರ ಪಟ್ಟಿ ತಯಾರಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಗದಗದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವೈಶಾಲಿಯವರು ಮಾಹಿತಿ ನೀಡಿದ್ದು, ಬಿಎಲ್‌ಒಗಳು ಮತದಾರರ ಪಟ್ಟಿ ಪರಿಷ್ಕರಣೆಗೆ ಮನೆ ಬಾಗಿಲಿಗೆ ಬಂದಾಗ ನಿಖರ ಮಾಹಿತಿ ನೀಡುವ ಜೊತೆಗೆ ದೃಢೀಕರಣಕ್ಕೆ ಬೇರೆ ದಾಖಲೆ ನೀಡುವ ಬದಲು ಆಧಾರ್‌ ನೀಡಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಮತದಾನ ಚೀಟಿಗೆ ಆಧಾರ್‌ ಲಿಂಕ್‌ ಕಡ್ಡಾಯವಲ್ಲದಿದ್ದರು ಕೂಡ ಆಧಾರ್ ಸಂಖ್ಯೆ ಜೋಡಣೆ ಯಿಂದ ಮತದಾರರ ಪಟ್ಟಿಯನ್ನು ನಿಖರವಾಗಿ ಪರಿಷ್ಕರಿಸಲು ಸಾಧ್ಯವಾಗಲಿದೆ. ಮತದಾರ ಪಟ್ಟಿ ಪರಿಷ್ಕರಣೆಯ ಪೂರ್ವಾವಧಿಯಲ್ಲಿ ಒಟ್ಟು 16,256 ಮತದಾರರ ಹೆಸರನ್ನು ಕೈ ಬಿಡಲಾಗಿದ್ದು, ಹೊಸದಾಗಿ 9,246 ಮತದಾರರ ಹೆಸರನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ದೃಢೀಕರಣ ಸಂಬಂಧ ಆಧಾರ್ ಅಥವಾ ಇನ್ನಿತರೆ 11 ದಾಖಲೆಗಳನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಿಸುವ ಪ್ರಕ್ರಿಯೆ ನಡೆಯುತ್ತಿರುವ ಕುರಿತು ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

ಕರಡು ಪಟ್ಟಿ ಪ್ರಕಟಣೆ ಪೂರ್ವದಲ್ಲಿ ಜಿಲ್ಲೆಯಲ್ಲಿ ಒಟ್ಟು 959 ಮತಗಟ್ಟೆಗಳಿದ್ದರೆ, ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯದ ಬಳಿಕ 1,500 ಮತದಾರರ ಒಳಗೆ ಇದ್ದ ನಾಲ್ಕು ಮತಗಟ್ಟೆಗಳನ್ನು ಕಡಿಮೆಗೊಳಿಸಲಾಗಿದೆ. ಇದರ ಜೊತೆಗೆ 1 ಮತಗಟ್ಟೆಯನ್ನು ಹೆಚ್ಚುವರಿಯಾಗಿ ಸ್ಥಾಪಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 956 ಮತಗಟ್ಟೆಗಳಿದ್ದು, ಮತಗಟ್ಟೆಗಳಿಗೆ ಬಿಎಲ್‌ಒಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ.

2023ನೇ ವರ್ಷದ ಅರ್ಹತಾ ದಿನಾಂಕಗಳಾದ ಏಪ್ರಿಲ್ 1, ಜುಲೈ 1 ಅಥವಾ ಅಕ್ಟೋಬರ್ 1ಕ್ಕೆ 18 ವರ್ಷ ವಯಸ್ಸು ಪೂರ್ಣಗೊಳ್ಳುವವರು, ಕರಡು ಮತದಾರ ಪಟ್ಟಿ ಪ್ರಕಟಣೆ ದಿನಾಂಕದಿಂದ ನಮೂನೆ 6 ರಲ್ಲಿ ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಅರ್ಜಿಗಳನ್ನು ಆಯಾ ತ್ರೈಮಾಸಿಕಗಳಲ್ಲಿ ಅರ್ಹತೆಯನ್ನು ಪರಿಶೀಲಿಸಿ ನೋಂದಣಿ ಮಾಡಿಕೊಳ್ಳಲಾಗುತ್ತದೆ.

ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ನಮೂನೆ 7 ರಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಮತದಾರರ ವಿಳಾಸ ಬದಲಾವಣೆ ಇದ್ದಲ್ಲಿ, ಯಾವುದೇ ತಿದ್ದುಪಡಿಗಳಿಲ್ಲದೇ ಬದಲಿ ಮತದಾರರ ಗುರುತಿನ ಚೀಟಿಯ ಅವಶ್ಯಕತೆ ಇದ್ದಲ್ಲಿ ನಮೂನೆ 8ರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಈ ನಡುವೆ , ಜಿಲ್ಲಾಡಳಿತದಿಂದ ನ.20 ಹಾಗೂ ಡಿಸೆಂಬರ್ 3 ಮತ್ತು 4ರಂದು ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ವಿಶೇಷ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ತಿಳಿಸಿದ್ದಾರೆ.’ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಅರ್ಹರು ಹಾಗೂ 18 ವರ್ಷ ತುಂಬಿದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ನಮೂನೆ 6ರಲ್ಲಿ ಸಂಬಂಧಿಸಿದ ಬಿಎಲ್‌ಒಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

Leave A Reply

Your email address will not be published.