‘ವರಾಹ ರೂಪಂ’ ಹಾಡಿನ ಕಾಪಿ ವಿವಾದ | ಇದನ್ನು ಓದಿ ನಂತರ ವಿಮರ್ಶೆ ಮಾಡಿ!

‘ಕಾಂತಾರ’ ಇದೀಗ ಹಲವಾರು ರೀತಿಯ ವಿವಾದಕ್ಕೆ ಸಿಲುಕಿಕೊಂಡಿದೆ. ಅದರಲ್ಲಿ ಕಾಪಿರೈಟ್‌ ವಿವಾದವೂ ಒಂದಾಗಿದ್ದು, ಇದೀಗ ನ್ಯಾಯಾಲಯದ ಆದೇಶದ ಮೇರೆಗೆ ಚಿತ್ರತಂಡವು ಯೂಟ್ಯೂಬ್‌ ಹಾಗೂ ಮ್ಯೂಸಿಕ್‌ ಆ್ಯಪ್ ಗಳಿಂದ ‘ವರಾಹ ರೂಪಂ’ ಹಾಡನ್ನು ಡಿಲೀಟ್‌ ಮಾಡುವಂತಾಗಿದೆ. ಸಿನಿಮಾದಲ್ಲಿ ಈ ಹಾಡಿನ ಪಾತ್ರ ಬಹಳಷ್ಟಿತ್ತು.

ಮಲಯಾಳಂನ ತೈಕ್ಕುಡಂ ಬ್ರಿಡ್ಜ್‌ ತಮ್ಮ ‘ನವರಸಂ’ ಹಾಡಿನ ಟ್ಯೂನ್ ಕದ್ದು ‘ಕಾಂತಾರ’ ತಂಡ ‘ವರಾಹ ರೂಪಂ’ ಹಾಡು ಮಾಡಿದೆ ಎಂದು ಆರೋಪಿಸಿತ್ತು. ಈ ಬಗ್ಗೆ ಹೊಂಬಾಳೆ ಸಂಸ್ಥೆ ಕೂಡ ಕಾನೂನು ಹೋರಾಟ ನಡೆಸುತ್ತಿದೆ. ಇನ್ನೂ, ಈ ಹಾಡಿನ ವಿಚಾರವಾಗಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಎರಡರ ವ್ಯತ್ಯಾಸವನ್ನು ಹೇಳಿದ್ದರು. ಸ್ಟೈಲ್ ವಿಚಾರದಲ್ಲಿ ‘ನವರಸಂ’ ಸಾಂಗ್‌ ಕೇಳಿ ಇನ್‌ಸ್ಪೈರ್ ಆಗಿರೋದು ನಿಜ. ಅದನ್ನು ಹೊರತುಪಡಿಸಿ ಆ ಹಾಡಿಗೂ ಈ ಹಾಡಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಸಂಗೀತದ ಸೂಕ್ಷ್ಮಗಳು ಗೊತ್ತಿರುವವರಿಗೆ ಇದು ತಿಳಿಯುತ್ತದೆ ಎಂದಿದ್ದರು.

ಸಂಗೀತದ ಬಗ್ಗೆ ಚೆನ್ನಾಗಿ ತಿಳಿದಿರುವ, ಸಂಗೀತ ಕ್ಷೇತ್ರದಲ್ಲಿ ಕಾರ್ಯವಹಿಸುತ್ತಿರುವ ವಿಶ್ವೇಶ್ ಭಟ್ ಅವರು ‘ನವರಸಂ’ ಹಾಗೂ ‘ವರಾಹ ರೂಪಂ’ ಹಾಡುಗಳ ನಡುವಿನ ವ್ಯತ್ಯಾಸ ಹಾಗೂ ಈ ಹಾಡು ಕಾಪಿ ಹೌದೋ, ಅಲ್ಲವೋ ಎಂಬುದನ್ನು ವಿವರಿಸಿದ್ದಾರೆ.

ಈ ಎರಡೂ ಹಾಡುಗಳ ಗುಣಲಕ್ಷಣಗಳಾದ, ರಾಗ, ತಾಳ, ಟ್ಯೂನ್, ವಾದ್ಯಗಳು, ಪ್ರಕಾರ ಹೀಗೆ ಹಲವು ರೀತಿಯಲ್ಲಿ ವಿಶ್ವೇಶ್ ಭಟ್ ಎರಡು ಹಾಡುಗಳ ನಡುವಿನ ವ್ಯತ್ಯಾಸವನ್ನು ತಿಳಿಸಿ ಹೇಳಿದ್ದಾರೆ. ಎರಡೂ ಹಾಡುಗಳಲ್ಲಿ ಕಕಕಾಂಗಿ ರಾಗ, ತೋಡಿ ರಾಗ, ಭೈರವಿ ರಾಗದ ಛಾಯೆ ಇದೆ. ಅಷ್ಟೇ ಅಲ್ಲದೆ ಈ ಎರಡೂ ಹಾಡಿನ ಎಮೋಷನ್‌ ಕೂಡ ಒಂದೇ ರೀತಿ ಇದೆ. ಸಂತೋಷ, ದುಃಖ, ಗಾಂಭೀರ್ಯ ಇದೆ. ಹಾಗಾಗಿ ‘ನವರಸಂ’ ಹಾಗೂ ‘ವರಾಹ ರೂಪಂ’ ಒಂದೇ ರೀತಿ ಇದೆ ಎಂದು ಅನಿಸುವುದು ಸಹಜ ಎಂದಿದ್ದಾರೆ.

ಆದರೆ 2 ಹಾಡುಗಳ ಆರಂಭ ಬೇರೆ ಬೇರೆಯಾಗಿದೆ. ನೋಟ್ಸ್ ಪ್ರಕಾರ ಹೇಳುವುದಾದರೆ ‘ವರಾಹ ರೂಪಂ’ ಹಾಡು ಪಪಪದಮರಿಮಪಪದಮಪಮ ಮೊದಲ ಸಾಲು ಹಾಗೂ ದಸಸಸಮರಿರಿಸ ಎರಡನೇ ಸಾಲಿನಲ್ಲಿ ಬರುತ್ತದೆ. ‘ನವರಸಂ’ ಹಾಡು ಪಪಮರಿರಿರಿರಿಸ ದಿಂದ ಆರಂಭ ಆಗುತ್ತದೆ. ಹಾಗೇ ಈ ಆರಂಭ ಮತ್ತೊಂದು ಹಾಡಿನಂತೆ ಇದೆ. 2 ಹಾಡುಗಳ ಆರಂಭವೇ ವಿಭಿನ್ನವಾಗಿದೆ. ರಾಗದ ಫ್ಲೋ ಒಂದೇ ರೀತಿ ಇರಬಹುದು, ಆದರೆ ಟ್ಯೂನ್ ಕಂಪ್ಲೀಟ್ ಡಿಫ್‌ರೆಂಟ್ ಇದೆ ಎಂದು ವಿವರಿಸಿದ್ದಾರೆ.

ಅಷ್ಟೇ ಅಲ್ಲದೆ, ನವರಸಂ’ ಅಲ್ಲಿ ಪಿಯಾನೋ ಬಳಸಿದ್ದಾರೆ ‘ವರಾಹ ರೂಪಂ’ ಅಲ್ಲೂ ಅದೇ ಬಳಸಿದ್ದಾರೆ. ಅಲ್ಲಿ ವಯಲಿನ್ ಬಳಸಿದ್ದರೆ ಇಲ್ಲಿ ಶಹನಾಯ್ ಬಳಸಿದ್ದಾರೆ. ಎರಡೂ ಕೂಡ ಫ್ಯಾಥೋ ಫೀಲ್ ಕೊಡುವಂತದ್ದು. ಇನ್ನೂ, ವಾದ್ಯಗಳ ವಿಚಾರಕ್ಕೆ ಬಂದರೆ ಆರಂಭದಿಂದಲೇ ಬೀಟ್ ಶುರುವಾಗುತ್ತದೆ. ಎರಡೂ ಹಾಡಿನಲ್ಲೂ ಡ್ರಮ್ಸ್, ಚಂಡೇ ಬಳಸಿದ್ದಾರೆ. ಜೊತೆಗೆ ಗಿಟಾರ್ ಬಳಸಿರೋದು ಒಂದೇ ತರಹ ಕಾಣಿಸುತ್ತದೆ. ಡ್ರಮ್ಸ್, ಗಿಟಾರ್, ಚಂಡೇ ಜೊತೆಗೆ ರಾಗದ ಛಾಯೆ ಒಂದೇ ತರ ಇರುವುದರಿಂದ ಎರಡೂ ಹಾಡುಗಳು ಒಂದೇ ಎನ್ನಿಸಬಹುದು. ಆದರೆ ಒಂದೇ ಅಲ್ಲ.

‘ವರಾಹ ರೂಪಂ’ ತುಳುನಾಡಿನ ಹಿನ್ನಲೆಯಲ್ಲಿ ಕಟ್ಟಿಕೊಟ್ಟಿರುವ ಹಾಗಾಗಿದೆ. ಆದರೆ ‘ನವರಸಂ’ ಕೇರಳದ್ದಾಗಿದೆ. ಎರಡೂ ಕಲ್ಚರ್‌ಗೆ ಬಹಳ ಸಾಮ್ಯತೆ ಇದೆ. ಭೂತಕೋಲದಂತೆಯೇ ಅಲ್ಲಿಯೂ ಒಂದು ಆಚರಣೆ ಇದೆ. ಇಲ್ಲಿ ಯಕ್ಷಗಾನ ಇದ್ದರೆ ಅಲ್ಲಿ ಕತ್ತಕ್ಕಳಿ ಇದೆ. ಇನ್ನು ಸಾಹಿತ್ಯದ ವಿಚಾರಕ್ಕೆ ಬಂದರೆ ಪದಗಳು ‘ವರಾಹ ರೂಪಂ’ ಹಾಗೂ ‘ನವರಸಂ’ ಹೀಗೆ ಕೆಲವು ಪದಗಳು ಅಂ ಅಂ ಎಂದು ಮುಕ್ತಾಯವಾಗುತ್ತದೆ. ಹಾಗಾಗಿ ಎರಡೂ ಹಾಡುಗಳು ಒಂದೇ ಎಂದು ಅನ್ನಿಸಬಹುದು. ಆದರೆ ಯಾವುದೇ ಕಾರಣಕ್ಕೂ ‘ವರಾಹ ರೂಪಂ’ ಮಲಯಾಳಂನ ‘ನವರಸಂ’ ಕಾಪಿ ಅಲ್ಲ ಎಂದು ತಿಳಿಸಿ ಹೇಳಿದ್ದಾರೆ.

Leave A Reply

Your email address will not be published.