Hot Oil Massage : ಉಗುರು ಬೆಚ್ಚಗಿನ ಎಣ್ಣೆಯಿಂದ ತಲೆಯ ಬುಡಕ್ಕೆ ಮಸಾಜ್ ಮಾಡಿ, ಈ ಸಮಸ್ಯೆಗಳನ್ನು ದೂರ ಮಾಡಿ!

ದೈನಂದಿನ ಒತ್ತಡದ ಜೀವನಶೈಲಿಯಿಂದಾಗಿ ಮನಸ್ಸಿನ ಜೊತೆಗೆ ದೇಹದ ಮೇಲೆ ಪರಿಣಾಮ ಬೀರುತ್ತವೆ. ನಾವು ಅತಿಯಾದ ಚಿಂತೆಯಲ್ಲಿ ಮುಳುಗಿದಾಗ, ವಾತಾವರಣದ ಬದಲಾವಣೆ ಹೀಗೆ ಕೆಲವೊಂದು ಕಾರಣಗಳಿಗೆ ಕೂದಲು ಉದುರುತ್ತದೆ. ಉಗುರು ಬೆಚ್ಚಗಿನ ಎಣ್ಣೆಯಿಂದ ತಲೆಯ ಬುಡಕ್ಕೆ ಮಸಾಜ್ ಮಾಡಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

ಎಣ್ಣೆಯಿಂದ ತಲೆಗೆ ಮಸಾಜ್ ಮಾಡುವುದರಿಂದ ವಿಶ್ರಾಂತಿ ಸಿಗುತ್ತದೆ. ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಆರೋಗ್ಯಕರ ಕೂದಲು ಬೆಳೆಯುತ್ತದೆ. ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡುವುದು ನಮ್ಮ ಪೂರ್ವಜರ ಕಾಲದಿಂದಲೂ ಮಾಡಿಕೊಂಡು ಬರಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ‘ಹಾಟ್ ಆಯಿಲ್ ಮಸಾಜ್’ ಎಂಬ ಚಿಕಿತ್ಸೆ ಸಹ ನಡೆಯುತ್ತಿದೆ. ಯಾವುದೇ ರೀತಿಯ ಕೂದಲನ್ನು ಹೊಂದಿರುವವರು ಯಾರು ಬೇಕಾದರು ಹಾಟ್ ಆಯಿಲ್ ಮಸಾಜ್​ನ್ನು ಬಳಸಬಹುದು.

ಬಿಸಿ ಎಣ್ಣೆಯಿಂದ ಪದೇ ಪದೇ ಮಸಾಜ್ ಮಾಡುವುದರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತದೆ. ಕೂದಲು ತೇವಾಂಶವನ್ನು ಕಳೆದುಕೊಂಡಾಗ ಸಾಮಾನ್ಯವಾಗಿ ಮಂದವಾಗಿ ಕಾಣುತ್ತದೆ. ಇಂತಹ ಕೂದಲಿಗೆ ಪ್ರತಿನಿತ್ಯ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಕೂದಲು ಮೃದು ಹಾಗೂ ಬಲಿಷ್ಠವಾಗುತ್ತದೆ.

‘ಹಾಟ್ ಆಯಿಲ್ ಮಸಾಜ್’ ಎಂದರೆ ನೆತ್ತಿಯನ್ನು ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡುವುದು. ಆದರೆ ಅತಿಯಾಗಿ ಬಿಸಿಯಾದ ಎಣ್ಣೆಯು ಕೂದಲನ್ನು ಹಾನಿಗೊಳಿಸುತ್ತದೆ. ಹಾಗಾಗಿ ಎಣ್ಣೆಯನ್ನು ಹೆಚ್ಚು ಬಿಸಿ ಮಾಡಬೇಡಿ. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆ ಮತ್ತು ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ.

ಎಣ್ಣೆ ಮಸಾಜ್ ಮಾಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಎಣ್ಣೆಯಿಂದ ಮಸಾಜ್ ಮಾಡುವಾಗ ನೆತ್ತಿಯ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುವುದರಿಂದ ಕೂದಲು ಉದುರುವುದು ಹೆಚ್ಚಾಗಬಹುದು. ನೆತ್ತಿಯನ್ನು ಮೃದುವಾಗಿ ಮಸಾಜ್ ಮಾಡುವುದರಿಂದ ಕೂದಲಿನ ಕೋಶಗಳು ಬಲಗೊಳ್ಳುತ್ತವೆ. ಹಾಗೂ ಕೂದಲಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಕೂದಲು ದಪ್ಪವಾಗಿ ಕಾಣುವಂತೆಯೂ ಮಾಡುತ್ತದೆ.

Leave A Reply

Your email address will not be published.