ವೈದ್ಯಕೀಯ ಲೋಕದಲ್ಲಿ ಹೊಸ ಚಮತ್ಕಾರ | ಕೈ ಮೇಲೆಯೇ ಬೆಳೆದ ಬದಲಿ ಮೂಗಿನ ರಚನೆಯನ್ನು ಮುಖಕ್ಕೆ ಕಸಿ!

ಪ್ರಪಂಚ ಎಷ್ಟು ವಿಸ್ಮಯ ಅಂದ್ರೆ ಇಲ್ಲಿ ಅಸಾಧ್ಯ ಎನಿಸುವ ಅದೆಷ್ಟೋ ಘಟನೆಗಳು ಸಾಧ್ಯವಾಗುತ್ತದೆ. ಕೆಲವೊಂದು ಸಲ ಅರಗಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಇಂತಹ ಅನೇಕ ಉದಾಹರಣೆಗಳು ಮನುಷ್ಯನ ಸಾವು-ಬದುಕಿನ ಹಂತದಲ್ಲಿ ನೋಡಬಹುದಾಗಿದೆ. ಅವರು ಬದುಕುವುದೇ ಅಸಾಧ್ಯ ಅಂದುಕೊಂಡಾಗ ಆರೋಗ್ಯವಾಗಿ ಎದ್ದು ಕೂತಿರೋ ಘಟನೆಗಳು ನಡೆದರೆ, ಅವರಿಗೆ ಏನೂ ಆಗುವುದಿಲ್ಲ ಅಂದ ಮರುಕ್ಷಣಕ್ಕೆ ಕಣ್ಣು ಮುಚ್ಚಿದಂತಹ ಅದೆಷ್ಟೋ ಪ್ರಕರಣಗಳು ಮನುಷ್ಯ ಜೀವನದಲ್ಲಿ ನಾವು ಕಂಡ ಕೆಲವೊಂದು ವಿಸ್ಮಯಗಳು.

ಅದರೊಂದಿಗೆ, ಇದು ಸ್ಟಾರ್ಟಪ್​ ಯುಗ. ಸಮಾಜ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಹುಡುಕಿ ದಿನಕ್ಕೊಂದು ನವೋದ್ಯಮಗಳು ಎದುರಿಗೆ ಬರುತ್ತಿದೆ. ಇಂಟರ್​ನೆಟ್ ವ್ಯಾಪಕತೆಯಿಂದ ಸಾಮಾನ್ಯರೂ ಹೇರಳವಾಗಿ ಸಿಗುವ ಜ್ಞಾನ ಸಂಪತ್ತನ್ನು ಅರ್ಜಿಸಿಕೊಳ್ಳುವುದರಿಂದ ಹೊಸ ಹೊಸ ಆಲೋಚನೆಗಳು ಉದ್ಯಮ ರೂಪ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಅದರಂತೆ, ಇಲ್ಲೊಂದು ಕಡೆ ವೈದ್ಯಕೀಯ ಲೋಕದಲ್ಲಿ ಚಮತ್ಕಾರವೊಂದನ್ನು ಸೃಷ್ಟಿ ಮಾಡಿದ್ದಾರೆ.

ಹೌದು. ಮಹಿಳೆಯ ಕೈಮೇಲೆ ಯಶಸ್ವಿಯಾಗಿ ಬೆಳೆಯಲಾದ ಬದಲಿ ಮೂಗಿನ ರಚನೆಯನ್ನು ಆಕೆಯ ಮುಖಕ್ಕೆ ಕಸಿ ಮಾಡುವ ಮೂಲಕ ಫ್ರಾನ್ಸ್ ಸರ್ಜನ್​ಗಳು ವೈದ್ಯಕೀಯ ಲೋಕದಲ್ಲಿ ಚಮತ್ಕಾರವೊಂದನ್ನು ಸೃಷ್ಟಿ ಮಾಡಿದ್ದಾರೆ. ಯಾವ ರೀತಿ ಈ ರಚನೆ ಆಯಿತು? ಯಾಕಾಗಿ ಮಾಡಿದರು ಎಂಬುದನ್ನು ಮುಂದೆ ಓದಿ..

ಈ ಚಿಕಿತ್ಸೆ ಪಡೆದುಕೊಂಡಾಕೆ ಟೌಲೌಸ್ ಮೂಲದ ಮಹಿಳೆ. ಆಕೆ ಮೂಗಿನ ಕ್ಯಾವಿಟಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, 2013ರಿಂದಲೂ ರೆಡಿಯೋಥೆರಪಿ (Radiotherapy) ಮತ್ತು ಕಿಮೋಥೆರಪಿ​ (Chemotherapy) ಚಿಕಿತ್ಸೆಯನ್ನು ಪಡೆಯುತ್ತಿದ್ದಳು. ಇದರ ಪರಿಣಾಮ ಆಕೆ ತನ್ನ ಮೂಗಿನ ಬಹುತೇಕ ಭಾಗವನ್ನು ಕಳೆದುಕೊಂಡಿದ್ದಳು. ಹೀಗಾಗಿ ವರ್ಷಗಳ ಕಾಲ ಆಕೆ ದೇಹದ ಪ್ರಮುಖ ಅಂಗಗಳಲ್ಲಿ ಒಂದಾದ ಮೂಗು ಇಲ್ಲದೆಯೇ ಬದುಕಿದ್ದಳು. ಇದೀಗ ಫ್ರಾನ್ಸ್​ ಸರ್ಜನ್​ಗಳು ವೈದ್ಯಕೀಯ ಲೋಕದಲ್ಲಿ ಅಚ್ಚರಿಯನ್ನೇ ಸೃಷ್ಟಿ ಮಾಡಿದ್ದು, ಮಹಿಳೆಯ ಕೈ ಮೇಲೆಯೇ ಬೆಳೆಯಲಾದ ಬದಲಿ ಮೂಗಿನ ರಚನೆಯನ್ನು ಆಕೆಗೆ ಕಸಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಬದಲಿ ಮೂಗು ಅಳವಡಿಸುವ ಪ್ರಕ್ರಿಯೆಯಲ್ಲಿ ವೈದ್ಯರು ಮೈಕ್ರೊಸರ್ಜರಿಯನ್ನು ಬಳಸಿದ್ದು, ತೋಳಿನ ಚರ್ಮದಲ್ಲಿನ ರಕ್ತನಾಳಗಳನ್ನು ಮಹಿಳೆಯ ಮುಖದ ರಕ್ತನಾಳಗಳಿಗೆ ಸಂಪರ್ಕಿಸಿದ್ದಾರೆ. ಆಪರೇಷನ್​​ ನಡೆದ 10 ದಿನಗಳು ಮತ್ತು ಮೂರು ವಾರಗಳ ಕಾಲ ಪ್ರತಿಜೀವಕಗಳನ್ನು ಮಹಿಳೆಗೆ ನೀಡಿದ ಬಳಿಕ ಇದೀಗ ಆಕೆ ಆರಾಮಾಗಿದ್ದಾಳೆ.

ಈವನಿಂಗ್​ ಸ್ಟ್ಯಾಂಡರ್ಡ್ ಮಾಧ್ಯಮದ ಪ್ರಕಾರ, ಕಾರ್ಟಿಲೆಜ್ (ಮೃದು ಎಲುಬು) ಅನ್ನು ಬದಲಿಸಲು 3D-ಮುದ್ರಿತ ಜೈವಿಕ ವಸ್ತುಗಳಿಂದ ತಯಾರಿಸಿದ ಕಸ್ಟಮ್ ಮೂಗನ್ನು ಮಹಿಳೆಯ ಮುಂದೋಳಿನ ಮೇಲೆ ಅಳವಡಿಸಲಾಯಿತು. ನಂತರ ವೈದ್ಯರು ಬದಲಿ ಮೂಗನ್ನು ಮುಚ್ಚಲು ಆಕೆಯ ಚರ್ಮವನ್ನೇ ನಾಟಿ ಮಾಡಿದರು. ಅದು ಬೆಳೆಯಲು ಸುಮಾರು 2 ತಿಂಗಳ ಕಾಲಾವಕಾಶವನ್ನು ನೀಡಲಾಯಿತು. ಮೂಗಿನ ರಚನೆ ಬೆಳೆದ ಬಳಿಕ ಅದನ್ನು ಆಕೆಯ ಮುಖಕ್ಕೆ ಕಸಿ ಮಾಡಲಾಗಿದೆ.

Leave A Reply