ಕಿನ್ನಾಳ ದ ಕಲಾಕೃತಿಯನ್ನು ಉಡುಗೊರೆಯಾಗಿ ಪ್ರಧಾನಿಗೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ!!

ರಾಜ್ಯ ರಾಜಧಾನಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, ವಂದೇ ಭಾರತ್‌ ಮತ್ತು ಕನ್ನಡಿಗರ ಕಾಶಿ ಯಾತ್ರೆ ರೈಲುಗಳಿಗೆ ಚಾಲನೆ, ಕನಕದಾಸ ಪ್ರತಿಮೆಗೆ ವಂದನೆ ಹಾಗೂ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ.

ಕಾಶಿ ಯಾತ್ರೆ ರೈಲಿಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ನಾಡಿನ ಪ್ರಸಿದ್ಧ ಕರಕುಶಲ ಕಲೆಯಾಗಿರುವ ಕೊಪ್ಪಳ ಜಿಲ್ಲೆಯ ಕಿನ್ನಾಳದ ಸ್ಮರಣಿಕೆಯೊಂದನ್ನು ನೀಡಿದ್ದಾರೆ.

ಬೆಂಗಳೂರು-ಮೈಸೂರು-ಚೆನ್ನೈಗೆ ಸಾಗುವ ವಂದೇ ಭಾರತ್ (Vande Bharath) ರೈಲು ಮತ್ತು ಕಾಶಿ ಯಾತ್ರೆಗೆ ತೆರಳಲು ಪ್ರಯಾಣಿಕರಿಗೆ ನೆರವಾಗಲು ಸಿದ್ಧವಾಗಿರುವ ರೈಲುಗಳಿಗೆ ಮಾನ್ಯ ಪ್ರಧಾನ ಮಂತ್ರಿ ಗಳು ಚಾಲನೆ ನೀಡಿದ್ದಾರೆ.

ಈ ವೇಳೆ ಹಾಜರಿದ್ದ ಮುಜರಾಯಿ, ಹಜ್ ಮತ್ತು ವಕ್ಫ ಸಚಿವೆ ಶಶಿಕಲಾ ಜೊಲ್ಲೆ ಅವರು ಕಿನ್ನಾಳದಲ್ಲಿ ರಚಿಸಲಾದ ‘ಕಾಮಧೇನು ಕಲ್ಪವೃಕ್ಷ’ (Kamadhenu Kalpavrukhsa) ಮೂರ್ತಿಯನ್ನು ಸ್ಮರಣಿಕೆಯಾಗಿ ಗೌರವ ಪೂರ್ವಕವಾಗಿ ನೀಡಿದ್ದಾರೆ. ದೇಶದ ಪ್ರಸಿದ್ಧ ಕರಕುಶಲ ಕಲೆಗಳಲ್ಲಿ ಒಂದಾಗಿರುವ ಕಿನ್ನಾಳದ ಕಲಾಕೃತಿ ನಮ್ಮ ನಾಡಿನ ಹೆಮ್ಮೆಯಾಗಿದೆ. ಸಚಿವೆ ಉಡುಗೊರೆ ನೀಡುವ ಸಂದರ್ಭದಲ್ಲಿ ಕೇಂದ್ರದ ಕೆಲ ಸಚಿವರು ಹಾಗೂ ರಾಜ್ಯದ ಬಿಜೆಪಿ ಪಕ್ಷದ ಘಟಾನುಘಟಿ ನಾಯಕರು ಹಾಜರಿದ್ದರು.

ರಾಜ್ಯಪಾಲ ಥಾವರ್ ಚಂದ್ ಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಕಾನೂನು‌ ಮತ್ತು ಸಂಸದೀಯ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ, ಸಂಸದರಾದ ಪಿ‌.ಸಿ.ಮೋಹನ್, ತೇಜಸ್ವಿ ಸೂರ್ಯ ಇತರರು ಈ ಸಂದರ್ಭ ದಲ್ಲಿ ಭಾಗಿಯಾಗಿದ್ದರು.

ವಿಜಯನಗರ ಸಾಮ್ರಾಜ್ಯದಿಂದ ಬಂದಿರುವ ಕಲೆ:ಕಿನ್ನಾಳ ಕರಕುಶಲ ಗೊಂಬೆಗಳು ಮತ್ತು ಇತರೆ ಮೂರ್ತಿಗಳ ತಯಾರಿಕೆಗೆ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಪರಂಪರೆಯಾಗಿದೆ. ವಿಜಯನಗರ ಸಾಮ್ರಾಜ್ಯ (Vijayanagara Empire)ದ ಕಾಲದಿಂದ ಈ ಕಲೆ ಬೆಳೆದುಬಂದಿದ್ದು, ಈ ಕಲೆಯನ್ನು ಕೊಪ್ಪಳ ಜಿಲ್ಲೆಯ ಕಿನ್ನಾಳದ ಹಲವು ಕುಟುಂಬಗಳು ಇಂದಿಗೂ ಮುಂದುವರೆಸುತ್ತಾ ಬಂದಿವೆ.

ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಕಿನ್ನಾಳವು ಕರಕುಶಲ ಕಲೆಗಳ ಪ್ರವರ್ಧಮಾನ ಕೇಂದ್ರವಾಗಿದ್ದು, ಇಲ್ಲಿ ಅತ್ಯಂತ ಸೊಗಸಾದ ಮರದ ಕೆತ್ತನೆಗಳನ್ನು ಮಾಡುತ್ತಾ ಬರಲಾಗಿದೆ. ಹಂಪಿ (Hampi)ಯ ಪಂಪಾಪತೇಶ್ವರ ದೇವಾಲಯದಲ್ಲಿರುವ (Pampapateshwara Temple)ಮರದ ರಥದಲ್ಲಿ ಕೆತ್ತಲಾದ ಪ್ರಸಿದ್ಧವಾದ ಮ್ಯೂರಲ್ ವರ್ಣಚಿತ್ರಗಳು ಇವುಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಕಿನ್ನಾಳದ ಕುಶಲಕರ್ಮಿಗಳ ಪೂರ್ವಜರು ಕಲೆಯಲ್ಲಿ ನಿಪುಣರೆಂದು ರುಜುವಾತಾಗುತ್ತದೆ.

2007 ರಿಂದ ಸ್ಥಳೀಯ ವಿದ್ಯಾರ್ಥಿಗಳು ಮತ್ತು ಕುಶಲಕರ್ಮಿಗಳು ಕಿನ್ನಾಳ ಆಟಿಕೆಗಳ ಪುನಶ್ಚೇತನ ಮಾಡುವ ಪ್ರಯತ್ನದ ಫಲವಾಗಿ ಇಂದು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಿನ್ನಾಳ ಕಲಾಕೃತಿಗಳ ಮಾರಾಟ ಆಗುತ್ತಿವೆ.ಈಗ ಮೋದಿಗೆ ಕೊಡಲಾದ ಕಾಮಧೇನು ಕಲ್ಪವೃಕ್ಷ ಸ್ಮರಣಿಕೆಯನ್ನು ಕಿನ್ನಾಳ ಗ್ರಾಮದ ಕಿಶೋರ್ ಚಿತ್ರಗಾರ್ (Kishore Chitragar) ತಯಾರಿಸಿದ್ದು, ವಿಜಯನಗರ (Vijayanagara) ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಶಶಿಕಲಾ ಜೊಲ್ಲೆ (Shashikala Jolle) ಅವರು ಕಿನ್ನಾಳದ ಕಲೆಯನ್ನು ಮೆಚ್ಚಿಕೊಂಡಿದ್ದು ಅಲ್ಲದೆ, ಈ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ವತಃ ತಾವೇ ಕಿಶೋರ್ ಅವರಿಗೆ ಫೋನ್ ಮಾಡಿ ಸ್ಮರಣಿಕೆ ತಯಾರು ಮಾಡಲು ಹೇಳಿದ್ದಾರೆ. ಹೀಗಾಗಿ, ಕೇವಲ 7 ದಿನದಲ್ಲಿ ಈ ಸ್ಮರಣಿಕೆಯನ್ನು ಕಿಶೋರ್ ಚಿತ್ರಗಾರ್ ತಯಾರಿಸಿದ್ದು. ಇವರಿಗೆ ಬೆಂಬಲವಾಗಿ ಗಣೇಶ ಚಿತ್ರಗಾರ್, ರಾಘವೇಂದ್ರ ಚಿತ್ರಗಾರ್ ಕೂಡ ಸ್ಮರಣಿಕೆ ತಯಾರಿಕೆಗೆ ಸಾಥ್ ನೀಡಿದ್ದಾರೆ.

ಕಿನ್ನಾಳದಲ್ಲಿ ಗೊಂಬೆಗಳನ್ನು ತಯಾರಿಸಲು ಹಗುರ ಮರವನ್ನು ಬಳಸುತ್ತಾರೆ. ಮರದ ಆಟಿಕೆಗಳ ವಿವಿಧ ಭಾಗಗಳಲ್ಲಿ ಹುಣಿಸೆಯ ಬೀಜ ಮತ್ತು ಉರುಟು ಕಲ್ಲುಗಳನ್ನು ಬಳಸಲಾಗುತ್ತದೆ. ಸೆಣಬಿನ ಚಿಂದಿಗಳಿಂದ, ನೆನೆಸಿಡಲಾದ ತುಂಡುಗಳಾಗಿ, ಬೆಳ್ಳಿಯ ಬಣ್ಣದ ಒಣಗಿದ ಪುಡಿಯ, ಮತ್ತು ಮರದ ಧೂಳು ಮತ್ತು ಹುಣಿಸೆ ಹಣ್ಣಿನ ಬೀಜದ ಪೇಸ್ಟ್ ಮಿಶ್ರಣದಿಂದ ಕಿಟ್ಟ ತಯಾರಿಸಲಾಗುತ್ತದೆ. ಬೆಣಚುಕಲ್ಲಿನ ಪುಡಿಯನ್ನು ದ್ರವ ರೂಪದ ಅಂಟಿನೊಂದಿಗೆ ಮಿಶ್ರಣ ಮಾಡಿ ಚಿತ್ರದಲ್ಲಿನ ದೇಹದ ಮೇಲೆ ಅಲಂಕಾರ ಮತ್ತು ಆಭರಣದಂತೆ ಎದ್ದು ಕಾಣುವಂತೆ ಮಾಡಲು ಬಳಸಲಾಗುತ್ತದೆ.

ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಅನೇಕ ಕಲೆಗಳು ಇಂದು ಆರ್ಥಿಕ ಸಂಕಷ್ಟದ ಜೊತೆಗೆ ಬೇರೆ ಕಾರಣಗಳಿಂದ ಪಳೆಯುಳಿಕೆಗಳಂತೆ ಆಗುತ್ತಿರುವ ನಡುವೆ ಸಚಿವೆ ಶಶಿಕಲಾ ಜೊಲ್ಲೆ ಅವರು ಕಲೆಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಿರುವುದು ವಿಶೇಷ.

Leave A Reply

Your email address will not be published.